ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ಫ್ ಮಂಡಳಿ ನೆಪದಲ್ಲಿ ರೈತರ ಕೃಷಿ ಜಮೀನು, ದೇವಸ್ಥಾನ, ಮಠ-ಮಾನ್ಯಗಳ ಭೂಮಿ, ಸಾರ್ವಜನಿಕ ಆಸ್ತಿ-ಪಾಸ್ತಿ ಕಬಳಿಸುವಲ್ಲಿ, ಒಕ್ಕಲಿಗರನ್ನ ಕೊಂಡುಕೊಳ್ಳುವಲ್ಲಿ, ಹಿಂದೂಗಳ ಮೇಲೆ ಜನಾಂಗೀಯ ನಿಂದನೆ ಮಾಡುವಲ್ಲಿ ಪಾಪ ಫುಲ್ ಬ್ಯುಸಿ ಆಗಿರುವ ಸಚಿವ ಜಮೀರ್ ಅಹಮದ್ ಖಾನ್ ಅವರು ತಾವು ಒಂದು ಜಿಲ್ಲೆಯ ಉಸ್ತುವಾರಿ ಸಚಿವರು ಎನ್ನುವುದನ್ನೇ ಮರೆತು ಹೋದಂತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತರಾಟೆ ತೆಗೆದುಕೊಂಡಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೂವರು ಬಾಣಂತಿಯರ ಸರಣಿ ಸಾವು ಸಂಭವಿಸಿ ದೊಡ್ಡ ದುರಂತ ನಡೆದರೂ ಇನ್ನೂ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಿಲ್ಲೆಯ ಕಡೆ ತಲೆಯೂ ಹಾಕಿಲ್ಲ ಎಂದು ಅಶೋಕ್ ಸಚಿವ ಜಮೀರ್ ವಿರುದ್ಧ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ನವರೇ, ಜಮೀರ್ ಅಹಮದ್ ಖಾನ್ ಅವರನ್ನ ಸಂಪುಟದಿಂದ ವಜಾ ಮಾಡಲು ಇನ್ನೂ ಎಷ್ಟು ರೈತರ ಜಮೀನು ಕಬ್ಜಾ ಆಗಬೇಕು? ಇನ್ನೂ ಎಷ್ಟು ದೇವಸ್ಥಾನಗಳಿಗೆ ನೋಟಿಸ್ ಕಳುಹಿಸಬೇಕು? ಇನ್ನೂ ಎಷ್ಟು ಅನಾಹುತಗಳಾಗಿ ಇನ್ನೆಷ್ಟು ಜನ ಬಲಿಯಾಗಬೇಕು? ಎಂದು ಖಾರವಾಗಿ ಮುಖ್ಯಮಂತ್ರಿಗಳನ್ನು ಅಶೋಕ್ ಪ್ರಶ್ನಿಸಿದ್ದಾರೆ.