ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ವಿವಿಧ ಭಾಗಗಳ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಹಿರಿಯ ಮುಖಂಡ ಎಂ ರವೀಂದ್ರಪ್ಪ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಬೃಹತ್ ಗುಂಡಿ ಬಿದ್ದಿದ್ದು, ಗುಂಡಿ ತುಂಬಾ ನೀರು ನಿಂತು ಕೇಸರು ಗದ್ದೆಯಂತಾಗಿದೆ. ಅಧಿಕಾರಿಗಳು ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದ್ದಾರೆ.
ವಯಸ್ಸಾದವರು, ವಾಹನ ಸವಾರರು ಹಾಗೂ ರಾತ್ರಿ ವೇಳೆ ಓಡಾಡುವಾಗ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ.
ಸರ್ಕಾರ ಗುಂಡಿಗಳನ್ನು ಮುಚ್ಚುವಲ್ಲಿ ವಿಫಲವಾಗಿದ್ದು, ಐದು ಗ್ಯಾರಂಟಿಗಳ ಜೊತೆಗೆ ಗುಂಡಿಭಾಗ್ಯ ಗ್ಯಾರಂಟಿ ಯೋಜನೆ ಸೇರಿಕೊಂಡಿದೆ ಎಂದು ಸರ್ಕಾರದ ವಿರುದ್ಧ ರವೀಂದ್ರಪ್ಪ ಅವರು ಕಿಡಿಕಾರಿದ್ದಾರೆ.

ಧರ್ಮಪುರ, ಮಸ್ಕಲ್, ಬಬ್ಬೂರು, ಓಬೆನಹಳ್ಳಿ ಗೇಟ್ ವೇದಾವತಿ ಸೇತುವೆ ಮೇಲೆ ಗುಂಡಿಗಳ ದರ್ಬಾರು, ಪ್ರಾಣ ಕೈಯಲ್ಲಿಡಿದು ಸಂಚಾರ ಮಾಡುವ ವಾಹನ ಸವಾರಿಗೆ ತೀವ್ರ ತೊಂದರೆಯಾಗುತ್ತಿದೆ.
ಮಳೆ ಸುರಿದರೆ ರಸ್ತೆ ಗುಂಡಿಗಳಲ್ಲಿ ಸಂಪೂರ್ಣ ನೀರು ತುಂಬಿಕೊಂಡು ಗುಂಡಿಗಳು ಕಾಣದಂತಾಗುತ್ತವೆ. ಈ ಸಂದರ್ಭದಲ್ಲಿ ಬೈಕ್ ಸವಾರರು ಗುಂಡಿಯೊಳಗೆ ಬಿದ್ದು ಎದ್ದು ಹೋಗುವುದು ಸಾಮಾನ್ಯ ಎಂಬಂತಾಗಿದೆ. ಇನ್ನು ಕತ್ತಲಾದರೆ ಕೆಲವು ಈ ಮಾರ್ಗದ ಸಂಚಾರವೇ ಕಷ್ಟವಾಗಿದೆ.
ಇನ್ನು ನಗರದ ರಸ್ತೆ ಅಗಲೀಕರಣ ಕಾಮಗಾರಿ ಕೂಡ ಆಮೆಗತಿಯಲ್ಲಿ ಸಾಗುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ಹೇಳಿದಂತೆ ನಡೆದುಕೊಂಡಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ರವೀಂದ್ರಪ್ಪ ಹೇಳಿದರು.

