ಚಂದ್ರವಳ್ಳಿ ನ್ಯೂಸ್, ರಾಮನಗರ:
ರಾಮನಗರ ಜಿಲ್ಲಾ ಕೇಂದ್ರದಲ್ಲಿ ಆರಂಭವಾಗಿರುವ ನಗರ ಸಾರಿಗೆ ಸೇವೆಗೆ ಮಾಜಿ ಸಂಸದರು ಹಾಗೂ ಬಮೂಲ್ ನಿರ್ದೇಶಕ ಡಿಕೆ ಸುರೇಶ್, ರಾಮನಗರ ಶಾಸಕ ಹೆಚ್.ಎ. ಇಕ್ಬಾಲ್ ಹುಸೇನ್ ಅವರೊಂದಿಗೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
ರಾಮನಗರದಲ್ಲಿ ಆರಂಭಗೊಂಡಿರುವ ನಗರ ಸಾರಿಗೆ ಸೇವೆಯೂ ಕೆಂಗಲ್ – ಮಾಯಗಾನಹಳ್ಳಿ ಹಾಗೂ ವಿಜಯನಗರ – ಯಾರಬ್‌ನಗರ – ಐಜೂರು ಮಾರ್ಗಗಳಲ್ಲಿ ಬಸ್ಸುಗಳು ಸಂಚರಿಸಲಿವೆ. ಸಾರ್ವಜನಿಕರಿಗೆ ಕೈಗೆಟುವ ದರದಲ್ಲಿ ಸುಗಮ ಸಂಚಾರ ಸೇವೆ ಒದಗಿಸಲಾಗುತ್ತಿದ್ದು, 6 ರಿಂದ 16 ರೂ.ವರೆಗೆ ಟಿಕೆಟ್ ದರ ಇರಲಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ನಿಲುಗಡೆ ಸ್ಥಳಗಳನ್ನು ಗುರುತು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ನಗರ ಬಸ್ ಸಂಚಾರ ಆರಂಭಗೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರಿಗೆ, ಮುಜರಾಯಿ ಸಚಿವರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕರೆ ನೀಡಿದರು.
ರಾಮನಗರ ಬಸ್ ನಿಲ್ದಾಣಕ್ಕೆ ಅಗತ್ಯ ಜಮೀನು ಒದಗಿಸಿದ್ದಲ್ಲಿ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡಲಾಗುವುದು. ಈಗಿರುವ ಬಸ್ ನಿಲ್ದಾಣವನ್ನು ಶೀಘ್ರದಲ್ಲಿಯೇ ನವೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.ಬೆಂಗಳೂರಿನ ಸುತ್ತಮುತ್ತ ಇರುವ ಜಿಲ್ಲೆಗಳಿಗೆ ಬೆಂಗಳೂರು ನಗರ ಸಾರಿಗೆ (ಬಿಎಂಟಿಸಿ) ಬಸ್‌ಗಳನ್ನು ಸಂಚಾರಕ್ಕೆ ಕ್ರಮ ವಹಿಸಲಾಗಿದೆ. ಅಂತೆಯೇ ರಾಮನಗರಕ್ಕೂ ಸಹ ಪ್ರಸ್ತುತ ಸುಗ್ಗನಹಳ್ಳಿಯವರೆಗೆ ಬೆಂಗಳೂರು ನಗರ ಬಸ್ ಸಾರಿಗೆ ಸಂಚರಿಸಲಾಗುತ್ತಿದ್ದು, ಅದನ್ನು ರಾಮನಗರಕ್ಕೆ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸಾರಿಗೆ ಸಂಸ್ಥೆಗೆ ಹೊಸದಾಗಿ 5,800 ಬಸ್‌ಗಳನ್ನು ಖರೀದಿಸಲಾಗಿದೆ ಹಾಗೂ ಚಾಲಕರು, ನಿರ್ವಾಹಕರು, ಮೆಕಾನಿಕ್‌ಗಳು ಸೇರಿದಂತೆ 10,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಹೆಚ್ಚು ಬಸ್‌ಗಳು ಸಂಚಾರ ಆರಂಭಿಸಲು ಅನುಕೂಲಕರವಾಗಲಿದೆ. ಶಕ್ತಿ ಯೋಜನೆಯಿಂದ ಪ್ರತಿದಿನ 60 ರಿಂದ 65 ಲಕ್ಷ ಜನ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಶೇ. 23 ರಷ್ಟು ಉದ್ಯೋಗ ಸೃಷ್ಠಿಯಾಗಿದೆ ಎಂದು ತಿಳಿಸಿದರು.
ಶಾಸಕ ಹೆಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿ, ರಾಮನಗರ ವ್ಯಾಪ್ತಿಯಲ್ಲಿ ಕೆಂಗಲ್‌ನಿಂದ ಮಾಯಗಾನಹಳ್ಳಿಯವರೆಗೆ, ಐಜೂರು ವಾಟರ್ ಟ್ಯಾಂಕ್‌ನಿಂದ ವಿಜಯನಗರದ ವರೆಗೆ ಹಾಗೂ ಕೆಂಪೇಗೌಡನ ದೊಡ್ಡಿಯಿಂದ ಯಾರಾಬ್ ನಗರದವರೆಗೆ ಸೆ. 15 ರಿಂದ ನಗರ ಸಾರಿಗೆ ಪ್ರಾರಂಭವಾಗಿದೆ. ರಾಮನಗರ ನಗರದ ಜನರ ಬಹು ದಿನಗಳ ಕನಸು ನನಸಾಗಿದ್ದು, ವಿಶೇಷವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕೆಲಸ ನಿಮಿತ್ತ ನಗರಕ್ಕೆ ಆಗಮಿಸುವ ಜನರಿಗೆ, ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಅನುಕೂಲಕರವಾಗಲೆಂದೇ ನಗರ ಬಸ್ ಸಂಚಾರ ಪ್ರಾರಂಭಿಸಲಾಗಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ, ಆಸ್ಪತ್ರೆಗಳು, ಜಿಲ್ಲಾ ಪಂಚಾಯತ್ ಕಚೇರಿಗೆ ಓಡಾಡಲು ಅನುಕೂಲಕರವಾಗಿದೆ. ಇದರಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ.
ನಗರದ ಎಲ್ಲಾ ವಾರ್ಡ್ಗಳಲ್ಲಿ ಬಸ್ ಸಂಚರಿಸಲಿದ್ದು, ರಸ್ತೆಗಳು ಕಿರಿದಾಗಿರುವ ಕಡೆಗಳಲ್ಲಿ ಮಿನಿ ಬಸ್ ಸಂಚರಿಸಲಿದೆ ಎಂದರು.ರಾಮನಗರ ಸುತ್ತಮುತ್ತಲು ಇರುವ ಅನೇಕ ಹಳ್ಳಿಗಳಲ್ಲಿ ಇನ್ನೂ ಯಾವ ಕಡೆ ಸಾರಿಗೆ ವ್ಯವಸ್ಥೆ ಆಗಿರುವುದಿಲ್ಲವೋ ಅಂತಹ ಹಳ್ಳಿಗಳನ್ನು ಗುರುತಿಸಿ ಬಸ್ ಸಂಚಾರ ಮಾಡಲು ಕ್ರಮ ವಹಿಸಲಾಗುವುದು.
ಈ ಹಿಂದೆ ನರ್ಮ್ ಯೋಜನೆಯಡಿ 17 ನಗರ ಸಾರಿಗೆ ಬಸ್‌ಗಳು ಸಂಚಾರ ಮಾಡುತ್ತಿದ್ದವು ಎಂದು ಹೇಳಿದರು.ಒಂದು ವರ್ಷದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಆರಂಭಗೊಳ್ಳಲಿದೆ. ಇದರಿಂದ ಅನೇಕ ಜನರಿಗೆ ವೈದ್ಯಕೀಯವಾಗಿ ಉಪಯೋಗವಾಗಲಿದೆ.
ಜಿಲ್ಲೆಯ ಅನೇಕ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಲಾಗಿದ್ದು, 260 ಎಕರೆ ಗೋಮಾಳು ಪ್ರದೇಶದಲ್ಲಿ 10 ಸಾವಿರ ನಿವೇಶನಗಳನ್ನು ಮಾಡಲು ಕ್ರಮವಹಿಸಲಾಗಿದೆ. ರಾಮನಗರದಲ್ಲಿನ ರಸ್ತೆಗಳು, ಚರಂಡಿಗಳ ಅಭಿವೃದ್ಧಿಗೆ 200 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಕಾಮಗಾರಿಗಳು ಆರಂಭಗೊಂಡಿದೆ. 157 ಕೋಟಿ ರೂ. ವೆಚ್ಚದಲ್ಲಿ ರಾಮನಗರದಲ್ಲಿ ಪಾರ್ಕ್ ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ.
ರಾಮನಗರದ ಜನರಿಗೆ ಕಾವೇರಿ ನದಿಯ ಕುಡಿಯುವ ನೀರನ್ನು ಪೂರೈಸಲು ಕ್ರಮವಹಿಸಲಾಗಿದೆ. ಮಂಚನಬೆಲೆ ಡ್ಯಾಂನ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಪೂರೈಸಲು ಈಗಾಗಲೇ ಕ್ರಮವಹಿಸಲಾಗಿದೆ ಎಂದು ಶಾಸಕರು ತಮ್ಮ ಸರ್ಕಾರದ ಸಾಧನೆ ಬಗ್ಗೆ ಹೇಳಿಕೊಂಡರು.

