ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇದ್ದು, ಈ ಬಾರಿಯ ಬಜೆಟ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇತ್ತೀಚಿಗೆÀ ಮಂಡಿಸಲಾದ 2025-26ನೇ ಸಾಲಿನ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ಹಾಗೂ ಅಂಗನವಾಡಿ ಸಹಾಯಕಿಯರಿಗೆ 750 ರೂಪಾಯಿ ಹೆಚ್ಚಿಸಲಾಗಿದ್ದು, ಇದರಿಂದ ವರ್ಷಕ್ಕೆ ಇಲಾಖೆಗೆ 144 ಕೋಟಿ ರೂಪಾಯಿ ಅನುದಾನ ಹೊರೆಯಾಗಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ನೀಡಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಇದ್ದು, ಇದರಲ್ಲಿ ನಮ್ಮ ರಾಜ್ಯದ ಪಾಲು ಹೆಚ್ಚಿದೆ. ಗೌರವ ಧನ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ, ಇದುವರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡಿರುವ ರಾಜ್ಯಗಳ ಪೈಕಿ ಇಡೀ ದೇಶದಲ್ಲೇ ನಮ್ಮ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರಕ್ಕೆ ಅಂಗನವಾಡಿ ಸಹಾಯಕರು ಹಾಗೂ ಕಾರ್ಯಕರ್ತೆಯರ ಬಗ್ಗೆ ಕಾಳಜಿ ಇದ್ದು, ಹಾಗಾಗಿಯೇ ಅವರ ಗೌರವ ಧನ ಹೆಚ್ಚಳ ಮಾಡಲು ಸರ್ಕಾರ ಮತ್ತು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.