ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ಡಿಸಿ ಕಚೇರಿಯಲ್ಲಿ ಉದ್ಯಮಿಗಳು, ರೈತ ಮುಖಂಡರ ಸಭೆಯನ್ನು ಕರೆಯಲಾಗಿದ್ದು ಸಭೆಯಲ್ಲಿ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿಗೆ ಶೀಘ್ರ ಕೈಗಾರಿಕಾ ಎಸ್ಐಆರ್ ಜಾರಿಗೆ ತರಲಾಗುತ್ತದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಉದ್ಯಮಿಗಳು, ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಉದ್ಯಮಿಗಳು, ರೈತ ಮುಖಂಡರು, ತಮ್ಮ ತಮ್ಮ ವಿಭಾಗದ ಸಮಸ್ಯೆಗಳನ್ನು ತಿಳಿಸಿ, ಕೈಗಾರಿಕಾ ಸಚಿವರಿಗೆ ಮನವಿ ಅರ್ಪಿಸಿದರು.
ಕೈಗಾರಿಕಾ ಪ್ರದೇಶಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಿರುವ ಮಾರ್ಗೋಪಾಯಗಳ ಜತೆಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪೂರಕ ವಾತಾವರಣವನ್ನು ಕಲ್ಪಿಸುವ ಭರವಸೆ ನೀಡಿದರು.
ರಾಜ್ಯದಲ್ಲಿ ಕೈಗಾರಿಕಾ SIR ಯೋಜನೆಯನ್ನು ಜಾರಿಗೆ ತಂದು ಕೈಗಾರಿಕೆಗಳಿಂದ ಪಡೆದ ತೆರಿಗೆಯನ್ನು ಆಯಾ ಕೈಗಾರಿಕಾ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವುದು, ಸೇರಿದಂತೆ ವಿವಿಧ ಸಮಸ್ಯೆಗಳು ಹಾಗೂ ಅವುಗಳಿಗೆ ಕೈಗೊಂಡಿರುವ, ಭವಿಷ್ಯದಲ್ಲಿ ಕೈಗೊಳ್ಳಲಿರುವ ಪರಿಹಾರಗಳ ಕುರಿತು ಪಾಟೀಲ್ ತಿಳಿಸಿದರು.
ಸಭೆಯಲ್ಲಿ MLC ಮಂಜೇಗೌಡ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, KIADB ಸಿಇಒ ಮಹೇಶ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

