ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ದಿಢೀರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ವಿಧಾನಸೌಧದ ಸ್ಪೀಕರ್ ಕೊಠಡಿಗೆ ಶುಕ್ರವಾರ ತೆರಳಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿ ಯತ್ನಾಳ್ ಅವರಿಗೆ ಸವಾಲ್ ಹಾಕಿದ್ದಾರೆ.
ಸಚಿವರ ಪತ್ರದಲ್ಲಿ ಏನಿದೆ:
ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ್(ಯತ್ನಾಳ್) ರವರು ತಮ್ಮ ವಿಜಯಪುರ ಮತ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಬಸವನ ಬಾಗೇವಾಡಿ ಮತ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ.
ಹಾಗಾಗಿ, ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದುದರಿಂದ, ಬಸನಗೌಡ ಆರ್. ಪಾಟೀಲ್ (ಯತ್ನಾಳ್) ರವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ, ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ” ಎಂದು ಶಿವಾನಂದ ಪಾಟೀಲ್ ಸ್ಪೀಕರ್ ಅವರನ್ನು ಕೋರಿದ್ದಾರೆ.
ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿ, ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನಿಂದನೆ ಮಾಡಿದ್ದರು. ನನ್ನ ಪೂರ್ವಜರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ. ಇಂತಹ ಮಾತುಗಳನ್ನು ಸಹಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ, ಸ್ಪೀಕರ್ಗೆ ರಾಜೀನಾಮೆ ಕೊಟ್ಟು ಬಂದಿದ್ದೇನೆ ಎಂದು ಸಚಿವರು ತಿಳಿಸಿದರು.
ಯತ್ನಾಳ್ ಹಾಕಿದ್ದ ಸವಾಲು ಸ್ವೀಕರಿಸಿದ್ದೇನೆ. ಯತ್ನಾಳ್ ಅವರು ರಾಜೀನಾಮೆ ನೀಡಲಿ, ನಾನು ವಿಜಯಪುರದಲ್ಲಿ ಚುನಾವಣೆ ಎದುರಿಸುತ್ತೇನೆ. ಇಲ್ಲವೇ, ನೀವು ಬಸವನ ಬಾಗೇವಾಡಿಗೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಸವಾಲು ಹಾಕಿದರು.
”ನಾನು ಬಸವನಬಾಗೇಡಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದೇನೆ. ನೀವು ರಾಜೀನಾಮೆ ನೀಡಿ ಎಂದು ಅವರು ಶುಕ್ರವಾರದವರೆಗೆ ನನಗೆ ಗಡುವು ಕೊಟ್ಟಿದ್ದರು. ಅದರಂತೆ ನಾನು ಸ್ಪೀಕರ್ಗೆ ರಾಜೀನಾಮೆ ನೀಡಿದ್ದೇನೆ. ಯತ್ನಾಳ್ ಅವರಿಗಿಂತ ಮುಂಚೆಯೇ ನನ್ನ ರಾಜೀನಾಮೆ ಪಡೆಯಲುಮನವಿ ಮಾಡಿದ್ದೇನೆ ಎಂದು ಸಚಿವರು ತಿಳಿಸಿದರು.
ರಾಜೀನಾಮೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಜೊತೆಗೆ ಮಾತನಾಡಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ. ಯತ್ನಾಳ್ಗೆ ಯಾವುದೇ ಗಡುವು ನೀಡಲ್ಲ. ಅವರು ರಾಜೀನಾಮೆ ಕೊಟ್ಟರೆ, ನನ್ನ ರಾಜೀನಾಮೆ ಅಂಗೀಕಾರ ಆಗುತ್ತದೆ. ನಾನು ಈ ಬಗ್ಗೆ ಸಿಎಂ ಗಮನಕ್ಕೆ ತರಲ್ಲ ಎಂದರು. ಖಾದರ್ ಪ್ರತಿಕ್ರಿಯೆ: ಸಚಿವ ಶಿವಾನಂದ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಚಿವರಿಗೆ ಮತ್ತೊಬ್ಬ ಶಾಸಕರು ವೈಯಕ್ತಿಕ ಸವಾಲು ಹಾಕಿದ್ದಾರೆ. ಸವಾಲು ಸ್ವೀಕಾರ ಮಾಡಿ ರಾಜೀನಾಮೆ ನೀಡಿದ್ದಾರೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಸವಾಲು ಹಾಕಿದ್ದ ಯತ್ನಾಳ್ ಅವರು ರಾಜೀನಾಮೆ ನೀಡಿದ ಬಳಿಕ ಅಂಗೀಕಾರ ಮಾಡಿ ಅಂದಿದ್ದಾರೆ. ಪರಿಶೀಲನೆ ಮಾಡುತ್ತೇನೆ. ಅವರ ಗೌರವದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಸಂವಿಧಾನ ಪ್ರಕಾರ ಪರಿಶೀಲನೆ ಮಾಡುತ್ತೇವೆ. ರಾಜೀನಾಮೆ ಕೊಡುವುದು ಅವರ ಹಕ್ಕು. ಇದು ಸರಿ ಇದೇಯಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ನಿರ್ಣಯ ಮಾಡುತ್ತೇವೆ ಎಂದು ಖಾದರ್ ತಿಳಿಸಿದರು.