ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲೇ ಎಲ್ಲೂ ಇಲ್ಲದಂತಹ ಹೈಟೆಕ್ ಪತ್ರಿಕಾ ಸಭಾ ಭವನ ಚಿತ್ರದುರ್ಗ ಜಿಲ್ಲೆಯಲ್ಲಿರುವುದು ಅತ್ಯಂತ ಸಂತಸದ ವಿಚಾರ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.
ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಶನಿವಾರ ಹೈಟೆಕ್ ಮಾದರಿಯಲ್ಲಿ ನವೀಕರಿಸಲಾದ ಚಿತ್ರದುರ್ಗ ಪತ್ರಿಕಾ ಸಭಾ ಭವನ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 3 ದಶಕಗಳಿಂದ ರಾಜಕೀಯದಲ್ಲಿದ್ದೇನೆ. ಜನಪ್ರತಿನಿಧಿಗಳು, ಪತ್ರಕರ್ತರಿಗೆ ಸಂಘರ್ಷವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಗಮನ ಸೆಳೆಯುವಲ್ಲೂ ಪತ್ರಕರ್ತರು ಮುಂಚೂಣಿಯಲ್ಲಿದ್ದಾರೆ ಎಂದರು.
ಪತ್ರಕರ್ತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, 27.5 ಲಕ್ಷ ರೂ. ವೆಚ್ಚದಲ್ಲಿ ನೂತನ ವಾಹನಕ್ಕೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ವಾರ್ತಾ ಇಲಾಖೆಗೆ ಹಸ್ತಾಂತರವಾಗಲಿದೆ ಎಂದು ತಿಳಿಸಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಪತ್ರಕರ್ತರ ಸಂಘದ ವಿವಿಧ ಕಾಮಗಾರಿಗಳಿಗಾಗಿ 45 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಸಭಾ ಭವನ ನವೀಕೃತಗೊಂಡಿರುವುದು ಉತ್ತಮ ಬೆಳವಣಿಗೆ. ಪತ್ರಕರ್ತರಿಗೆ ನಿವೇಶನ ಮಂಜೂರು ಮಾಡಲು ತೊಡಕುಗಳಿದ್ದರೆ ಬಗೆಹರಿಸಿ, ಕಾನೂನಾತ್ಮಕವಾಗಿ ನೀಡಲು ಜಿಲ್ಲಾ ಸಚಿವರು, ಡಿಸಿ, ಎಡಿಸಿ ಕ್ರಮವಹಿಸಲಿ ಎಂದು ಒತ್ತಾಯಿಸಿದರು.
ಭವನಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿಟ್ಟಿರುವುದು ಸ್ವಾಗತಾರ್ಹ. ಸ್ವತಃ ಪತ್ರಕರ್ತರೂ ಆಗಿದ್ದ ಅವರು 1920ರಲ್ಲಿ ಮೂಕನಾಯಕ, 1927ರಲ್ಲಿ ಬಹಿಷ್ಕೃತ ಭಾರತ, 1928ರಲ್ಲಿ ಸಮತಾ, 1930ರಲ್ಲಿ ಜನತಾ, 1956 ಪ್ರಬುದ್ಧ ಭಾರತ ಹೀಗೆ ಸಾಮಾಜಿಕ ಆಂದೋಲನದ ಬಲವರ್ಧನೆಗಾಗಿ ಹೊರತಂದ ಐದು ಪತ್ರಿಕೆಗಳಾಗಿವೆ. ಸಮಾಜ ಮುನ್ನಡೆಸುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ ಎಂದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾತನಾಡಿ, ಈ ಭವನದಲ್ಲಿ ಮೊದಲ ಬಾರಿ ಸಂವಾದ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ ವೇಳೆ ಸರಿಯಾಗಿ ಏನೂ ಕೇಳಿಸುತ್ತಿರಲಿಲ್ಲ. ಸಂಘದವರ ಒತ್ತಾಯದ ಮೇರೆಗೆ ಸಚಿವರ ಗಮನ ಸೆಳೆದು, ಜಿಲ್ಲಾ ಖನಿಜ ಪ್ರತಿಷ್ಠಾನದಿಂದ 25ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಪತ್ರಕರ್ತರಿಗೆ ಮುಖ್ಯವಾಗಿ ಸ್ಪಷ್ಟವಾಗಿ ಮಾತುಗಳು ಕೇಳಬೇಕು. ಅಲ್ಲದೆ, ಫೋಟೊಗಳಿಗೆ ಯಾವ ರೀತಿಯಲ್ಲೂ ಶೇಡ್ ಬೀಳಬಾರದು. ಅದಕ್ಕಾಗಿ ಪಿವಿಎಸ್ ಥಿಯೇಟರ್ ಮಾದರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಅಕಾಸ್ಟಿಕ್ ಆಡಿಯೋ ಥಿಯೇಟರ್‌ನಂತೆ ಅತ್ಯದ್ಭುತವಾಗಿ ನಿರ್ಮಾಣವಾಗಿದೆ ಎಂದರು.
ನಿರ್ಮಿತಿ ಕೇಂದ್ರದವರು ಯಾವುದಾದರೂ ಕಾಮಗಾರಿ ಕೈಗೊಂಡರೆ ಹಾಳಾಗಲಿದೆ ಎಂಬ ಅಪಖ್ಯಾತಿ ಸಾಮಾನ್ಯ. ಆದರೆ, ಈ ಭವನವನ್ನು ಗುಣಮಟ್ಟದಿಂದ ನಿರ್ಮಿಸಿದ್ದಾರೆ. ಸಂಘದ ಈಗಿನ ಪದಾಧಿಕಾರಿಗಳ ಅವಧಿ ಕೆಲವೇ ತಿಂಗಳುಗಳಲ್ಲಿ ಮುಗಿಯಲಿದೆ. ಮುಂದೆ ಯಾರೇ ಬಂದರೂ ಅಭಿವೃದ್ಧಿ ಅಷ್ಟೇ ಮುಖ್ಯವಾಗಲಿ ಎಂದು ಸಲಹೆ ನೀಡಿದರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಡಿಸಿ ಅವರು ಆಡಳಿತಾಧಿಕಾರಿ ಮಾತ್ರವಲ್ಲ. ತಾಂತ್ರಿಕ ನೈಪುಣ್ಯರು ಎಂಬುದಕ್ಕೆ ಈ ಸಭಾಭವನ ನಿದರ್ಶನ. ತರಾಸು ರಂಗಮಂದಿರ, ಕ್ರೀಡಾ ಭವನ ಕೂಡ ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ, ಈ ಹಿಂದೆ ಚಿತ್ರದುರ್ಗ ಶಾಸಕರಾಗಿದ್ದ ಜಿ.ಎಚ್.ತಿಪ್ಪಾರೆಡ್ಡಿ 5 ಲಕ್ಷ ರೂ., ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಖನಿಜ ಪ್ರತಿಷ್ಠಾನದಿಂದ 25 ಲಕ್ಷ ರೂ., ಎಂಎಲ್ಸಿ ಕೆ.ಎಸ್.ನವೀನ್ 5 ಲಕ್ಷ ರೂ., ಕೆ.ಸಿ.ವೀರೇಂದ್ರ ಪಪ್ಪಿ 10ಲಕ್ಷ ರೂ. ಅನುದಾನ ನೀಡಿದ್ದರಿಂದಾಗಿ ಹವಾನಿಯಂತ್ರಿತ ಸಭಾಭವನ ಸೇರಿ ಇನ್ನಿತರೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಹೊಳಲ್ಕೆರೆ, ಮೊಳಕಾಲ್ಮೂರು ಭವನ ಕೂಡ ಕೆಲವೇ ದಿನಗಳಲ್ಲೇ ಉದ್ಘಾಟನೆ ಆಗಲಿದೆ. ಹೊಸ ಬದಲಾವಣೆಗೆ ನಾಂದಿಯಾಡಿದ್ದು, ಎಲ್ಲ ಪತ್ರಕರ್ತರ ಸಹಕಾರವಿದೆ ಎಂದು ತಿಳಿಸಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್ ಮಾತನಾಡಿ, ಪತ್ರಕರ್ತರು ಸರ್ಕಾರದ ಯೋಜನೆಗಳ ಕುರಿತು ಬೆಳಕು ಚೆಲ್ಲುವಲ್ಲಿ ವಾರ್ತಾ ಇಲಾಖೆಯೊಂದಿಗೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ನೀರಿನ ಸಮಸ್ಯೆ ಉಂಟಾಗಿದ್ದರಿಂದ ಇಲಾಖೆ ಜಾಗದಲ್ಲಿ ಡಿಸಿ ಅವರ ಸೂಚನೆ ಮೇರೆಗೆ ಕೊಳವೆಬಾವಿ ಕೊರೆಸಲಾಗಿದೆ. ಇದರಿಂದ ಡಿಸಿ ಕಚೇರಿ, ಇಲಾಖೆ, ಪತ್ರಕರ್ತರ ಸಂಘ, ಸಂಘದ ಕ್ಯಾಂಟೀನ್‌ಗೂ ಅನುಕೂಲವಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಸಿ. ಹೆಂಜಾರಪ್ಪ ಮಾತನಾಡಿ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಣಿವೆ ಗುಡ್ಡಕ್ಕೆ 8 ತಿಂಗಳಲ್ಲಿ ಸ್ಥಳಾಂತರಗೊಳ್ಳಲಿದ್ದು ಅದೇ ಜಾಗದಲ್ಲಿ ಪತ್ರಕರ್ತರ ಸಂಘಕ್ಕೆ 2 ಎಕರೆ ಜಾಗ ಮೀಸಲಿಟ್ಟು ಭವನ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಇದೇ ವೇಳೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ ಅವರನ್ನು ಸನ್ಮಾನಿಸಲಾಯಿತು. ಡಿವೈಎಸ್ಪಿ ದಿನಕರ್, ಕೂಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ ಇತರರಿದ್ದರು. ಸಂಘದ ಜಿಲ್ಲಾ ಖಜಾಂಚಿ ಡಿ. ಕುಮಾರಸ್ವಾಮಿ ಸ್ವಾಗತಿಸಿದರು. ಕಾರ್ಯದರ್ಶಿ ವಿನಾಯಕ ಬಿ.ಎಸ್. ತೊಡರನಾಳ್ ನಿರೂಪಿಸಿದರು. ರವಿ ಉಗ್ರಾಣ ವಂದಿಸಿದರು. ಕಾರ್ಯದರ್ಶಿ ನಾಗರಾಜ್ ಕಟ್ಟೆ, ವಿ. ವೀರೇಶ್ (ಅಪ್ಪು), ರಾಷ್ಟ್ರೀಯ ಮಂಡಳಿ ಸದಸ್ಯ ಸಿ. ಹೆಂಜಾರಪ್ಪ ಇತರರಿದ್ದರು.
ಸಂಘದ ಮನವಿಗೆ ಸರ್ಕಾರ ಸ್ಪಂದಿಸಿದೆ-
ಸಂಘ ಸಲ್ಲಿಸಿದ ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು ಪತ್ರಿಕಾ ದಿನಾಚರಣೆಯಂದು ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಪತ್ರಕರ್ತರಿಗೆ ಆರೋಗ್ಯ ವಿಮೆಗೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ತಿಳಿಸಿದರು. ಡಿವಿಜಿ ಅವರ ಸಾರಥ್ಯದಲ್ಲಿ ಮೈಸೂರು ಒಡೆಯರ ದೇಣಿಗೆಯಿಂದ ಆರಂಭವಾದ ಸಂಸ್ಥೆಯನ್ನು ಈಗಿನ ಶಿವಾನಂದ ತಗಡೂರು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದರು.

