ಶಾಸಕ ಬಸನಗೌಡ ಪಾಟೀಲ್ ​ಯತ್ನಾಳ್ ಪ್ರತಿಕ್ರಿಯೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ​ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಉಚ್ಛಾಟನೆ ಮಾಡಿದ ಬೆನ್ನಲ್ಲೇ ಪಕ್ಷದ ನಿರ್ಧಾರದ ಕುರಿತು ಯತ್ನಾಳ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿಯಿಂದ ಆದೇಶ ಹೊರಡಿಸಿದೆ.

ಬಿಜೆಪಿ ಶಿಸ್ತು ಸಮಿತಿ ಎರಡು ಬಾರಿ ಶೋಕಾಸ್​ ನೋಟಿಸ್‌ನೀಡಿದ್ದರೂ ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ, ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದರು. ಕೊನೆಗೆ ಫೆಬ್ರವರಿ 10 ರಂದು ಶೋಕಾಸ್‌ನೋಟಿಸ್‌ಗೆ ಯತ್ನಾಳ್‌ಉತ್ತರ ನೀಡಿದ್ದರು. ಯತ್ನಾಳ್ ಉತ್ತರ, ಸ್ಪಷ್ಟನೆ ಒಪ್ಪದ ಕೇಂದ್ರ ಶಿಸ್ತು ಸಮಿತಿ ಈ ನಿರ್ಧಾರ ಕೈಗೊಂಡಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ‘ಸತ್ಯವಂತರಿಗಿದು ಕಾಲವಲ್ಲ.. ದುಷ್ಟ ಜನರಿಗೆ ಸುಭಿಕ್ಷಕಾಲ. ಉಪಕಾರ ಮಾಡಿದರೆ ಅಪಕರಿಸುವ ಕಾಲ.. ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ.. ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ.. ಎಂದು ಮಾರ್ಮಿಕವಾಗಿ ಅವರು ತಿಳಿಸಿದ್ದಾರೆ.

ಸತ್ಯವಂತರಿಗಿದು ಕಾಲವಲ್ಲ ಎಂಬ ಪುರಂದರ ದಾಸರ ಸಾಲುಗಳನ್ನು ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಯತ್ನಾಳ್ ಅವರು, ‘ವಂಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ, ಪಕ್ಷದೊಳಗಿನ ಸುಧಾರಣೆಗಳ ವಿರುದ್ಧ ಮಾತನಾಡಿದ್ದಕ್ಕಾಗಿ, ಏಕವ್ಯಕ್ತಿ ದಬ್ಬಾಳಿಕೆ ತೆಗೆದುಹಾಕಿ ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿಪಡಿಸಲು ವಿನಂತಿಸಿದ್ದಕ್ಕಾಗಿ 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ. ತಪ್ಪನ್ನು .. ತಪ್ಪು ಎಂದು ತೋರಿಸಿದ್ದಕ್ಕೆ ನನಗೆ ಸಿಕ್ಕ ಪ್ರತಿಫಲವಿದು ಎಂದು ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

 

Share This Article
error: Content is protected !!
";