ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಬಹುದೊಡ್ಡ ಸಮಸ್ಯೆಯಾಗಿದ್ದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ದೊರೆತಿದ್ದು ನಗರದ ಸಾರ್ವಜನಿಕರ ದಶಕಗಳ ಸಮಸ್ಯೆ ಶೀಘ್ರವಾಗಿ ಬಗೆಹರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ನಗರದ ತಾಲೂಕು ಕಚೇರಿ ಬಳಿ ಸೋಮವಾರ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಹಂತ ನಾಲ್ಕರ ಅಡಿ ಮಂಜೂರಾಗಿರುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಉತ್ತರ ಕರ್ನಾಟಕ ಹೆಬ್ಬಾಗಿಲು ಹಿರಿಯೂರು ನಗರ ದಿನೇ ದಿನೇ ಬೆಳೆಯುತ್ತಿದ್ದು ಜನಸಂಖ್ಯೆ ಸಹ ಹೆಚ್ಚಾಗಿದೆ. ವಾಹನಗಳ ಸಂಖ್ಯೆ ಹೆಚ್ಚಿದ್ದು ರಸ್ತೆಯ ಗಾತ್ರ ಹಿರಿದಾಗಿಸುವ ಕಾರ್ಯಕ್ಕೆ ಇದೀಗ ಭರದ ಸಿದ್ಧತೆ ನಡೆಸಲಾಗಿದೆ.
ಈಗಾಗಲೇ ರಸ್ತೆ ಆಸು ಪಾಸಿನ ಅಂಗಡಿಗಳ, ಕಟ್ಟಡಗಳ ಮಾಲೀಕರ ಜೊತೆ ಸಭೆ ನಡೆಸಿ ರಸ್ತೆ ಅಗಲೀಕರಣದ ಅವಶ್ಯಕತೆ ಮತ್ತು ಅನಿವಾರ್ಯತೆ ವಿವರಿಸಲಾಗಿತ್ತು.
ಎಲ್ಲರೂ ರಸ್ತೆ ಅಗಲೀಕರಣ ಕಾಮಗಾರಿಗೆ ಒಪ್ಪಿದ್ದು ಈ ಬಾರಿ ರಸ್ತೆ ಅಗಲೀಕರಣ ಕಾಮಗಾರಿ ಸರಾಗವಾಗಿ ನಡೆಯಲಿದೆ ಎಂದು ಅವರು ತಿಳಿಸಿದರು.
ನಗರದ ಅಭಿವೃದ್ಧಿ ಮತ್ತು ಸುರಕ್ಷತೆಯ ಸಂಚಾರಕ್ಕೆ ರಸ್ತೆ ಅಗಲೀಕರಣ ತುರ್ತು ಅಗತ್ಯವಿದ್ದು ಆದಷ್ಟು ಬೇಗ ಈ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ರಸ್ತೆ ಅಕ್ಕಪಕ್ಕದ ಮರಗಳ ತೆರವು ಕಾರ್ಯ ಮುಗಿದಿದ್ದು ಕಟ್ಟಡಗಳ ತೆರವು ಕಾರ್ಯವೂ ಇಂದಿನಿಂದ ಶುರುವಾಗಿದೆ.
ಕಟ್ಟಡಗಳ ಮಾಲೀಕರು, ಸಾರ್ವಜನಿಕರ ಸಹಕಾರ ಪಡೆದು ಕಟ್ಟಡಗಳ ತೆರವು ಕಾರ್ಯ ನಡೆಯಲಿದೆ. ವಾಹನ ಸವಾರರು ಸಹ ಸಹಕಾರ ನೀಡಿ ಆದಷ್ಟು ಬೇಗ ರಸ್ತೆ ಅಗಲೀಕರಣವಾದರೆ ಸುಗಮ ಸಂಚಾರದ ಜೊತೆಗೆ ನಗರದ ಸೌಂದರ್ಯವೂ ಹೆಚ್ಚಲಿದೆ ಎಂದು ಸಚಿವರು ತಿಳಿಸಿದರು.
ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ ನಗರದ ಐದನೇ ವಾರ್ಡ್ ನಿಂದ ಒಂಬತ್ತನೇ ವಾರ್ಡ್ ನಲ್ಲಿ ಹಾದು ಹೋಗಿರುವ ಟಿಬಿ ವೃತ್ತದಿಂದ ತಾಲೂಕು ಕಛೇರಿ ಸೇತುವೆವರೆಗಿನ 1217.30 ಲಕ್ಷ ವೆಚ್ಚದ ಮುಖ್ಯ ರಸ್ತೆ ಅಗಲೀಕರಣ, ವೀಡಿಯನ್ ಮತ್ತು ಚರಂಡಿ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನಡೆಸಿದ್ದು ತ್ವರಿತ ಗತಿಯಲ್ಲಿ ಕಟ್ಟಡಗಳ ತೆರವು ಕಾರ್ಯ ಮುಗಿಸಲಾಗುವುದು.
ಈಗಾಗಲೇ ರಸ್ತೆ ಪಕ್ಕದ ಸರ್ಕಾರಿ ಕಟ್ಟಡಗಳ ತೆರವು ಕಾರ್ಯ ನಡೆಯಲಿದ್ದು ಉಳಿದ ಕಟ್ಟಡಗಳ ತೆರವು ಕಾರ್ಯ ನಿರಂತರವಾಗಿ ನಡೆಯಲಿದೆ. ಟ್ರಾಫಿಕ್ ಸಮಸ್ಯೆಯಿಂದ ಬಳಲಿದ ನಗರದ ಜನತೆಗೆ ಇನ್ನಾದರೂ ಸುಗಮ ಹಾಗೂ ಸುರಕ್ಷತೆಯ ಸಂಚಾರ ಒದಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸದಸ್ಯರಾದ ಬಿ.ಎನ್ ಪ್ರಕಾಶ್, ಜಗದೀಶ್, ವಿಠ್ಠಲ್ ಪಾಂಡುರಂಗ, ಗುಂಡೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಮುಖಂಡರಾದ ಸಾದತ್ ವುಲ್ಲಾ, ಕಲ್ಲಟ್ಟಿ ಹರೀಶ್, ಅಜೀಜ್, ಶಿವಕುಮಾರ್, ದಾದಾಪೀರ್, ಮಾಯಾವರ್ಮ, ಜ್ಞಾನೇಶ್ ಮುಂತಾದವರು ಹಾಜರಿದ್ದರು.
ರಸ್ತೆ ಅಗಲೀಕರಣ ಕಾಮಗಾರಿ ಚಾಲನೆಯ ಪ್ರಯುಕ್ತ ಸೋಮವಾರ ನಗರದ ರಾಮಮಂದಿರದ ಗುರುತು ಮಾಡಿದ ಜಾಗ ಮತ್ತು ತಾಲೂಕು ಕಚೇರಿ ಬಳಿಯ ಸ್ಮಶಾನದ ಬಳಿ ಕಟ್ಟಡ, ಕಾಂಪೌಂಡ್ ತೆರವುಗೊಳಿಸಲಾಯಿತು.
“ಬಹಳಷ್ಟು ವರ್ಷದ ನಗರದ ಜನರ ಬೇಡಿಕೆಯಂತೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಗರೋತ್ಥಾನ ಹಂತ 4 ರಲ್ಲಿ 12 ವರೆ ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಅಗಲೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಸಾರ್ವಜನಿಕರ ಓಡಾಟಕ್ಕೆ, ವಾಹನ ಸಂಚಾರಕ್ಕೆ ನಗರದ ಸೌಂದರ್ಯಕ್ಕೆ ರಸ್ತೆ ಅಗಲೀಕರಣ ಅತ್ಯವಶ್ಯಕ ವಾಗಿದ್ದು ಕಟ್ಟಡಗಳ ಮಾಲೀಕರುಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ನಗರಸಭಾಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರುಗಳು ರಸ್ತೆ ಅಗಲೀಕರಣಕ್ಕೆ ಕಾಳಜಿ ವಹಿಸಿದ್ದು ಆದಷ್ಟು ಬೇಗ ರಸ್ತೆ ಅಗಲೀಕರಣ ಆಗಲಿದೆ”. ಎ.ವಾಸಿಂ, ನಗರಸಭೆ ಪೌರಾಯುಕ್ತ.