ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪರಕೀಯ ಭಾಷೆಗಳ ವ್ಯಾಮೋಹ ಹೆಚ್ಚುತ್ತಿದೆ ಎಲ್ಲರನ್ನು ಸ್ವೀಕರಿಸುವ ಕನ್ನಡಿಗರು ನಾವು ಬಹುರಾಷ್ಟ್ರಿಯ ಕಂಪನಿಗಳಲ್ಲಿ ಉದ್ಯೋಗದ ಮೀಸಲಾತಿ ಕೊಡುವಂತೆ ಮತ್ತು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಸೂಚಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ನೆಹರೂ ಮೈದಾನದಲ್ಲಿನ ರಾಜಮಾತೆ ಕೆಂಪನಂಜಮ್ಮಣ್ಣಿ ವೇದಿಕೆಯಲ್ಲಿ ನಡೆದ ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಅಪ್ಪರ್ ಭದ್ರಾ ಯೋಜನೆಯ ತ್ವರಿತ ಕಾಮಗಾರಿ ಪೂರ್ಣಗೊಳಿಸುವ ಬದ್ದತೆ ಹೊಂದಿದೆ. ಕ್ಷೇತ್ರದ ಅಭಿವೃದ್ಧಿ ನನ್ನ ಜವಾಬ್ದಾರಿಯಾಗಿದ್ದು 2008ರಲ್ಲಿ ಬಿಜೆಪಿ ಸರ್ಕಾರ 500 ಕೋಟಿ ನೀಡಿತ್ತು. 2017-18ರಲ್ಲಿ 7000 ಕೋಟಿಯನ್ನು ಸಿದ್ದರಾಮಯ್ಯ ಸರ್ಕಾರ ನೀಡಿತ್ತು. ನಂತರ 2018ರಿಂದ ನಾಲ್ಕು ವರ್ಷಗಳ ಕಾಲ ಕಾಮಗಾರಿ ನಿಂತಿತ್ತು. ಈಗ ಕಾಮಗಾರಿ ವೇಗ ಹೆಚ್ಚಿದ್ದು ಸದಾ ಕಾಮಗಾರಿ ಮೇಲೆ ನಿಗಾ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಮಾರ್ಚ್ ಅಂತ್ಯದ ವೇಳೆಗೆ ಜಿಲ್ಲೆಗೆ ನೀರು ಹರಿಯಲಿದೆ. ಜಿಲ್ಲೆಯ ಸುಮಾರು 90 ಕೆರೆಗಳಿಗೆ ನೀರು ಭರ್ತಿಯಾಗಲಿದೆ. ಅಪ್ಪರ್ ಭದ್ರಾ ವಿಚಾರವಾಗಿ ಬದ್ದತೆ ಮತ್ತು ಪ್ರಮಾಣಿಕವಾಗಿ ಮಾಡುತ್ತೇನೆ. ಕೇಂದ್ರ ಸರ್ಕಾರ 2022-23ರ ಬಜೆಟ್ ನಲ್ಲಿ ಘೋಷಿಸಿರುವ 5300 ಕೋಟಿ ರೂಗಳನ್ನು ನೀಡಿಲ್ಲ. ಭದ್ರಾ ಯೋಜನೆಯ ಕಾಮಗಾರಿಗೆ ಉಪಮುಖ್ಯಮಂತ್ರಿಯವರ ಆಸಕ್ತಿಯಿಂದಾಗಿ ಕಾಮಗಾರಿ ನಡೆಯುತ್ತಿದೆ.
ಅಲ್ಲದೆ ಕಾಮಗಾರಿ ಪೂರ್ಣಗೊಳಿಸಲು ಡಿಸಿಎಂ ಅವರು ಸಹಕರಿಸುತ್ತಿದ್ದಾರೆ. ಪ್ರತಿಭಟನೆಗಳ ಮೂಲಕ ಚೇಷ್ಟೆಗಳನ್ನು ಮಾಡದಿರಿ ಎಂದು ಸುಧಾಕರ್ ತಾಕೀತು ಮಾಡಿದರು.
ಹಿರಿಯೂರು ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರಿ ನಿವೇಶನ ನೀಡಲಾಗುವುದು ಎಂದು ಸಚಿವ ಸುಧಾಕರ್ ಭರವಸೆ ನೀಡಿದರು.
ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆರ್.ಮಹೇಶ್ ಸಮ್ಮೇಳನದ ಆಶಯ ನುಡಿಗಳನ್ನು ಆಡಿ ಆಡಳಿತ ಮತ್ತು ಪ್ರಭುತ್ವದ ಜೊತೆ ಮುಖಾಮುಖಿಯಾಗಿ ಕನ್ನಡವು ತನ್ನ ಮೆರಗನ್ನು ಮೆರೆದಿದೆ. ಜವಾಬ್ದಾರಿಯುತ ಲೇಖಕ ಸಮುದಾಯ ಮತ್ತು ನಾಡಿನ ಅನುಭವಗಳ ಕಿವಿಯಾಗಿ ಓದುಗರ ಗಮನಕ್ಕೆ ತರಬೇಕು. ಪ್ರಭು ದೊರೆ ಕರ್ತವ್ಯದಿಂದ ವಿಮುಖರಾದಗ ಎಚ್ಚರಿಸುವ ಧೈರ್ಯ ಕವಿ ಹೊಂದಿರುತ್ತಾನೆ ಎಂದರು.
ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿ ಸರ್ಕಾರ ಪುಸ್ತಕಗಳನ್ನು ಖರೀದಿಸಲು ಮುಂದಾಗಬೇಕು ಸ್ಥಳೀಯ ಸಂಸ್ಥೆಗಳಲ್ಲಿ ಗ್ರಂಥಾಲಯದ ಕರ ಸಂಗ್ರಹವಾಗುತ್ತಿದೆ. ಲೇಖಕರರನ್ನು ಪ್ರೋತ್ಸಾಹಿಸದಂತೆ ಆಗುತ್ತದೆ ಎಂದರು.
ಖ್ಯಾತ ಸಾಹಿತಿ ಡಾ ಕಾಳೇಗೌಡ ನಾಗವಾರ ಮಾತನಾಡಿ ಸಮಾನತೆ ಎಂಬುದು ನಾಟಕವಾಗಬಾರದು. ಸಾಮೂಹಿಕ ಹೊಣೆಗಾರಿಕೆಗಳನ್ನು ಅರಿಯಬೇಕು. ನಾಡಿನ ಏಳಿಗೆಗೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಸೌಹರ್ದ ಬದುಕುಗಳಿಗೆ ಜೀವ ತುಂಬಬೇಕಿದೆ. ಜನ ಸಾಹಿತ್ಯ ಆಸಕ್ತಿ ತಾಳಬೇಕು. ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸಮ್ಮೇಳನಾಧ್ಯಕ್ಷ ಪ್ರೊ.ಎಂ.ಜಿ ರಂಗಸ್ವಾಮಿ ಮಾತನಾಡಿ ಕನ್ನಡದ ಕಾರ್ಯಗಳಿಗೆ ಹಿರಿಯೂರು ಎಂದಿಗೂ ಮುಂದಿದೆ. ಸಾಹಿತ್ಯ ಚಟುವಟಿಕೆಗಳನ್ನು ಅಧ್ಯಯನ ಮಾಡಲು ವಿಪುಲವಾದ ಅವಕಾಶಗಳಿದ್ದು ಶತಮಾನಗಳ ಹಾಡಿಗಳನ್ನು ಮೆಟ್ಟಿನಿಂತು ಬೂಕರ್ ಪ್ರಶಸ್ತಿ ಪಡೆದಿರುವುದು ಕನ್ನಡ ಭಾಷೆಯಾಗಿದೆ. ಸಾಮಾನ್ಯ ಮತ್ತು ಸುಸಲಿತ ಭಾಷೆಯಾಗಿರುವ ಕನ್ನಡ ವಿಶ್ವದಗಲಕ್ಕೂ ಹಬ್ಬಿದೆ ಎಂದು ಹೇಳಿದರು.
ನಾವು ವಾಸಿಸುವ ಸ್ಥಳ ಯಾವುದೇ ಇರಲಿ, ಎಲ್ಲರೂ ಕನ್ನಡ ಬಳಸುವ ಕನ್ನಡದಲ್ಲೇ ವ್ಯವಹರಿಸುವ, ಕನ್ನಡ ಕಲಿಸುವ, ಉಳಿಸುವ ಕೆಲಸ ಮಾಡೋಣ ಎಂದು ಅವರು ಅಭಿಪ್ರಾಯಪಟ್ಟರು.
ಹಲವು ವೈಶಿಷ್ಟತೆಗಳನ್ನು ತನ್ನ ಸೆರಗಿನಲ್ಲಿ ಅಡಗಿಸಿಕೊಂಡಿರುವ ಹಿರಿಯೂರು ತಾಲೂಕಿನಲ್ಲಿ ಪಾಂಡವರ ನೆಲೆಗಳು, ಕೋಟೆ ಕೊತ್ತಲುಗಳು, ಕಲ್ಯಾಣಿಗಳು, ನಾಥ ಪಂಥದ ನೆಲೆಗಳು, ಸತಿ ಕಲ್ಲುಗಳು, ಶಕ್ತಿ ಪೀಠಗಳು, ಸ್ವಾತಂತ್ರ್ಯ ಹೋರಾಟಗಾರರ ಗ್ರಾಮಗಳು, ಖನಿಜ ನಿಕ್ಷೇಪಗಳು ಇವೆ ಎಂದು ರಂಗಸ್ವಾಮಿ ತಿಳಿಸಿದರು.
ಮೈಸೂರು ಅರಸರು ಕಟ್ಟಿದ ವಿವಿ ಸಾಗರ, ಗಾಯಿತ್ರಿ ಜಲಾಶಯಗಳಿದ್ದು ಇಂದಿಗೂ ಜಿಲ್ಲೆಯ ಜನರ ಜೀವನಾಡಿಯಾಗಿವೆ. ಹತ್ತಾರು ಮಠಗಳು, ಮಧ್ವಾಚಾರ್ಯರು, ವಿಜಯನಗರ ಅರಸರ ಕಾಲದ ದೇಗುಲಗಳನ್ನು ತಾಲೂಕಿನಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ದಕ್ಷಿಣಕಾಶಿ ಎಂದೇ ಹೆಸರಾಗಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿ, ನಂದಿಹಳ್ಳಿ ರಂಗನಾಥಸ್ವಾಮಿ ವೀರಭದ್ರಸ್ವಾಮಿ, ರೇಣುಕಾ ಪರಮೇಶ್ವರಿ ದೇವಿಯ ದೇಗುಲಗಳು ಇಲ್ಲಿ ನೆಲೆ ನಿಂತಿರುವುದು ಧಾರ್ಮಿಕ ಪರಂಪರೆಯ ಪ್ರತೀಕವಾಗಿದೆ.
ಹಲವೆಡೆಗಳಲ್ಲಿ ಸತಿಕಲ್ಲು ಗಳು ಕಂಡು ಬಂದಿದ್ದು ತಾಲೂಕು ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲರ ಪ್ರಮುಖ ನೆಲೆಯಾಗಿದೆ.
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಹತ್ತಾರು ಕುಟುಂಬಗಳ ನೂರಾರು ಸ್ವಾತಂತ್ರ್ಯ ಹೋರಾಟಗಾರರ ನೆಲ ಇದು. ನಮ್ಮದು ಬಯಲ ಸೀಮೆಯ ಬರದ ನಾಡು ಆದರೂ ಸಹ ಬರಹಗಾರರಿಗೆ ಬರವಿಲ್ಲ. ಸಾಹಿತ್ಯ ಪರಂಪರೆಗೆ ಇಲ್ಲಿ ಹಿರಿತನವಿದೆ.ತಾಲೂಕು ಜಾನಪದ ಸಂಪತ್ತಿಗೆ, ರಂಗಕಲೆಗೆ,ಚಿತ್ರಕಲೆಗೆ, ಕ್ರೀಡೆಗೆ ಹೆಸರುವಾಸಿಯಾಗಿದೆ. ಭದ್ರಾ ಯೋಜನೆಯನ್ನು ಶೀಘ್ರ ಮುಕ್ತಾಯಗೊಳಿಸಿ ಅನ್ನದಾತನಿಗೆ ಯೋಜನೆಯ ಫಲ ಸಿಗಬೇಕಾಗಿದೆ.ಅನ್ನದಾತರು, ಸಾಹಿತಿಗಳು, ಕಲಾವಿದರು ಸಂತಸದಿಂದ ಇರುವ ನಾಡು ಸುಭಿಕ್ಷವಾಗಿರಲಿದೆ ಎಂದರು.
ತಹಸೀಲ್ದಾರ್ ಎಂ ಸಿದ್ದೇಶ್, ಕಸಾಪ ಜಿಲ್ಲಾಧ್ಯಕ್ಷ ಕೆ ಎಂ ಶಿವಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಸಿ ರಾಮಚಂದ್ರಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಇಒ ಡಾ ಪ್ರಮೋದ್, ಪೌರಾಯುಕ್ತ ಎ ವಾಸಿಂ, ಸೀತಮ್ಮ ಹೆಚ್ ವಿ ಶ್ರೀನಿವಾಸ್, ರೈತ ಮುಖಂಡ ಕೆಸಿ ಹೊರಕೇರಪ್ಪ,
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಹನುಮಂತರೆಡ್ಡಿ, ಗೀತಾ ನಾಗಕುಮಾರ್, ಕೆಡಿಪಿ ಸದಸ್ಯ ತಿಮ್ಮಣ್ಣ,ಎಂಡಿ ಸಣ್ಣಪ್ಪ,ಜಿ ಎಲ್ ಮೂರ್ತಿ, ಕಲ್ಲಟ್ಟಿ ಹರೀಶ್, ಜಿ ಪ್ರೇಮ್ ಕುಮಾರ್, ಶಶಿಕಲಾ ರವಿಶಂಕರ್, ಪೊಲೀಸ್ ಬೇಟೆ ಪ್ರಸನ್ನ, ಕಂದಿಕೆರೆ ಸುರೇಶ್ ಬಾಬು, ಎನ್. ಬಸವರಾಜ್, ಶ್ರೀನಿವಾಸ್ ಮಳಲಿ, ಸಕ್ಕರ ರಂಗಸ್ವಾಮಿ ಮುಂತಾದವರು ಹಾಜರಿದ್ದರು.
ಬೆಳಿಗ್ಗೆ ಧ್ವಜಾರೋಹಣದ ನಂತರ ಶ್ರೀ ತೇರುಮಲ್ಲೇಶ್ವರಸ್ವಾಮಿ ದೇಗುಲದಿಂದ ಸಮ್ಮೇಳನ ಅಧ್ಯಕ್ಷರನ್ನು ಬೆಳ್ಳಿ ರಥದಲ್ಲಿ ಕೂರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಾಲೂಕಿನ ಇತಿಹಾಸ ಮತ್ತು ಸಂಸ್ಕೃತಿ ಗೋಷ್ಠಿ, ಕವಿಗೋಷ್ಠಿ, ಸಮ್ಮೇಳನ ಅಧ್ಯಕ್ಷರ ಜೊತೆಗಿನ ಒಡನಾಟದ ಕಾರ್ಯಕ್ರಮ ನಡೆದವು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಲಾಯಿತು.

