ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನೇಕಾರರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ದೊಡ್ಡಬಳ್ಳಾಪುರ ಬಂದ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೂರತ್‌ನಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿರುವ ಸೀರೆಗಳ ಹಾವಳಿಯಿಂದ ನೇಕಾರಿಕೆ ಉದ್ಯಮದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಸರಿಪಡಿಸುವಂತೆ ಆಗ್ರಹಿಸಿ ಸೋಮವಾರ ವಿವಿಧ ನೇಕಾರ ಸಂಘಟನೆಗಳ ವತಿಯಿಂದ ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ರವರೆಗೆ ದೊಡ್ಡಬಳ್ಳಾಪುರದಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ವಿವಿಧ ನೇಕಾರ ಸಂಘಟನೆಗಳ ಮುಖಂಡರು, ಬೈಕ್ ಜಾಥಾ ಮೂಲಕ ತೆರೆದ ವಾಣಿಜ್ಯ ಮಳಿಗೆಗಳಿಗೆ ತೆರಳಿ ನೇಕಾರರ ಸಮಸ್ಯೆಗಳ ಬಗ್ಗೆ ತಿಳಿಸಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಆದರೆ ನಗರದ ಕೆಲವೆಡೆ ಅಂಗಡಿಗಳು ಮಾತ್ರ ಬಂದ್ ಆಗಿದ್ದು, ಉಳಿದಂತೆ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಕೂಲಿ ಕಾರ್ಮಿಕರು ಕೂಡ ನೇಕಾರರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಬೆಂಬಲವನ್ನು ನೀಡದೆ ಹೊರಗುಳಿದ್ದಿದ್ದು, ನಮ್ಮ ಸಮಸ್ಯಗಳನ್ನು ಮಾಲೀಕರು ಆಲಿಸುವಂತೆ ಆಗ್ರಹಿಸಿದರು. ಈ ನಡುವೆ ಮುಂದಿನ ಹೋರಾಟಗಳ ಬಗ್ಗೆ ಕೂಡ ನೇಕಾರರು ನಿರ್ಧಾರವನ್ನು ಕೈಗೊಂಡರು.
ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರರ ಸಂಘಟನೆಗಳು ನೀಡಿದ ಬಂದ್‌ಗೆ ಸೋಮವಾರ ಬೆಳಿಗ್ಗೆ ಕೆಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದರು. ಇನ್ನೂ ಕೆಲ ಅಂಗಡಿಗಳು ಮಧ್ಯಾಹ್ನದ ವೇಳೆ ಮತ್ತೆ ತೆರೆದವು. ಬೆಳಿಗ್ಗೆ ಬಂದ್‌ಗೆ ಬೆಂಬಲ ನೀಡಿ ಮುಚ್ಚಲಾಗಿದ್ದ ಬೀದಿ ಬದಿ ವ್ಯಾಪಾರವೂ ಕೂಡ ಮಧ್ಯಾಹ್ನದ ನಂತರ ಆರಂಭವಾಗಿತ್ತು.
ನಗರದ ಕೃಷ್ಣರಾಜ ಮಾರುಕಟ್ಟೆಗಳಲ್ಲಿ ಕೆಲ ಅಂಗಡಿಗಳು ಕೂಡ ಬಂದ್ ಆಗಿದ್ದು, ಮಾರುಕಟ್ಟೆಯಲ್ಲಿ ಜನಸಂಖ್ಯೆ ವಿರಳವಾಗಿತ್ತು. ಇದನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಜನ ಸಂಚಾರ ಸಾಮಾನ್ಯ ಸ್ಥಿತಿಯಲ್ಲಿತ್ತು ಸಾರಿಗೆ ವ್ಯವಸ್ಥೆ ಕೂಡ ಎಂದಿನಂತೆಯೇ ಇತ್ತು. ಯಾವುದೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರಲಿಲ್ಲ.
ಮುಂದಿನ ಹೋರಾಟಕ್ಕೆ ಯೋಜನೆ–
ನೇಯ್ಗೆ ಉದ್ಯಮದ ಬಿಕ್ಕಟ್ಟು ಪರಿಹರಿಸುವಂತೆ ಸೋಮವಾರ ದೊಡ್ಡಬಳ್ಳಾಪುರ ಬಂದ್ ಮಾಡಲಾಯಿತು. ಇದರ ನಂತರ ಬಹಿರಂಗ ಸಭೆ ನಡೆಸಿದ ನೇಕಾರರು ತಕ್ಷಣ ಸರಕಾರ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶ ಮಾಡದಿದ್ದರೆ ಜಿಲ್ಲಾಧಿಕಾರಿ, ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತದೆ.
ಜತೆಗೆ ಮುಖ್ಯಮಂತ್ರಿಗಳು, ಕೇಂದ್ರ ಜವಳಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ತಿಳಿಸಲು ತೀರ್ಮಾನಿಸಲಾಗಿದೆ ಎಂದು ನೇಕಾರ ಸಂಘಟನೆಗಳ ಮುಖಂಡರು ತಿಳಿಸಿದರು.
ಇಂದಿನ ಬಂದ್ ಗೆ ನೇಕಾರರ ಸಂಘಟನೆಗಳ ಜತೆಗೆ ತಾಲೂಕು ಕನ್ನಡ ಪಕ್ಷ, ಕರವೇ ಕನ್ನಡಿಗರ ಬಣ, ಸಿಪಿಐಂ, ಸಿಐಟಿಯು, ಕೆಲ ನಗರಸಭಾ ಸದಸ್ಯರು ಬೆಂಬಲ ಸೂಚಿಸಿದರು.

