ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈಲ್ವೆ ಮಂತ್ರಾಲಯದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ಪಾಸ್ ನೀಡುವ ಯೋಜನೆಯನ್ನು ಪುನರಾರಂಭಿಸಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ವು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಲ್ಲಿ ಮನವಿ ಮಾಡಿದೆ.
ಕೇಂದ್ರ ಸರ್ಕಾರವೇ ಶೇ.50 ರಿಯಾಯಿತಿ ದರದಲ್ಲಿ ರೈಲು ಪ್ರಯಾಣ ಮಾಡುವ ಸೌಲಭ್ಯವನ್ನು ಪತ್ರಕರ್ತರಿಗೆ ಕಲ್ಪಿಸಿತ್ತು. ಕೋವಿಡ್ ನಂತರ ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯವನ್ನು ರದ್ದು ಮಾಡಿದೆ. ಇದರಿಂದಾಗಿ ಕೇಂದ್ರ ಸರ್ಕಾರದಿಂದ ಪತ್ರಕರ್ತರಿಗೆ ಲಭ್ಯವಿದ್ದ ಯೋಜನೆಯು ಇಲ್ಲದಂತಾಗಿದೆ ಎಂದು ಮನವಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಈ ಬಗ್ಗೆ ಮರುಚಿಂತನೆ ಮಾಡಿ ಮಾನ್ಯತೆ ಪಡೆದ ಪತ್ರಕರ್ತರಿಗೆ ಈ ಮೊದಲು ಇದ್ದಂತೆ ರೈಲ್ವೆ ಪಾಸ್ ಸೌಲಭ್ಯವನ್ನು ಈ ಕೂಡಲೆ ಪುನರಾರಂಭಿಸಬೇಕೆಂದು ಅವರು ಸೋಮಣ್ಣ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.
ಚರ್ಚಿಸಿ ಸೂಕ್ತ ಕ್ರಮ:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮನವಿಗೆ ಸ್ಪಂಧಿಸಿರುವ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು, ಪತ್ರಕರ್ತರ ಯೋಜನೆಯನ್ನು ಯಾವ ಕಾರಣಕ್ಕೆ ನಿಂತಿದೆ ಎನ್ನುವ ಮಾಹಿತಿ ಇಲ್ಲ. ದೆಹಲಿಗೆ ತೆರಳಿದ ಬಳಿಕ ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.