ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಕೀಡಿಗೇಡಿಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಕಿಡಿಗೇಡಿಗಳು ಕೋಳಿ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಅವರು ಮೊಟ್ಟೆ ದಾಳಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದು
, ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊಟ್ಟೆ ಎಸೆತದಿಂದ ತಲೆಗೆ ಪೆಟ್ಟು ಬಿದ್ದಿದ್ದು ವೈದ್ಯೆ ಪಂಕಜಾ ಅವರು ಮುನಿರತ್ನ ಅವರಿಗೆ ಎರಡು ಗಂಟೆ ವರೆಗೆ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ ಮಂಜುನಾಥ್ ಆಸ್ಪತ್ರೆಗೆ ಭೇಟಿ ನೀಡಿ ಮುನಿರತ್ನ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಮುನಿರತ್ನ ನಾಯ್ಡು ತಲೆ ಹಿಂಭಾಗಕ್ಕೆ ಪೆಟ್ಟು ಬಿದ್ದಿದೆ. ಕೆಮಿಕಲ್‌ಮಾದರಿಯ ಪದಾರ್ಥದಿಂದ ಅವರಿಗೆ ಹೊಡೆದಿದ್ದಾರೆ.

ಇದರಿಂದ ತಲೆ ಸುತ್ತು, ವಾಂತಿ ಬಂದಂತೆ ಆಗುತ್ತಿದೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊಟ್ಟೆ ದಾಳಿಯಿಂದ ಮುನಿರತ್ನ ಕೂದಲು ಸ್ವಲ್ಪ ಬರ್ನ್ ಆಗಿದೆ. ಹಲವು ತಿಂಗಳಿಂದ ಕೆಲವು ರಾಜಕೀಯ ಘಟನೆಗಳನ್ನು ನೋಡಿದ್ರೆ ಮುನಿರತ್ನ ನಾಯ್ಡುಗೆ ಟಾರ್ಗೆಟ್ ಮಾಡುತ್ತಿದ್ದಂತೆ ಕಾಣುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ರಾಜಕೀಯ ಮಾಡಬೇಕು ಎಂದು ಸಂಸದರು ತಿಳಿಸಿದ್ದಾರೆ.

ಏನಿದು ಘಟನೆ-
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ಆರ್.ಆರ್.ನಗರದ ಶಾಸಕ ಮುನಿರತ್ನ ಅವರು ದಿ.ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ತಲೆಯ ಮೇಲೆ ಮೊಟ್ಟೆ ಎಸೆದಿದ್ದಾರೆ.

ಮೊಟ್ಟೆ ದಾಳಿಯಿಂದ ಗಾಯಗೊಂಡ ಶಾಸಕ ಮುನಿರತ್ನ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಕೃತ್ಯಕ್ಕೆ ಬಿಜೆಪಿ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರಿನ ಲಗ್ಗೆರೆ ಬಳಿಯ ಲಕ್ಷ್ಮೀದೇವಿ ನಗರದಲ್ಲಿ ಬುಧವಾರ ಮಧ್ಯಾಹ್ನ 12.30ಕ್ಕೆ ಶಾಸಕ ಮುನಿರತ್ನ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಕಾಂಗ್ರೆಸ್ ಕಾರ್ಯಕರ್ತರಿಂದ ಮೊಟ್ಟೆ ಎಸೆತ ಘಟನೆ ನಡೆದಿದೆ.

ಮೊಟ್ಟೆ ಎಸೆದ ಕೂಡಲೇ ತಲೆಗೆ ಪೆಟ್ಟಾಗಿದ್ದು, ಬಿಜೆಪಿ ಕಾರ್ಯಕರ್ತರು ಅವರನ್ನು ಸುತ್ತುವರಿದು ನಿಂತು ರಕ್ಷಣೆ ನೀಡಿದಲ್ಲದೆ ಮೊಟ್ಟೆ ಎಸೆದರು ಎನ್ನಲಾದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಗಾಯಗೊಂಡ ಮುನಿರತ್ನ ಅವರು ಸ್ಥಳದಲ್ಲಿ ಕೆಲಹೊತ್ತು ಕುಳಿತು ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸುವಂತೆ ಪ್ರತಿಭಟನೆ ಮಾಡಿದರು.

ಮುನಿರತ್ನ ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿದ ಬಳಿಕವೂ ಕಾಂಗ್ರೆಸ್ ಕಾರ್ಯಕರ್ತರು ವಾಜಿಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುನಿರತ್ನ ಭಾಗವಹಿಸಬಾರದು ಎಂದು ಘೋಷಣೆ ಕೂಗಿದರು.
ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರು ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಘಟನೆ ಕುರಿತು ಶಾಸಕ ಮುನಿರತ್ನ ಮಾತನಾಡಿ, ವಾಜಪೇಯ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬಂದಿದ್ದೆ. ಈ ಸಂದರ್ಭದಲ್ಲಿ 100-150 ಜನರು ಒಟ್ಟಿಗೆ ದಾಳಿ ಮಾಡಿದ್ದು, ನನ್ನ ಕೊಲೆಗೆ ಸಂಚು ಮಾಡಿದ್ದರು. ಆದರೆ, ಇಲ್ಲಿ ಪೊಲೀಸರು ಇದ್ದಿದ್ದರಿಂದ ನಾನು ಉಳಿದಿದ್ದೇನೆ. ಪೊಲೀಸರು ನನಗೆ ಪುನರ್ ಜನ್ಮ ಕೊಟ್ಟಿದ್ದಾರೆ. ಕೊಲೆ ಬೆದರಿಕೆ ಬಗ್ಗೆ ವಕೀಲರು ನನಗೆ ತಿಳಿಸಿದ್ದಾರೆ. ನಾನು ಪ್ರಧಾನಿ, ಸಿಬಿಐ ಅವರಿಗೆ ಪತ್ರ ಬರೆದಿದ್ದೆ. ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಪರಾಜಿತ ಅಭ್ಯರ್ಥಿ ಕುಸುಮಾ ಮೇಲೆ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಸಿದಂತೆ ಪೊಲೀಸರಿಗೆ ಗಲಾಟೆ ಆಗುತ್ತೆ ಎಂದು ಮುಂಚಿತವಾಗಿ ಗೊತ್ತಿತ್ತು. ಹೀಗಾಗಿಯೇ ಪೊಲೀಸರು ಮುಂಚಿತವಾಗಿ ಭದ್ರತೆ ಕೈಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಓಡಾಡಿದ್ದ ವ್ಯಕ್ತಿಗಳು ವಶಕ್ಕೆ ಪಡೆದಿದ್ದಾರೆ.

ಬೆಳಗ್ಗೆ 30 ಮಂದಿಯನ್ನ ಪೊಲೀಸರು ವಶಕ್ಕೆ ಪಡೆದು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಆದರೆ, ಉಳಿದ ಕೆಲವರು ಪ್ರತಿಭಟನೆ ಮಾತ್ರ ಮಾಡುತ್ತಾರೆ, ಯಾವುದೇ ಗಲಾಟೆ ಅಥವಾ ಅಹಿತಕರ ಘಟನೆ ಎಸಗುವುದಿಲ್ಲ ಎಂದು ಅಂದಾಜಿಸಿದ್ದರು. ಮೊಟ್ಟೆ ಎಸೆಯುತ್ತಾರೆ ಅನ್ನೋದು ಪೊಲೀಸರು ಕೂಡ ಊಹಿಸಿರಲಿಲ್ಲ. ಹೀಗಾಗಿ, ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ.

 

- Advertisement -  - Advertisement - 
Share This Article
error: Content is protected !!
";