ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ವೇದಾವತಿ ಬಡಾವಣೆಯ ಸಮೀಪದಲ್ಲಿರುವ ಶ್ರೀಕೃಷ್ಣ ದೇವಸ್ಥಾನ ಮುಂಭಾಗದಲ್ಲಿ ವಿವಿಧ ಹೂವುಗಳಿಂದ ಅಲಂಕರಿಸಿದ ಬೆಳ್ಳಿ ರಥದಲ್ಲಿ ಪ್ರತಿಷ್ಟಾಪಿಸಿದ್ದ ಶ್ರೀಕೃಷ್ಣ ಪ್ರತಿಮೆಗೆ ಚಿತ್ರದುರ್ಗ ಗೊಲ್ಲಗಿರಿ ಮಠದ ಶ್ರೀಕೃಷ್ಣ ಯಾದವನಂದ ಸ್ವಾಮಿಜಿ ವಿಶೇಷ ಪೂಜೆ ಸಲ್ಲಿಸಿ ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು.
ಪ್ರತಿವರ್ಷದಂತೆ ಈ ವರ್ಷವು ಸಹ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕೃಷ್ಣ ಪ್ರತಿಮೆ ಕೂರಿಸಿ ನಿತ್ಯವು ವಿಶೇಷ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಿದ್ದು ಶನಿವಾರ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಶ್ರೀಕೃಷ್ಣ ದೇವಸ್ಥಾನದಿಂದ ಹೊರಟ ಬೃಹತ್ ಮೆರವಣಿಗೆಯು ನೂರು ಅಡಿ ರಸ್ತೆ, ಚಳ್ಳಕೆರೆ ರಸ್ತೆ, ಅಂಬೇಡ್ಕರ್ ವೃತ್ತ, ತಾಲೂಕು ಕಚೇರಿ ಮೂಲಕ ನಗರದೊಳಗೆ ಪ್ರವೇಶಿಸಿತು. ಅಲ್ಲಿಂದ ಗಾಂಧಿ ಸರ್ಕಲ್ ಮೂಲಕ ಆಸ್ಪತ್ರೆ ವೃತ್ತ, ಚರ್ಚ್ ರಸ್ತೆ, ಹುಳಿಯಾರು ರಸ್ತೆ ಮೂಲಕ ಅದೇ ಮಾರ್ಗದಲ್ಲಿ ವಾಪಾಸ್ ಶ್ರೀಕೃಷ್ಣ ದೇವಸ್ಥಾನ ತಲುಪುವ ಮೂಲಕ ಬೃಹತ್ ಮೆರವಣಿಗೆಗೆ ತೆರೆ ಎಳೆಯಲಾಯಿತು. ಬೃಹತ್ ಮೆರವಣಿಗೆಯಲ್ಲಿ ವಿನಾಯಕ ಹಾಗೂ ಆಂಜನೇಯ ಮೂರ್ತಿಯ ಮೆರವಣಿಗೆಯೂ ನಡೆದದ್ದು ವಿಶೇಷವಾಗಿತ್ತು.
ಮೆರವಣಿಗೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನೆರೆದು ಮೆರವಣಿಗೆ ಕಣ್ತುಂಬಿಕೊಂಡರು. ಗೊಂಬೆಯಾಟ, ಉರುಮೆವಾದ್ಯ, ತಮಟೆ ವಾದ್ಯ, ವೀರಗಾಸೆ, ಚಂಡಿ ಮದ್ದಾಳೆ, ಡೊಳ್ಳು ಕುಣಿತ ಮುಂತಾದ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಜತೆಗೆ ಯುವಕರು ನರ್ತಿಸಿದ್ದು ಮೆರವಣಿಗೆಗೆ ಮೆರುಗು ತಂದಿತ್ತು. ಮೆರವಣಿಗೆಗೆ ಚಾಲನೆ ನೀಡಿ ಗೊಲ್ಲಗಿರಿ ಮಠದ ಯಾದವನಂದ ಶ್ರೀಗಳು ಮಾತನಾಡಿ ಶ್ರೀಕೃಷ್ಣ ಪರಮಾತ್ಮ ಒಂದು ಜಾತಿಗೆ ಸೀಮಿತವಾಗಿಲ್ಲ. ಆತ ವಿಶ್ವಕ್ಕೆ ಗುರುವಾಗಿದ್ದು ಪ್ರಪಂಚದಾದ್ಯಂತ ಕೃಷ್ಣ ಪರಮಾತ್ಮನ ಸಂದೇಶಗಳು ಆವರಿಸಿವೆ. ವಿಷ್ಣುವಿನ ಎರಡನೇ ಅವತಾರವೇ ಶ್ರೀಕೃಷ್ಣ. ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೆ ಬೆರೆಯುವ ಗುಣ, ವ್ಯಕ್ತಿತ್ವ ಅವರದ್ದು. ಈ ಗುಣ ಗೊಲ್ಲರ ಸಮುದಾಯದಲ್ಲಿ ಬೆರೆತಿದೆ ಎಂದರು.
ವನಕಲ್ಲು ಮಠದ ಡಾ. ಶ್ರೀ ಬಸವರಾಮನಂದ ಸ್ವಾಮಿಜಿ ಮಾತನಾಡಿ ದೈವಿಕ ಶಕ್ತಿಯುಳ್ಳ ಕೃಷ್ಣ ಹುಟ್ಟಿದ ಭೂಮಿಯಲ್ಲಿ ನಾವು ಬದುಕುತ್ತಿರುವುದು ನಮ್ಮೆಲ್ಲರ ಭಾಗ್ಯ. ಯಾರು ಜೀವನದಲ್ಲಿ ಆತಂಕಕ್ಕೆ ಒಳಗಾಗಬಾರದು. ಹತಾಶರಾಗಿ ಶರಣಾಗತರಾಗದೆ ದೃಢವಾಗಿ ನಿಲ್ಲಬೇಕು. ಎಲ್ಲಿ ಅಧರ್ಮಮೊಳಗುತ್ತದೆಯೋ ಅಲ್ಲಿ ಹುಟ್ಟಿ ಬರುವೆನು ಎಂದು ಕೃಷ್ಣ ಹೇಳಿದ್ದಾನೆ. ಧರ್ಮ ರಕ್ಷಣೆಯಲ್ಲಿ ತೊಡಗಿದ್ದ ಶ್ರೀಕೃಷ್ಣನ ನ್ಯಾಯ, ನೀತಿಯ ಸಾರವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಕೃಷ್ಣ ಎಂದಿಗೂ ನ್ಯಾಯದಪರವಿದ್ದು ಧರ್ಮ ರಕ್ಷಣೆಯಲ್ಲಿ ತೊಡಗಿದ್ದಾನೆ. ಹಿರಿಯೂರು ಭಾಗದಲ್ಲಿ ಎಲ್ಲರೂ ಒಗ್ಗಟ್ಟಾಗಿ ಜಯಂತಿ ಆಚರಣೆ ಮಾಡಿದ್ದು ಅವರಿಗೆ ಶುಭವಾಗಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ವಿಪ ಸದಸ್ಯ ಡಿ.ಟಿ. ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎ. ಮುರುಳಿ, ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಜೈ.ರಾಮಯ್ಯ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ ಯಶೋಧರ, ಮುಖಂಡರಾದ ರಂಗಸ್ವಾಮಿ, ವಿಶ್ವನಾಥ್, ಆಲೂರು ತಮ್ಮಣ್ಣ, ಡಾಬಾ ಚಿಕ್ಕಣ್ಣ, ಶ್ರೀಕೃಷ್ಣ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಸಮುದಾಯದ ಸಾವಿರಾರು ಮಂದಿ ಹಾಜರಿದ್ದರು.
ಮೆರವಣಿಗೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರು ಕೃಷ್ಣ ಜಯಂತಿ ಮೆರವಣಿಗೆಯ ಕೃಷ್ಣ ಪ್ರತಿಮೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು, ಶ್ರೀ ಕೃಷ್ಣ ಮೆರವಣಿಗೆ ಸಮಿತಿಯ ಪದಾಧಿಕಾರಿಗಳು ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಬಾರಿ ಸರ್ವ ಪಕ್ಷದ ಮುಖಂಡರು ಕಾರ್ಯಕರ್ತರು ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತೊಂದು ವಿಶೇಷವಾಗಿತ್ತು.

