ಮಂತ್ರಿಗಳು ವೇಷ ಮರೆಸಿಕೊಂಡು ಒಮ್ಮೆ ಸುತ್ತಾಡಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೇಷ ಮರೆಸಿಕೊಂಡು ಮಂತ್ರಿಗಳು ಒಮ್ಮೆ ಸುತ್ತಾಡಿ ಅನುಭವ ಪಡೆಯಲಿ…..
ಸನ್ಮಾನ್ಯ ಮುಖ್ಯಮಂತ್ರಿಗಳೇ, ಒಮ್ಮೆ ವೇಷ ಮರೆಸಿಕೊಂಡು ಚಿಂಚೋಳಿ ತಾಲ್ಲೂಕಿನ ಒಂದು ಸರ್ಕಾರಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆಂದು ದಾಖಲಾಗಿ ನೋಡಿ, ದಯವಿಟ್ಟು,…..‌.

ಮಾನ್ಯ ಗೃಹಮಂತ್ರಿಗಳೆ ಒಮ್ಮೆ ಅಪರಿಚಿತರಂತೆ ಶಿಕಾರಿಪುರ ತಾಲ್ಲೂಕಿನ ಯಾವುದಾದರೂ ಒಂದು ಪೋಲಿಸ್ ಸ್ಟೇಷನ್ನಿನ್ನಲ್ಲಿ ನಿಮ್ಮ ಮೇಲೆ ರಾಜಕಾರಣಿಯೊಬ್ಬನಿಂದ ಹಲ್ಲೆಯಾಗಿದೆಯೆಂದು ದೂರು ಕೊಟ್ಟು ನೋಡಿ, ದಯವಿಟ್ಟು……

ಮಾನ್ಯ ಆಹಾರ ಸಚಿವರೆಒಮ್ಮೆ ಹಿರಿಯೂರಿನಲ್ಲಿ ಯಾರಿಗೂ ನಿಮ್ಮ ಪರಿಚಯ ಗೊತ್ತಾಗದಂತೆ ರೇಷನ್ ಅಂಗಡಿಯಲ್ಲಿ ಸೆಕ್ಯುರಿಟಿಯಾಗಿ ಒಂದು ದಿನ ಕೆಲಸ ಮಾಡಿ ನೋಡಿ, ದಯವಿಟ್ಟು…..

ಮಾನ್ಯ ಕಾರ್ಮಿಕ ಸಚಿವರೆ, ಒಮ್ಮೆ ಹರಿದ ಬಟ್ಟೆ ಹಾಕಿಕೊಂಡು ಹೊಸಕೋಟೆಯಲ್ಲಿ ಬೀಡಿ ಕಟ್ಟುವ ಕೆಲಸಗಾರನಾಗಿ ದುಡಿದು ನೋಡಿ, ದಯವಿಟ್ಟು….

ಮಾನ್ಯ ಮಕ್ಕಳ ಕಲ್ಯಾಣ ಸಚಿವರೆಒಮ್ಮೆ ದಾವಣಗೆರೆಯ ಯಾವುದಾದರೂ ಹೋಟೆಲ್ಲಿನಲ್ಲಿ ನಿಮ್ಮ ಮಗನನ್ನು ತಟ್ಟೆ ಲೋಟ ತೊಳೆಯುವ ಬಾಲಕಾರ್ಮಿಕನಾಗಿ ಕೆಲಸಕ್ಕೆ ಸೇರಿಸಿ ನೋಡಿ, ದಯವಿಟ್ಟು…..

ಮಾನ್ಯ ಶಿಕ್ಷಣ ಸಚಿವರೆಇಂಡಿ ತಾಲ್ಲೂಕಿನ ಒಂದು ಹಳ್ಳಿಯಲ್ಲಿ ಸರ್ಕಾರಿ ಶಾಲೆಯಲ್ಲಿ ನಿಮ್ಮ ಮಗನನ್ನು ಒಂದು ತಿಂಗಳು ಓದಿಸಿ ನೋಡಿ, ದಯವಿಟ್ಟು…..

ಮಾನ್ಯ ಸಮಾಜ ಕಲ್ಯಾಣ ಸಚಿವರೆಮುಳಬಾಗಿಲು ತಾಲ್ಲೂಕಿನ ಸರ್ಕಾರಿ ಹಾಸ್ಟಲಿನಲ್ಲಿ ಒಮ್ಮೆ ಅಡುಗೆ ಭಟ್ಟನಾಗಿ ಕೆಲಸ ಮಾಡಿ ನೋಡಿ, ದಯವಿಟ್ಟು…..

ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರೆಹಳೆಯ ಮಾಸಲು ಬಟ್ಟೆ ತೊಟ್ಟು ಬೆಂಗಳೂರಿನ ಯಾವುದಾದರೂ ಒಂದು ಮಾಲ್ ನಲ್ಲಿ ಒಂದಿಡೀ ದಿನ ಸುತ್ತಾಡಿ ಬನ್ನಿ, ದಯವಿಟ್ಟು…..

ಮಾನ್ಯ ಕೃಷಿ ಸಚಿವರೆಅಮಾಯಕರಂತೆ ಎಪಿಎಂಸಿ ಮಾರುಕಟ್ಟೆಯಲ್ಲಿ ನಾಲ್ಕು ಚೀಲ ಸೊಪ್ಪು ಮಾರಿ ಬನ್ನಿ ಒಮ್ಮೆ, ದಯವಿಟ್ಟು…‌‌

ಮಾನ್ಯ ನಗರಾಭಿವೃದ್ಧಿ ಸಚಿವರೆಒಮ್ಮೆ ಯಾರಿಗೂ ತಿಳಿಯದಂತೆ ಬೆಳಗಾವಿಯ ಸ್ಲಂನಲ್ಲಿ ಒಂದು ರಾತ್ರಿ ವಾಸಿಸಿ ಬನ್ನಿ, ದಯವಿಟ್ಟು……
ಮಾನ್ಯ ಮಹಿಳಾ ಕಲ್ಯಾಣ ಸಚಿವರೆ
ಒಮ್ಮೆ ಆಕರ್ಷಕ ಸೀರೆಯುಟ್ಟು ಲಿಪ್ ಸ್ಟಿಕ್ ಹಚ್ಚಿಕೊಂಡು ರಾಜ್ಯದ ಯಾವುದಾದರೂ ಒಂದು ಸರ್ಕಾರಿ ಬಸ್ ನಿಲ್ಲಾಣದ ಬಳಿ ನಿಂತು ಜನರ ನಡವಳಿಕೆ ಗಮನಿಸಿ ಬನ್ನಿ, ದಯವಿಟ್ಟು…..

ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರೆ, ಒಮ್ಮೆ ಕನಕಪುರದ ಸುತ್ತ ಮುತ್ತ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿ ನೋಡಿ, ದಯವಿಟ್ಟು…….

ಇನ್ನೂ ಇನ್ನೂ ಎಲ್ಲಾ ಸಚಿವರೂ ಸಹ ತಮ್ಮ ಇಲಾಖೆಗೆ ಸಂಬಂಧಿಸಿದ ವಿಷಯಗಳಲ್ಲಿ ವೇಷ ಮರೆಸಿಕೊಂಡು ಪ್ರಯತ್ನಿಸಿ………………………

ಆಗ ತಿಳಿಯುತ್ತದೆ ನಿಮಗೆ ಸರ್ಕಾರದ ಸ್ಥಿತಿಸಮಾಜದ ಪರಿಸ್ಥಿತಿಜನರ ದುಸ್ಥಿತಿ, ಅಧಿಕಾರಿಗಳ ವಿಕೃತಿ, ಜನರ ನಿಜವಾದ ತಿಥಿ…ಛೆ….ಛೆ…..

ವಿಧಾನಸೌಧದ ಅಪಾರ ಭದ್ರತೆಯನೂರಾರು ಸೇವಕರ, ಎಲ್ಲಾ ಅತ್ಯುತ್ತಮ ಸೌಕರ್ಯದನಿಮ್ಮ ಚೇಲಾಗಳು ಸುತ್ತುವರಿದ ಸ್ಥಿತಿಯಲ್ಲಿ ಕುಳಿತು, ಅಂಕಿ ಸಂಖ್ಯೆಗಳ ಅಭಿವೃದ್ಧಿಯ ಆಟವಾಡುತ್ತಾ, ವಾಸ್ತವದಿಂದ, ಜನರ ಸಂಕಷ್ಟಗಳಿಂದ ಬಹಳ ದೂರ ಸರಿದಿದ್ದೀರ. ಸೀಟು ಪಡೆದು ಓಟು ಗಳಿಸಿ ಗೆಲ್ಲುವಲ್ಲಿ ನೀವು ತೋರಿಸುವ ಶ್ರಮಶ್ರದ್ಧೆ, ಚಾಣಕ್ಷತನದ ಶೇಕಡ 10% ರಷ್ಟಾದರೂ ಜನರ ಸೇವೆಗಾಗಿ ಮೀಸಲಿಟ್ಟಿದ್ದರೆ ಸಾಕಿತ್ತು .ನಿಮ್ಮ ಬದುಕು ಸಾರ್ಥಕವಾಗುತ್ತಿತ್ತು…..

ಇರಲಿಅದೃಷ್ಟವಂತರು ನೀವು. ಮೆರೆಯಿರಿ ಇನ್ನಷ್ಟು ದಿನ. ಜನರ ಅಜ್ಞಾನವನ್ನು ದುರುಪಯೋಗಪಡಿಸಿಕೊಂಡು.. ಆದರೆ ಮುಂದೆ ಖಂಡಿತ ಬದಲಾವಣೆ ಸಮೀಪಿಸುತ್ತಿದೆ ನಿಮ್ಮ ಅಂತ್ಯಕ್ಕೆ,ಜನ ಜಾಗೃತಗೊಳ್ಳುತ್ತಿದ್ದಾರೆ ಎಚ್ಚರ………. ಇದು ಯಾವುದೇ ಪಕ್ಷದ ಅಥವಾ ಈಗಿನ ಅಥವಾ ಆಗಿನ ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರದ ಬಗ್ಗೆ ಮಾತ್ರವಲ್ಲ. ಒಟ್ಟು ಸರ್ಕಾರಿ ವ್ಯವಸ್ಥೆಯ ಕುರಿತ ಲೇಖನ………………
ಲೇಖನ-ವಿವೇಕಾನಂದ. ಎಚ್. ಕೆ. 9844013068……

 

- Advertisement -  - Advertisement -  - Advertisement - 
Share This Article
error: Content is protected !!
";