ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆ ಅಧ್ಯಕ್ಷ ಹುದ್ದೆಯ ಅವಧಿ ಕೇವಲ ಮೂರು ತಿಂಗಳು ಮಾತ್ರ ಬಾಕಿ ಇದೆ. ನಗರಸಭೆ ಅಧ್ಯಕ್ಷ ಜೆ ಆರ್ ಅಜಯ್ ಕುಮಾರ್ ಅವರು ರಾಜೀನಾಮೆಯಿಂದ ತೆರವಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದೆ. ಬಿಸಿಎಂ-ಎ ವರ್ಗಕ್ಕೆ ಮೀಸಲಿರುವ ಮೂರು ತಿಂಗಳ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ಕಂಡುಬಂದಿದೆ.
ನಗರಸಭೆ ಸದಸ್ಯರಾದ ವೈಪಿಡಿ ದಾದಾಪೀರ್, ಜಬೀವುಲ್ಲಾ, ಚಿತ್ರಜಿತ್ ಯಾದವ್ ಮತ್ತು ಬಾಲಕೃಷ್ಣ ಇವರುಗಳು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಭಾರೀ ಲಾಭಿ ನಡೆಸುತ್ತಿದ್ದು ಸಚಿವ ಸುಧಾಕರ್ ಕೃಪಾಕಟಾಕ್ಷ ಯಾರಿಗೆ ಎಂಬುದು ನಿಗೂಢವಾಗಿದೆ. ಸಚಿವ ಸುಧಾಕರ್ ರಾಜಕೀಯ ಚತುರರಾಗಿದ್ದು ನೀವು ಚಾಪೆ ಕೆಳೆಗೆ ತೂರಿದರೆ ನಾನು ರಂಗೋಲಿ ಕೆಳಗೆ ತೂರುವೆ ಎನ್ನುವ ಮನಸ್ಥಿತಿಯ ಸಚಿವರ ನಡೆ ಮಾತ್ರ ನಿಗೂಢವಾಗಿದೆ.
ಚುನಾವಣೆಗೆ ಐದು ನಿಮಿಷ ಇದ್ದಾಗ ಇಂತವರು ಅರ್ಜಿ ಹಾಕಿ ಎನ್ನುವ ಜಾಯಮಾನದ ಸಚಿವ ಸುಧಾಕರ್ ಇಂದಿಗೂ ಸ್ವಷ್ಟವಾಗಿ ಯಾರಿಗೂ ಭರವಸೆ ನೀಡಿಲ್ಲ, ನೀಡುವುದು ಇಲ್ಲ. ಅಲ್ಲದೆ ಪಕ್ಷ ನಿಷ್ಠೆ ಎನ್ನುವುದು ಅವರ ಹತ್ತಿರ ಸುಳಿಯುವುದಿಲ್ಲ. ಹಾಗಾಗಿ ಅವರ ರಾಜಕೀಯ ನಡೆ ಬಲ್ಲವರು ಅರಿತಿದ್ದಾರೆ. ಆದರೆ ಸಚಿವರು ಸಾಮಾಜಿಕ ನ್ಯಾಯ ಪರ ಚಿಂತನೆ ಮಾಡಿ ಅರ್ಹರಿಗೆ ಅಧ್ಯಕ್ಷ ಹುದ್ದೆ ನೀಡುವುದಂತೂ ಗ್ಯಾರಂಟಿ.
ಪಕ್ಷ ನಿಷ್ಠೆಗೆ ಆದ್ಯತೆ ನೀಡಿದರೆ ಸದಸ್ಯರಾದ ವೈಪಿಡಿ ದಾದಾಪೀರ್ ಮತ್ತು ಜಬೀವುಲ್ಲಾ ಕಾಂಗ್ರೆಸ್ ಪಕ್ಷದವರಾಗಿದ್ದು ಇಬ್ಬರಲ್ಲಿ ಒಬ್ಬರಿಗೆ ಅಧ್ಯಕ್ಷರಾಗುವ ಭಾಗ್ಯ ದೊರೆಯಲಿದೆ. ಇನ್ನೂ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವ ಚಿತ್ರಜಿತ್ ಯಾದವ್ ಪಕ್ಷೇತರರಾದರೆ, ಸದಸ್ಯ ಬಾಲಕೃಷ್ಣ ಬಿಜೆಪಿ ಚಿಹ್ನೆಯಿಂದ ಗೆದ್ದ ಸದಸ್ಯರಾಗಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೊಂಡಾಗ ಇವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಮತ್ತೊಬ್ಬ ಆಕಾಂಕ್ಷಿ ಚಿತ್ರಜಿತ್ ಯಾದವ್ ಪಕ್ಷೇತರ ಸದಸ್ಯರಾಗಿದ್ದು ಮೊದಮೊದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದರು ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಸಚಿವ ಸುಧಾಕರ್ ಒಲವು ವ್ಯಕ್ತಪಡಿಸದ ಕಾರಣ ಸಚಿವರಿಗೆ ಸೆಡ್ಡು ಹೊಡೆದು ಬಿಜೆಪಿ ಸೇರಿದಂತೆ ಪಕ್ಷೇತರರ ಬೆಂಬಲ ಪಡೆದು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.
ವೈಪಿಡಿ ದಾದಾಪೀರ್ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರಾಗಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಸುಧಾಕರ್ ವಿರುದ್ದ ಬಹಿರಂಗವಾಗಿ ವಿರೋಧಿಸಿ ಜೆಡಿಎಸ್ ಬೆಂಬಲಿಸಿದ್ದರು. ಜಬೀವುಲ್ಲಾ ಕೂಡ ಕಾಂಗ್ರೆಸ್ ಸದಸ್ಯರಾಗಿದ್ದು ತನ್ನ ಸಹೋದರ ಇಮ್ತೀಯಾಜ್ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಮರುಚುನಾವಣೆಯಲ್ಲಿ ಗೆಲ್ಲುವ ಮೂಲಕ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.
ಸಾಮಾಜಿಕ ನ್ಯಾಯದಡಿ ಅಧ್ಯಕ್ಷರ ಆಯ್ಕೆ?
ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಸಾಮಾಜಿಕ ಪರಿಕಲ್ಪನೆ ಅಡಿಯಲ್ಲಿ ಸಚಿವ ಸುಧಾಕರ್ ಅವರು ಈ ಹಿಂದೆ ಮುಸ್ಲಿಂ, ಬೆಸ್ತ, ಈಡಿಗ, ಗೊಲ್ಲ ಸಮಾಜದವರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಿರುವ ಸುಧಾಕರ್ ಬಾಕಿ ಮೂರು ತಿಂಗಳ ಅವಧಿಗೆ ವಿಶ್ವಕರ್ಮ ಸಮಾಜದ ಬಾಲಕೃಷ್ಣಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ ಎಂಬ ಮಾತು ಕೇಳಿ ಬಂದಿದೆ.
ಉಪಾಧ್ಯಕ್ಷರನ್ನಾಗಿ ಭೋವಿ, ಸ್ಥಾಯಿ ಸಮಿತಿಗಳಿಗೆ ತಮಿಳು ಗೌಂಡರ್, ಮಾದಿಗ, ಕುಂಚಿಟಿಗ ಹಾಗೂ ಲಿಂಗಾಯಿತ ಸಮಾಜಗಳಿಗೆ ಮಣೆ ಹಾಕಿದ್ದಾರೆ. ಹಾಗಾಗಿ ಉಳಿದಿರುವ ವಿಶ್ವಕರ್ಮ ಸಮಾಜಕ್ಕೆ ನೂರಷ್ಟು ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗಿದೆ.
ಈಗಾಗಲೇ ಚಿಕ್ಕಮಗಳೂರು ಕಡೆಗೆ ನಗರಸಭೆಯ 30ಕ್ಕೂ ಹೆಚ್ಚಿನ ಸದಸ್ಯರು ಸೋಮವಾರ ಅಧ್ಯಕ್ಷ ಹುದ್ದೆ ಆಕಾಂಕ್ಷಿ ಬಾಲಕೃಷ್ಣ ನೇತೃತ್ವದಲ್ಲಿ ಪ್ರವಾಸ ಕೂಡಾ ಹೋಗಿದ್ದಾರೆ ಎನ್ನಲಾಗಿದೆ. ಇದನ್ನೆಲ್ಲ ಸೂಕ್ಷ್ಮವಾಗಿ ಅವಲೋಕಿಸಿದರೆ ಸಚಿವ ಸುಧಾಕರ್ ರವರು ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಡಿಯಲ್ಲಿ ಸಣ್ಣ ಸಣ್ಣ ಸಮುದಾಯದವರಿಗೆ ರಾಜಕೀಯ ಅವಕಾಶ ದೊರಕಿಸಿಕೊಡುವ ಅಭಿಲಾಷೆ ಹೊಂದಿದ್ದು ನೂರಷ್ಟು ನಗರಸಭೆಯ ಅಧ್ಯಕ್ಷರಾಗಿ ಬಾಲಕೃಷ್ಣ ಅವರೇ ಆಯ್ಕೆ ಆಗುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.
ಆದರೆ ಸಚಿವ ಸುಧಾಕರ್ ನೆಡೆ ಮಾತ್ರ ನಿಗೂಢವಾಗಿದ್ದು ಅರ್ಜಿ ಹಾಕುವ 5 ನಿಮಿಷ ಮುಂಚೆ ಸೂಚನೆ ನೀಡಿ ಬಾಲಕೃಷ್ಣ ಅವರಿಂದ ಅರ್ಜಿ ಹಾಕಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇದರ ಮಧ್ಯ ವಿಶ್ವಕರ್ಮ ಸಮಾಜದ ಮುಖಂಡರು ಸಚಿವ ಸುಧಾಕರ್ ಅವರನ್ನ ಭೇಟಿ ಮಾಡಿ ಸಮಾಜದ ಸದಸ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಕೋರಿಕೊಂಡಿದ್ದು ಸಚಿವ ಸುಧಾಕರ್ ಒಲವು ವಿಶ್ವಕರ್ಮ ಸಮಾಜದ ಕಡೆ ಇದೆ ಎನ್ನುತ್ತವೆ ಆಪ್ತ ಮೂಲಗಳು.