ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಳ್ಳಲಾಗುವ ಕಾಮಗಾರಿಗಳು, ಅನುದಾನ ಬಿಡುಗಡೆ ಹಾಗೂ ತೆರಿಗೆ ಕಡಿತದ ಕುರಿತು ಯೋಜನಾ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ. ಸುಧಾಕರ್ ಅವರು ವಿಧಾನ ಪರಿಷತ್ತಿನಲ್ಲಿ ಮಾಹಿತಿ ನೀಡಿದರು. ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕೇಶವ ಪ್ರಸಾದ್ ಎಸ್. ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಯೋಜನೆಯ ಪಾರದರ್ಶಕತೆ ಮತ್ತು ದಕ್ಷತೆಯ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು.
ಅನುದಾನ ವಾಪಸ್:
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಪ್ರಾರಂಭವಾಗದ ಕಾಮಗಾರಿಗಳ ನಿಧಿಯನ್ನು ಮರಳಿ ಪಡೆಯುವ ಕುರಿತು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಮಾರ್ಗಸೂಚಿ 2014ರ ಕಂಡಿಕೆ 4.1ರ ಅನ್ವಯ: ಜಿಲ್ಲಾಧಿಕಾರಿಗಳ ಬಳಿ ಉಳಿದಿರುವ ಬಳಕೆಯಾಗದ ನಿಧಿಯನ್ನು ಮುಂದಿನ ಒಂದು ವರ್ಷಕ್ಕೆ ಮಾತ್ರ ಬಳಸಲು ಅವಕಾಶವಿರುತ್ತದೆ. ಆ ಅವಧಿಯಲ್ಲೂ ಬಳಕೆಯಾಗದಿದ್ದರೆ ಅಂತಹ ಮೊತ್ತವನ್ನು ರದ್ದುಪಡಿಸಲಾಗುತ್ತದೆ. ಸಭಾಧ್ಯಕ್ಷರು ಮತ್ತು ಸಭಾಪತಿಯವರ ನೇತೃತ್ವದಲ್ಲಿ ನಡೆದ ಸಭೆಯ ತೀರ್ಮಾನದಂತೆ, ಎರಡು ವರ್ಷ ಮೀರಿದರೂ ಪ್ರಾರಂಭವಾಗದ ಕಾಮಗಾರಿಗಳ ಅನುದಾನವನ್ನು ರಾಷ್ಟ್ರೀಕೃತ ಬ್ಯಾಂಕ್ ಖಾತೆಗೆ ಜಮೆ ಮಾಡಲು ಸೂಚಿಸಲಾಗಿದೆ.
ಅನುದಾನ ಬಿಡುಗಡೆ ಮತ್ತು ವಿಳಂಬ ನಿವಾರಣೆ:
ಶಾಸಕರ ನಿಧಿಯನ್ನು ಬಿಡುಗಡೆ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದ ಸಚಿವರು, 2025-26ನೇ ಸಾಲಿನಲ್ಲಿ ಅನುದಾನವನ್ನು ಈಗಾಗಲೇ ಮೊದಲ ಕಂತು ದಿನಾಂಕ 13.06.2025, ಎರಡನೇ ಕಂತು ದಿನಾಂಕ 08.08.2025, ಮೂರು ಮತ್ತು ನಾಲ್ಕನೇ ಕಂತು ದಿನಾಂಕ 14.01.2026 ರಂತೆ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ ಕಾಮಗಾರಿಗಳ ಅನುಷ್ಠಾನ ವಿಳಂಬವಾಗುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ, ಫೆಬ್ರವರಿ 11, 2026 ರಂದು ಅಧಿಕೃತ ಜ್ಞಾಪನ ಹೊರಡಿಸಿ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಅನುಷ್ಠಾನ ಏಜೆನ್ಸಿಗಳಿಂದ ತೆರಿಗೆ ಕಡಿತದ ವಿವರ:
ಶಾಸಕರ ನಿಧಿಯ ಕಾಮಗಾರಿಗಳಿಗೆ ಯಾವುದೇ ನೇರ ತೆರಿಗೆ ವಿಧಿಸದಿದ್ದರೂ, ಆದಾಯ ತೆರಿಗೆ ಕಾಯ್ದೆ ಮತ್ತು ಸರ್ಕಾರದ ನಿಯಮಗಳ ಅನ್ವಯ ಅನುಷ್ಠಾನ ಏಜೆನ್ಸಿಗಳು ಸಂಸ್ಥೆಯಾಗಿದ್ದಲ್ಲಿ ಬಿಲ್ಲಿನ ಮೇಲೆ 2%, ವ್ಯಕ್ತಿಗತವಾಗಿದ್ದಲ್ಲಿ 1%, ಸೆಸ್ 1%, ಸಿ.ಜಿ.ಎಸ್.ಟಿ 1%, ಎಸ್.ಜಿ.ಎಸ್.ಟಿ 1%, ಎಫ್.ಎಸ್.ಡಿ 5% ಕಡಿತಗಳನ್ನು ಮಾಡುತ್ತವೆ.
ಇವುಗಳ ಜೊತೆಗೆ ರಾಯಲ್ಟಿ, 1995ರ PWಆ ಕೋಡ್ ಪ್ರಕಾರದ ಕಡಿತಗಳು ಮತ್ತು ಅನ್ವಯವಾಗುವ ಜಿ.ಎಸ್.ಟಿ ತೆರಿಗೆಗಳನ್ನು ಕಡಿತಗೊಳಿಸಲಾಗುತ್ತದೆ.
ಶಾಸಕರ ಪ್ರದೇಶಾಭಿವೃದ್ಧಿ ಯೋಯಡಿ ಸಾರ್ವಜನಿಕ ಕೆಲಸಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು ಮತ್ತು ಅನುದಾನವು ದುರ್ಬಳಕೆಯಾಗದಂತೆ ತಡೆಯಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.

