ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಕೆಎಸ್ಸಿಎ ಹಾಗೂ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವತಿಯಿಂದ ತಲಾ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಮೃತಪಟ್ಟ 11 ಮಂದಿ ಅಭಿಮಾನಿಗಳ ಸಾವು ನೋವು ತಂದಿದೆ. ಆರ್‌ಸಿಬಿ ಹಾಗೂ ಕೆಎಸ್ಸಿಎ ಹೆಚ್ಚಿನ ಪರಿಹಾರ ಕೊಡಬೇಕು ಎಂದು ಅವರು ತಾಕೀತು ಮಾಡಿದರು.
ವಿರೋಧ ಪಕ್ಷಗಳು ಈ ದುರ್ಘಟನೆಯಲ್ಲಿ ಜನರ ದಾರಿ ತಪ್ಪಿಸುತ್ತಿವೆ. ಇದಕ್ಕೆ ಹಿರಿಯ ನಾಯಕರು ತಕ್ಕ ಉತ್ತರ ಕೊಡಲಿದ್ದಾರೆ. ರಾಜಕಾರಣಕ್ಕಿಂತ ಘಟನೆ ಯಾಕೆ ಆಯ್ತು ಎಂಬುದು ಗೊತ್ತಾಗಬೇಕು. ಇಂಥ ದುರ್ಘಟನೆ ನಡೆದಿದ್ದು, ನಿಜಕ್ಕೂ ದುರದೃಷ್ಟಕರ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಐಪಿಎಲ್ ಕ್ರಿಕೆಟ್ ಪಂದ್ಯ ನಡೆಸುವವರು ಸಾವಿರಾರು ಕೋಟಿ ಮಾಲೀಕರು. ಆದ್ದರಿಂದ ಆರ್‌ಸಿಬಿ ವಿಜಯೋತ್ಸವದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಬಿಸಿಸಿಐ ತಲಾ ಒಂದೊಂದು ಕೋಟಿ ಪರಿಹಾರ ಕೊಡಬೇಕು. ಈ ಬಗ್ಗೆ ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ ಎಂದು ಅವರು ತಿಳಿಸಿದರು.
ಈ ದುರ್ಘಟನೆ ಕುರಿತು ಏನಾಗಿದೆ ಏನಾಗಿಲ್ಲ ಅನ್ನುವುದನ್ನು ಮುಖ್ಯಮಂತ್ರಿಗಳು ಹೇಳಬೇಕಾಗುತ್ತದೆ. ಎಲ್ಲರೂ ದುಃಖದಲ್ಲಿದ್ದಾರೆ, ಹಾಗಾಗಿ ಏನೂ ಹೇಳಲು ಹೋಗಲ್ಲ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ದುಃಖ ತಡೆದುಕೊಳ್ಳಲು ಭಗವಂತ ಶಕ್ತಿ ಕೊಡಲಿ. ಸರ್ಕಾರ ಏನು ಮಾಡಿದೆ ಏನು ಮಾಡಿಲ್ಲವೆಂದು ನಾನು ಜವಾಬ್ದಾರಿ ಸ್ಥಾನದಲ್ಲಿದ್ದು ಹೇಳಲು ಆಗಲ್ಲ. ಸಿಎಂ, ಡಿಸಿಎಂ, ಗೃಹ ಸಚಿವರು ಈ ಬಗ್ಗೆ ತಿಳುವಳಿಕೆ ಕೊಡಬೇಕು ಎಂದು ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣ ಸಾಮರ್ಥ್ಯ ಇರೋದು 35 ಸಾವಿರ ಮಂದಿಗೆ ಮಾತ್ರ. ಉಚಿತ ಅಂದ ತಕ್ಷಣ 3 ಲಕ್ಷ ಜನ ಅಲ್ಲಿಗೆ ಬಂದಿದ್ದರು. ಸಾವಿರಕ್ಕೆ ಒಬ್ಬರು ಪೊಲೀಸ್ ನಮ್ಮಲ್ಲಿರೋದು, ಎಲ್ಲೋ ಒಂದು ಕಡೆ ಹೆಚ್ಚು ಕಮ್ಮಿ ಆಗಿದೆ. ಸಾವು ಹೊರಗಡೆ ಆದಾಗ ಒಳಗಡೆ ಸೆಲೆಬ್ರೇಷನ್ ನಿಲ್ಲಿಸಬೇಕಾಗಿತ್ತು. ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಯೋಚನೆ ಮಾಡಬೇಕಾಗಿತ್ತು. ಹೈಕೋರ್ಟ್‌ಗೆ ಸುಮೊಟೋ ಕೇಸ್ ಮಾಡುವ ಎಲ್ಲಾ ಹಕ್ಕಿದೆ. ಅದೇ ಥರ ಎಲ್ಲದರಲ್ಲೂ ಮಾಡಿದರೆ ಒಳ್ಳೆಯದು ಎಂದು ಹರಿಪ್ರಸಾದ್ ತಿಳಿಸಿದರು.
11 ಜನರ ಸಾವಿಗೆ ಯಾರು ಹೊಣೆ ಅಂತ ಸರ್ಕಾರ ಹೇಳಬೇಕು. ಇದು ಸರ್ಕಾರ ನಡೆಸಿರುವ ಕ್ರಿಕೆಟ್ ಅಲ್ಲ, ವಿಧಾನಸೌಧದ ಬಳಿ ಏನೂ ಆಗಿಲ್ಲ. ಸ್ಟೇಡಿಯಂನವರು ನಡೆಸುವಾಗ ಸ್ವಲ್ಪ ಯೋಚನೆ ಮಾಡಿ ನಡೆಸಬೇಕಿತ್ತು ಎಂದರು.