ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶಾಲಾ ಕಾಲೇಜ್ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಬುದ್ದಿ ಹೇಳುವಂತ ಶಿಕ್ಷಕರು ಉಪನ್ಯಾಸಕರು ಪ್ರಸ್ತುತ ಸಮಾಜಕ್ಕೆ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ 2001-02ರಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುಶಿಷ್ಯರ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಗುರುಗಳು ಸಾಕಷ್ಟು ಸಲ ನನಗೆ ತಿದ್ದಿ ತೀಡಿ ಬುದ್ದಿ ಹೇಳಿದ್ದರಿಂದಲೇ ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ.
ಅದೇ ರೀತಿ ಇಂದಿನ ಶಿಕ್ಷಕರು ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಮಾದರಿ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಾಲೆಯನ್ನು ಶಿಕ್ಷಕ ವೃಂದವನ್ನು ಅಭಿನಂದಿಸುವ ಕಾರ್ಯಕ್ರಮಗಳು ಮುಂದಿನ ಯುವ ಪೀಳಿಗೆಗಳಿಗೆ ಮಾದರಿಯಾಗುತ್ತವೆ ಎಂದು ತಿಳಿಸಿದರು.
ಸನ್ಮಾನಿತ ಗುರುಗಳಾದ ಕೆ.ರುದ್ರಪ್ಪ, ಜೆ.ರಾಜು, ಹೆಚ್.ಓ ತಿಪ್ಪೇಸ್ವಾಮಿ, ಹೆಚ್.ಟಿ.ಚಂದ್ರಶೇಖರ, ಬಿ.ತಿಪ್ಪೇಸ್ವಾಮಿ, ಚಂದ್ರಯ್ಯ, ಜಿ.ಎಸ್.ನಾಗರಾಜ್, ಟಿ.ಸಿ.ಶಾಂತಪ್ಪ, ಬಿ.ಕೃಷ್ಣಪ್ಪ, ಯೋಗರಾಜ್, ಗುರುಲಿಂಗಪ್ಪ, ದುರ್ಗೇಶ್, ರಾಜು ಇವರುಗಳನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಆಯೋಜಕ ಶಿಷ್ಯರಾದ ಭೈರೇಶ್ ಪಟೇಲ್, ರಂಗಸ್ವಾಮಿ, ರಜಿಯಾ ಸುಲ್ತಾನ್, ನರಸಿಂಹ ಮೂರ್ತಿ, ಚಿದಾನಂದ್ ಮುಂತಾದ ಹಳೆಯ ಗೆಳೆಯರು ಆತ್ಮೀಯವಾಗಿ ಸನ್ಮಾನಿಸಿದರು.
ಸನ್ಮಾನಿತರಾದ ಗುರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ನಮ್ಮ ಕೈಯಲ್ಲಿ ಕಲಿತ ಇದೆ ಕಾಲೇಜ್ ನಲ್ಲಿ ಓದಿ ದೊಡ್ಡವರಾಗಿ ಹಲವು ಉನ್ನತ ಸ್ಥಾನ ಮಾನದಲ್ಲಿದ್ದೀರಿ. ಕಳೆದ ನೆನಪುಗಳನ್ನು ಮೆಲುಕು ಹಾಕುತ್ತಾ ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಖುಷಿ ತಂದಿದೆ. ಉನ್ನತ ಹುದ್ದೆಯಲ್ಲಿ ಇದ್ದು ಕಲಿತ ಶಾಲೆಯನ್ನು ಹಾಗೂ ಶಿಕ್ಷಕರನ್ನು ಗೌರವಿಸುವ ನೆನಪಿಸುವ ಈ ಕಾರ್ಯವು ಶಿಕ್ಷಕರ ಕಾರ್ಯಕ್ಕೆ ಸಾರ್ಥಕತೆ ಮೆರೆಗೂ ತಂದುಕೊಟ್ಟಿದೆ ಎಂದು ಭಾವುಕರಾದರು.
ಹಳೆಯ ವಿದ್ಯಾರ್ಥಿಗಳು ಮಾತನಾಡಿ, ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸಿದಂತಾಯಿತು ಎಂದರು.
ಶಾಲೆಯಲ್ಲಿ ಕಲಿತಿರುವ ಸುಕ್ಷಣಗಳನ್ನು ಮೆಲಕು ಹಾಕುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಕರೊಂದಿಗೆ ಶಾಲೆಯಲ್ಲಿ ನಡೆದ ಸಿಹಿ ಕಹಿ ವಿಷಯಗಳನ್ನು ಮುಕ್ತ ಮನಸ್ಸಿನಿಂದ ವಿದ್ಯಾರ್ಥಿಗಳು ತಮ್ಮೆಲ್ಲಾ ನೆನಪುಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವ ಮೂಲಕ ಶಾಲೆಯ ನೆನಪುಗಳನ್ನು ಮರುಕಳಿಸಿದರು.
ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಅಚ್ಚು ಕಟ್ಟಾಗಿ ನಡೆಯಿತು. ಕಾರ್ಯಕ್ರಮದ ನಂತರ ಶುಚಿ-ರುಚಿಯಾದ ಭೋಜನವನ್ನು ಎಲ್ಲರೂ ಒಟ್ಟಾಗಿ ಸವಿಯುವ ಮೂಲಕ ಸಂಭ್ರಮಾಚರಣೆಯಿಂದ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಪ್ರಾಂಶುಪಾಲ ಕೆ.ಈ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.