ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಸಿದ್ದಾರೆ. ಶಾಸಕಾಂಗ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳ ದೊಡ್ಡ ವಾಕ್ಸಮರವೇ ನಡೆದು ಹೋಗಿದೆ. ಸಚಿವರು ಕೈಗೆ ಸಿಗುತ್ತಿಲ್ಲವೆಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ನಡೆಗೆ ಶಾಸಕರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಜರುಗಿದೆ.
ಸರ್ಕಾರ ರಚನೆಯಾಗಿ ಎರಡು ವರ್ಷಗಳಾಗಿವೆ, ಸಚಿವರು ಶಾಸಕರ ಕೈಗೆ ಸಿಗುತ್ತಲೇ ಇಲ್ಲ, ಭೇಟಿಗೆ ಯತ್ನಿಸಿದರೂ ಏನಾದರೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಸಿಕ್ಕಿದರೂ ಕೆಲಸಗಳನ್ನ ಮಾಡಿಕೊಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಲ್ಲಸಲ್ಲದಕಾರಣ ನೀಡಿ ನಮ್ಮನ್ನ ಸಾಗ ಹಾಕಲು ನೋಡುತ್ತಾರೆ. ಇದು ಹೀಗೆ ಆದರೆ ಸಚಿವರಾಗಿ ಯಾಕೆ ಇರಬೇಕು? ಸ್ಪಂದಿಸದ ಸಚಿವರನ್ನ ಮುಂದುವರೆಸುವ ಅಗತ್ಯ ಏನಿದೆ? ಮೊದಲು ತಮ್ಮ ನಡೆ ಬದಲಾಯಿಸಿಕೊಳ್ಳದಸಚಿವರನ್ನ ಸಂಪುಟದಿಂದ ಕೈಬಿಡಿ ಎಂಬ ಒತ್ತಾಯ ಕೇಳಿ ಬಂದಿತು ಎನ್ನಲಾಗಿದೆ.
ಕೌನ್ಸೆಲಿಂಗ್ ಮೂಲಕ ನಡೆಸುವ ವರ್ಗಾವಣೆ ಪ್ರಕ್ರಿಯೆ ಕೂಡಲೇ ಕೈಬಿಡುವಂತೆ ಕೆಲ ಶಾಸಕರು ಮುಖ್ಯಮಂತ್ರಿಗಳಲ್ಲಿ ಒತ್ತಾಯ ಮಾಡಿದ್ದಾರೆ. ಕೌನ್ಸಲಿಂಗ್ ಮೂಲಕ ಉಪನೋಂದಣಾಧಿಕಾರಿ ಹಾಗೂ ಪಿಡಿಒಗಳ ವರ್ಗಾವಣೆ ಆರಂಭಿಸಲಾಗಿದೆ. ತಮಗೆ ಬೇಕಾದವರು, ದಕ್ಷತೆಯಿಂದ ಕೆಲಸ ಮಾಡುವವರನ್ನ ವರ್ಗಾವಣೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಕೌನ್ಸಲಿಂಗ್ ಮೂಲಕ ವರ್ಗಾವಣೆ ಆಗುವವರು ತಮ್ಮ ಮಾತನ್ನ ಸರಿಯಾಗಿ ಕೇಳೋದೆ ಇಲ್ಲ. ಹಾಗಾಗಿ ಕೌನ್ಸಲಿಂಗ್ ವರ್ಗಾವಣೆ ತಕ್ಷಣ ನಿಲ್ಲಿಸಿ ಎಂದು ಮುಖ್ಯಮಂತ್ರಿಗಳಲ್ಲಿ ಕೆಲ ಶಾಸಕರು ದುಂಬಾಲು ಬಿದ್ದರು ಎನ್ನಲಾಗಿದೆ.
ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್ ಎಸ್ ಭೋಸರಾಜು ನಡುವೆ ವರ್ಗಾವಣೆಗೆ ಸಂಬಂಧಪಟ್ಟಂತೆ ಕಿತ್ತಾಟ ನಡೆದಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹಿರಂಗವಾಗಿಯೇ ಸಚಿವರು ಕಿತ್ತಾಟ ನಡೆಸಿ ಮುಜುಗರ ಉಂಟು ಮಾಡಿದ್ದಾರೆ. ಇಷ್ಟೇ ಅಲ್ಲದೆ ಬಿಜೆಪಿ ಶಾಸಕರಿಗೂ ಅನುಕೂಲ ಆಗುವಂತೆ ಸಚಿವರು ನಡೆದುಕೊಳ್ತಿದ್ದಾರೆ ಎಂದು ಶರಣ ಪ್ರಕಾಶ್ ಪಾಟೀಲ್ ಹಾಗೂ ಭೋಸರಾಜು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಕಿತ್ತಾಟ ನಡೆಸಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಬಳಿಕ ಇಬ್ಬರು ಸಚಿವರ ನಡುವೆ ಜಟಾಪಟಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಎಂದು ತಿಳಿದು ಬಂದಿದೆ.
ಸಚಿವ ಬೋಸರಾಜು ಅವರು ರಾಯಚೂರು ವರ್ಗಾವಣೆ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಯಚೂರು ಹಿಡಿತ ಸಾಧಿಸುವ ಸಲುವಾಗಿ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಬೋಸರಾಜು, ನಾನು ರಾಯಚೂರು ಜಿಲ್ಲೆಯವನು. ವರ್ಗಾವಣೆ ವಿಚಾರಕ್ಕೆ ಯಾಕೆ ಪತ್ರ ನೀಡುತ್ತೀರಾ ಎಂದು ಬೋಸರಾಜು ಆಕ್ಷೇಪಿಸಿದ್ದಾರೆ. ನಾನು ರಾಯಚೂರು ಉಸ್ತುವಾರಿ ಸಚಿವ ಶಾಸಕರು ಕೇಳಿದ್ದಾರೆ. ಅದಕ್ಕೆ ಪತ್ರ ನೀಡಿದ್ದೇನೆ ಎಂದ ಶರಣಪ್ರಕಾಶ್ ಪಾಟೀಲ್, ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವುದು ನನ್ನ ಕೆಲಸ ಎಂದು ಶರಣಪ್ರಕಾಶ್ ಪಾಟೀಲ್ ಮಾತಿಗೆ ಶಾಸಕ ಬಸನಗೌಡ ದದ್ದಲ್ ಗೆ ಲೇಟರ್ ಕೊಟ್ಟಿದ್ದಕ್ಕೆ ಬೋಸರಾಜು ಗರಂ ಆಗಿದ್ದಾರೆ ಎನ್ನಲಾಗಿದೆ.
ನನ್ನ ಕೇಳದೆ ಹೇಗೆ ಪತ್ರ ಕೊಟ್ರಿ ಅಂತ ಸಿಟ್ಟಾದ ಬೋಸರಾಜು, ಈ ವೇಳೆ ಮಾತಿಗೆ ಮಾತು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಗಲಾಟೆಯನ್ನು ಸ್ಥಳದಲ್ಲಿದ್ದ ಉಳಿದ ಶಾಸಕರೇ ತಣ್ಣಗೆ ಮಾಡಿದರು ಎನ್ನಲಾಗಿದೆ.
ಸಂಭ್ರಮಾಚರಣೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ತೀರ್ಮಾನಿಸಲಾಗಿದೆ.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮುಂಬರುವ ಮೇ.20ಕ್ಕೆ ಎರಡು ವರ್ಷ ಪೂರ್ಣವಾಗುತ್ತದೆ. ಈಹಿನ್ನೆಲೆಯಲ್ಲಿ ಅಂದು ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸಂಭ್ರಮಾಚರಣೆಯ ಕುರಿತು ಖುದ್ದು ಕಾಂಗ್ರೆಸ್ ಶಾಸಕಾಂಗ ಸಭೆಗೆ ಸಿಎಂ ಹಾಗೂ ಡಿಸಿಎಂ ಮಾಹಿತಿ ನೀಡಿದ್ದಾರೆ.
ಕ್ಷೇತ್ರವಾರು ಪ್ರವಾಸ:
ಅಧಿವೇಶನ ಪೂರ್ಣಗೊಂಡ ನಂತರ ಎಲ್ಲ ಸಚಿವರು ವಿಧಾನಸಭಾ ಕ್ಷೇತ್ರವಾರು ಟೂರ್ ಮಾಡಲು ಸಚಿವರಿಗೆ ಸಿಎಂ, ಡಿಸಿಎಂ ಸೂಚನೆ ನೀಡಿದರು. ಸಚಿವರ ಕಾರ್ಯವೈಖರಿಗೆ ಶಾಸಕರು ತೀವ್ರ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಕ್ಷೇತ್ರವಾರು ಪ್ರವಾಸಕ್ಕೆ ಸೂಚಿಸಲಾಗಿದೆ ಎನ್ನಲಾಗಿದೆ.
ಉಸ್ತುವಾರಿ ಸಚಿವರು ಕಾರ್ಯಕರ್ತರನ್ನು ಭೇಟಿ ಮಾಡಿ ಅಹವಾಲು ಕೇಳಬೇಕು. ಕಾಂಗ್ರೆಸ್ ಕಚೇರಿಗಳ ನಿರ್ಮಾಣ ಕೆಲಸಕ್ಕೆ ಉಸ್ತುವಾರಿ ಸಚಿವರು ಆದ್ಯತೆ ಕೊಡಬೇಕು ಎಂದು ತಾಕೀತು ಮಾಡಿದರು.
ಕ್ಷೇತ್ರ ಮರುವಿಂಗಡಣೆ:
ಶಾಸಕಾಂಗ ಪಕ್ಷದ ಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಕುರಿತು ಗಂಭೀರ ಚರ್ಚೆ ನಡೆದಿದೆ. ಚೆನ್ನೈನಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಸಂಬಂಧ ಸಭೆ ನಡೆಯಲಿದ್ದು ಕ್ಷೇತ್ರಮರುವಿಂಗಡಣೆಯಿಂದಾಗುವ ಅನ್ಯಾಯ ಚರ್ಚಿಸಲು ಸಿಎಂ ಹಾಗೂ ಡಿಸಿಎಂ ತಮಿಳುನಾಡಿಗೆ ಪಯಣ ಬೆಳೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮಾ.22ರಂದು ಸಭೆ ಕರೆದಿದ್ದಾರೆ. ಈ ಸಭೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ತೆರಳುವ ಬಗ್ಗೆ ಸಿಎಂ ಮಾಹಿತಿ ನೀಡಿದರು.
ಈಗಿರುವ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರು ವಿಂಗಡಣೆಗೆ ನಿರ್ಧರಿಸಿದರೆ ಕ್ಷೇತ್ರಗಳು ಕೈತಪ್ಪಲಿವೆ. ದಕ್ಷಿಣದ ರಾಜ್ಯಗಳು ಕೈಬಿಟ್ಟು ಹೋಗಲಿವೆ. ಈ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಹೋರಾಟ ಸಂಘಟಿಸಬೇಕಾಗಿದೆ. ಹೈಕಮಾಂಡ್ ಸಲಹೆ ಪಡೆದು ಚೆನ್ನೈಗೆ ಹೋಗುವುದಾಗಿ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.