ಚಂದ್ರವಳ್ಳಿ ನ್ಯೂಸ್, ತುಮಕೂರು:
ಮುಂಬರುವ ಜನವರಿಯಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ ಜಿಲ್ಲೆಯಲ್ಲಿ ಆಯೋಜಿತವಾಗುತ್ತಿರುವುದು ಸಂತಸದ ಸಂಗತಿ. ಸಮ್ಮೇಳನಕ್ಕೆ ಅಗತ್ಯ ನೆರವು ನೀಡುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಕ್ರೀಡಾಕೂಟದ ಜಿಲ್ಲಾಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಬಹುಮಾನ ವಿತರಿಸಿ ಮಾತನಾಡಿ, ಜಿಲ್ಲೆಯ ಪತ್ರಕರ್ತರ ಸಂಘವು ಕ್ರಿಯಾಶೀಲವಾಗಿದೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಕ್ರೀಡಾಕೂಟದಲ್ಲಿ ಭಾಗಿಯಾದ ಕುಟುಂಬದವರು, ಮಕ್ಕಳು ಒಂದೆಡೆ ಸೇರಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಗೆ ಹೆಸರುಬರುವ ನಿಟ್ಟಿನಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರೊಡಗೂಡಿ ಸಹಕಾರ ನೀಡುವುದಾಗಿ ತಿಳಿಸಿದರು.
ಪತ್ರಕರ್ತರು ತಮ್ಮ ಮಕ್ಕಳು ಉನ್ನತ ವಿದ್ಯಾಭಾಸ ಮಾಡಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದ ಸಚಿವರು, ಸುದ್ದಿಯನ್ನು ವೈಭವೀಕರಿಸುವುದಕ್ಕಿಂತ ವರದಿಯ ನೈಜ ಅಂಶಗಳನ್ನು ಸಮಾಜದ ಮುಂದಿಡಬೇಕು ಎಂದರು.
ಪ್ರಜಾಪ್ರಗತಿ-ಪ್ರಗತಿ ಟಿವಿ ಸಂಪಾದಕ ಎಸ್.ನಾಗಣ್ಣ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ತುಮಕೂರಿನಲ್ಲಿ ೧೯೯೧ರಲ್ಲಿ ರಾಷ್ಟ್ರೀಯಮಟ್ಟದ ಸಮಗ್ರ ಅಧಿವೇಶನ, ೨೦೧೨ರಲ್ಲಿ ಶ್ರೀದೇವಿ ಆವರಣದಲ್ಲಿ ರಾಷ್ಟ್ರೀಯ ಸಮ್ಮೇಳನ, ಪತ್ರಿಕಾ ವಿತರಕರ ಸಮ್ಮೇಳನ ಜಿಲ್ಲೆಗೆ ಹೆಸರು ಬರುವಂತೆ ನಡೆದಿದೆ. ಈಗ ಮತ್ತೆ ೨೦೨೫ರಲ್ಲಿ ರಾಜ್ಯಮಟ್ಟದ ಸಮ್ಮೇಳನ ತುಮಕೂರಿನಲ್ಲಿ ಆಯೋಜಿತವಾಗಿದ್ದು, ಈ ಸಮ್ಮೇಳನವನ್ನು ಕೆಎನ್‌ಆರ್ ಅವರು ಪರಮೇಶ್ವರ್ ಅವರೊಡಗೂಡಿ ಯಶಸ್ವಿಯಾಗಿ ನಡೆಸಿಕೊಡಬೇಕು. ಕೆಎನ್‌ಆರ್ ಅವರಿಗೆ ಬೃಹತ್ ಸಮಾವೇಶ, ಕಾರ್ಯಕ್ರಮ ಮಾಡುವ ಶಕ್ತಿಇದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿದ್ದು, ಪತ್ರಕರ್ತರು ಅವರ ಕುಟುಂಬದವರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಪಟ್ಟಿದ್ದಾರೆ. ಬಹುಶಃ ಜನವರಿ ೧೧-೨೩ ಇಲ್ಲವೇ ೧೮-೧೯ರಂದು ನಡೆಯಲಿರುವ ಸಮ್ಮೇಳನಕ್ಕೂ ಇದೇ ರೀತಿಯ ಸಹಕಾರ ಜಿಲ್ಲೆಯ ಪತ್ರಕರ್ತರಿಂದ ಹಾಗೂ ಆಡಳಿತ, ಜನಪ್ರತಿನಿಧಿಗಳಿಂದ ಬೇಕಿದೆ.
ಪತ್ರಕರ್ತರ ಸಮ್ಮೇಳನದ ಮೂಲಕ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಶಾಶ್ವತ ನಿಧಿ ಮಾಡಲು ಉದ್ದೇಶಿಸಿದ್ದು ಪತ್ರಕರ್ತರ ಹಿತೈಷಿಗಳಾಗಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಉದಾರ ಆರ್ಥಿಕ ನೆರವು ನೀಡಬೇಕೆಂದು ಕೋರಿದರು. ಇದೇ ವೇಳೆ ನೆರವಿನ ಬೇಡಿಕೆ ಪತ್ರವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಂ ವಾಚಿಸಿ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರ ಸಮ್ಮುಖ ಸಚಿವರಿಗೆ ನೀಡಲಾಯಿತು.
ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ. ನಾಗಣ್ಣ ಅವರು ಮಾತನಾಡಿ ಜಿಲ್ಲೆಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದಿರುವ ಡಾ.ಜಿ.ಪರಮೇಶ್ವರ ಅವರು ಪತ್ರಕರ್ತರ ಹಿತಚಿಂತಕರಾಗಿ ಸದಾ ಅವರ ಪರವಾಗಿದ್ದು, ಸಮ್ಮೇಳನಕ್ಕೆ ನಿರೀಕ್ಷೆಗೆ ಮೀರಿ ಅವರಿಂದ ಸಹಕಾರ ದೊರೆಯಲಿದೆ. ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರು.
ಸರ್ವೋದಯ ವಿದ್ಯಾಸಂಸ್ಥೆ ಜಂಟಿ ಕಾರ್ಯದರ್ಶಿ ಸುಬ್ಬರಾವ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಮ್ಮೇಳನಕ್ಕೆ ಅಗತ್ಯ ಸಹಕಾರದ ಭರವಸೆ ನೀಡಿದರು. ಯುವಜನಸೇವಾ ಕ್ರೀಡಾಧಿಕಾರಿ ಡಾ.ರೋಹಿತ್ ಗಂಗಾಧರ್, ಪಾಲಿಕೆ ಆರೋಗ್ಯಾಧಿಕಾರಿ ವೀರೇಶ್ ಕಲ್ಮಠ್, ಐಎಫ್‌ಡಬ್ಲ್ಯೂಜೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಿ.ಎಂ.ಸತೀಶ್, ರಾಷ್ಟ್ರೀಯ ಮಂಡಳಿ ಸದಸ್ಯರಾದ ಟಿ.ಎನ್.ಮಧುಕರ್, ಅನುಶಾಂತರಾಜ್, ಮಾರುತಿ ಗಂಗಹನುಮಯ್ಯ, ರಾಕ್‌ಲೈನ್ ರವಿಕುಮಾರ್ ಸೇರಿದಂತೆ ಪದಾಧಿಕಾರಿಗಳು ಹಾಗೂ
ಕಾರ್ಯಕಾರಿ ಮಂಡಳಿ ನಿರ್ದೇಶಕರಾದ ಎಲ್.ಚಿಕ್ಕೀರಪ್ಪ, ಸತೀಶ್ ಹಾರೋಗೆರೆ, ಎಚ್.ಎಸ್.ಪರಮೇಶ್, ಜಯಣ್ಣ, ಶಂಕರ್, ಯಶಸ್‌ಪದ್ಮನಾಭ್, ತುರುವೇಕೆರೆ ನಂದೀಶ್, ಎನ್.ಮೂರ್ತಿ, ಎಸ್.ಹರೀಶ್ ಆಚಾರ್ಯ, ಸುರೇಶ್‌ಕಾಗ್ಗೆರೆ, ಸುರೇಶ್‌ವತ್ಸ, ರೇಣುಕಾಪ್ರಸಾದ್, ರವೀಂದ್ರಕುಮಾರ್, ಗೋವಿಂದರಾಜು, ಶಿರಾ ತಾಲ್ಲೂಕು ಅಧ್ಯಕ್ಷ ಜಯಪಾಲ್ ಸೇರಿ ಹಲವು ಪತ್ರಕರ್ತರು, ಕುಟುಂಬವರ್ಗದವರಿದ್ದರು. ಇದೇ ವೇಳೆ ಅಗಲಿದ ಪತ್ರಕರ್ತ ಕುಟುಂಬದವರಿಗೆ ಸಂಘದ ನೆರವಿನ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಅಥ್ಲೆಟಿಕ್ಸ್, ಮ್ಯೂಸಿಕಲ್‌ಚೇರ್, ಹಗ್ಗ ಜಗ್ಗಾಟ, ಕಬ್ಬಡಿ ತಂಡದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಕ್ರೀಡಾಜ್ಯೋತಿ ಯಶಸ್ವಿಗೊಳಿಸಿದ ರಂಗರಾಜು ಅವರ ತಂಡ ಹಾಗೂ ಕ್ರೀಡಾಕೂಟಕ್ಕೆ ಸಹಕರಿಸಿದವರನ್ನು ಅಭಿನಂದಿಸಲಾಯಿತು.