ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇದೇನು ಜಿಲ್ಲಾ ಕೇಂದ್ರವೇ, ಹಳ್ಳಿಯೇ ಒಂದು ಎತ್ತಿನ ಗಾಡಿ ಮುಖ್ಯ ರಸ್ತೆ ಹೋಗುತ್ತಿದ್ದರೆ ಆ ಎತ್ತಿನ ಗಾಡಿ ಪಾಸ್ ಆಗುವತನಕ ಹಿಂದೆ ಹೋಗುವಂತ ಪರಿಸ್ಥಿತಿ ಚಿತ್ರದುರ್ಗದಲ್ಲಿದೆ ಎಂದು ಶಾಸಕ ಎಂ.ಚಂದ್ರಪ್ಪ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಪ್ರಸಂಗ ಜರುಗಿತು.
ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ತ್ರೈ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆ ವಹಿಸಿ ನಡೆಸಿದ ಅನುಪಾಲನಾ ವರದಿಯ ಪರಿಶೀಲನೆ ವೇಳೆ ಶಾಸಕ ಎಂ.ಚಂದ್ರಪ್ಪ ಆಕ್ರೋಶ ವ್ಯಕ್ತ ಪಡಿಸಿದರು.
ಚಿತ್ರದುರ್ಗದ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತ, ಅಲ್ಲಿಂದ ಕನಕ ವೃತ್ತದವರೆಗೆ ಮುಖ್ಯ ರಸ್ತೆಯಲ್ಲಿ ಸಾಕಷ್ಟು ಒತ್ತುವರಿ ಮಾಡಲಾಗಿದೆ. 120 ಅಡಿ ಹೆಚ್ಚಿನ ರಸ್ತೆ ಇತ್ತು. ಈಗ ಒತ್ತುವರಿ ಮಾಡಲಾಗಿದೆ. ಇದು ಸಾಲದು ಎಂಬಂತೆ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಬೈಕ್ ಗಳು, ಕಾರುಗಳ ನಿಲುಗಡೆ ಮಾಡಲಾಗಿರುತ್ತದೆ. ಪಾದಚಾರಿಗಳು ಓಡಾಡಲು ಫುಟ್ ಪಾತ್ ಅನ್ನು ಅಂಗಡಿಗಳ ಮಾಲೀಕರು ಒತ್ತುವರಿ ಮಾಡಿ ಚೀಲ, ಇತರೆ ವಸ್ತುಗಳನ್ನು ಬೀದಿಯಲ್ಲಿಟ್ಟಿರುತ್ತಾರೆ, ಏಕೆ ರಸ್ತೆ ಅಗಲೀಕರಣ ಮಾಡುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳು, ನಗರಸಭೆ ಪೌರಾಯುಕ್ತರನ್ನು ಶಾಸಕ ಚಂದ್ರಪ್ಪ ತರಾಟೆ ತೆಗೆದುಕೊಂಡರು.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಏನು ಹೇಳಿದೆ ಗೊತ್ತಾ, ಮಸೀದಿ, ಮಂದಿರ, ಚರ್ಚ್ ಯಾವುದೇ ಇರಲಿ, ಮುಲಾಜಿಲ್ಲದೆ ರಸ್ತೆ ಅಗಲೀಕರಣ ಮಾಡಿ ಎಂದು ಸೂಚನೆ ನೀಡಿದೆ. ಸುಪ್ರೀಂ ಕೋರ್ಟ್ ಗಿಂತ ಹೈಕೋರ್ಟ್ ದೊಡ್ಡದೇ, ಹೈಕೋರ್ಟ್ ಹೇಗೆ ತಡೆಯಾಜ್ಞೆ ನೀಡಲು ಸಾಧ್ಯ, ಸುಪ್ರೀಂ ತೀರ್ಪನ್ನು ಹೈ ಕೋರ್ಟ್ ಗಮನಕ್ಕೆ ತಂದು ಕೂಡಲೇ ತಡೆಯಾಜ್ಞೆ ಇದ್ದರೆ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡುವಂತೆ ತಾಕೀತು ಮಾಡಿದರು.
ಪೌರಾಯುಕ್ತೆ ರೇಣುಕಾ ಮಾತನಾಡಿ, ಮುಖ್ಯ ರಸ್ತೆಯ ಮಧ್ಯ ಭಾಗದಿಂದ 21 ಮೀಟರ್ ಗುರುತು ಮಾಡಲಾಗಿದೆ. ಎರಡು ಬದಿಯಲ್ಲೂ 21 ಮೀಟರ್ ನಂತೆ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ. ಕೂಡಲೇ ಒತ್ತುವರಿ ಕಟ್ಟಡಗಳ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಲಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರು.
ಬ್ರಿಟಿಷರ ಕಾಲ ಮಾರ್ಕಿಂಗ್ ನೋಡಿ, ಎಷ್ಟು ರಸ್ತೆ ಮಾರ್ಜಿನ್ ಇತ್ತೋ ಅಷ್ಟು ಅಳತೆಯ ರಸ್ತೆ ಇದ್ದರೆ ಸರಿ, ಅಷ್ಟು ಅಳತೆ ಇಲ್ಲದಿದ್ದರೆ ರಸ್ತೆ ಒತ್ತುವರಿ ಮಾಡಿದ್ದರೆ ಯಾವುದೇ ನೋಟಿಸ್ ನೀಡದೆ ಕೂಡಲೇ ರಸ್ತೆ ಅಗಲೀಕರಣ ಮಾಡುವಂತೆ ಅವರು ಸೂಚನೆ ನೀಡಿದರು.
ಕಾರು, ಬೈಕ್ ಗಳ ನಿಲುಗಡೆ ಮಾಡಲು ಸೂಕ್ತ ಜಾಗ ಪತ್ತೆ ಮಾಡಿ. ಅಲ್ಲಿ ಬೈಕ್ ಮತ್ತು ಕಾರು ನಿಲುಗಡೆಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಯಾವುದೇ ವಾಹನ ನಿಲುಗಡೆ ಮಾಡದಂತೆ ಅಗತ್ಯ ಕ್ರಮ ವಹಿಸಿ ಎಂದು ಸಚಿವ ಸುಧಾಕರ್ ಸೂಚನೆ ನೀಡಿದರು.
“ಕಳೆದ ಒಂದೂವರೆ ವರ್ಷದಿಂದ ನನಗೆ ಕಚೇರಿ ವ್ಯವಸ್ಥೆ ಮಾಡಿಲ್ಲ, ನನಗೊಂದು ಕಚೇರಿ ವ್ಯವಸ್ಥೆ ಮಾಡಿ ಕೊಡಿ. ಮತ್ತು ಮಲ್ಲಾಪುರದ ಕಲುಷಿತ ಕೆರೆಯ ನೀರು ಗೋನೂರು ಕೆರೆ ಸೇರಿ ಅಲ್ಲಿಂದ ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ ಕೆರೆಗಳ ಮೂಲಕ ರಾಣಿ ಕೆರೆ ಸೇರುತ್ತಿದೆ. ಇದನ್ನ ತಪ್ಪಿಸಿ”. ವೀರೇಂದ್ರ ಪಪ್ಪಿ, ಶಾಸಕರು, ಚಿತ್ರದುರ್ಗ.
“ಹಿರಿಯೂರು-ಧರ್ಮಪುರ ಮುಖ್ಯ ರಸ್ತೆ ಸೇರಿದಂತೆ ತಾಲೂಕಿನ ಎಲ್ಲ ಒಳ ರಸ್ತೆಗಳಲ್ಲಿ ಜನ ಸಾಮಾನ್ಯರು, ವಾಹನಗಳು, ಎತ್ತಿನ ಗಾಡಿಗಳು ಸಂಚರಿಸಲು ಆಗದಂತೆ ಜಂಗಲ್ ಬೆಳೆದಿದೆ. ಇದರಿಂದ ಸಾಕಷ್ಟು ಅಪಘಾತಗಳಾಗುತ್ತಿದ್ದು ಕೂಡಲೇ ಜಂಗಲ್ ಕ್ಲೀನ್ ಮಾಡಿ ಅಪಘಾತ ತಪ್ಪಿಸಿ ಜೀವ ಉಳಿಸುವ ಕಾರ್ಯ ಮಾಡಿ”. ಸಿ.ತಿಮ್ಮಯ್ಯ, ಸದಸ್ಯರು, ಜಿಲ್ಲಾ ಕೆಡಿಪಿ.
“ಅರಣ್ಯ ಇಲಾಖೆ ಅಧಿಕಾರಿಗಳು ಕ್ಷುಲ್ಲಕವಾಗಿ ನಡೆದುಕೊಳ್ಳುತ್ತಾರೆ. ವಿವಿ ಸಾಗರದಿಂದ ಹೊಳಲ್ಕೆರೆ ತಾಲೂಕಿನಾದ್ಯಂತ ಕುಡಿಯುವ ನೀರು ಪೂರೈಕೆ ಮಾಡಲು ಸುಮಾರು 7 ಕಿಲೋ ಮೀಟರ್ ನಷ್ಟು ಪೈಪ್ ಲೈನ್ ಅರಣ್ಯ ಪ್ರದೇಶದಲ್ಲಿ ಸಾಗಬೇಕಿದೆ. ಅರಣ್ಯ ಇಲಾಖೆ ಅನಮತಿ ನೀಡದೆ ಉದ್ದಟತನ ತೋರುವುದು ಸರಿಯಲ್ಲ”. ಎಂ.ಚಂದ್ರಪ್ಪ, ಶಾಸಕರು, ಹೊಳಲ್ಕೆರೆ.
“ಪ್ರತಿ ಮನೆಗೆ ನೀರು ನೀಡುವ ಜೆಜೆಎಂ ಯೋಜನೆಯಲ್ಲಿ ಅಪೂರ್ಣ ಕಾಮಗಾರಿ ಮಾಡಲಾಗಿದೆ. ರಸ್ತೆಯನ್ನು ಸಿಕ್ಕ ಸಿಕ್ಕಲ್ಲಿ ಅಗೆಯಲಾಗಿದೆ. ಅಗೆದ ರಸ್ತೆ ದುರಸ್ತಿ ಮಾಡದೇ ಬಿಲ್ ಬರೆಸಿಕೊಳ್ಳುತ್ತಿದ್ದು ಯಾವುದೇ ಕಾರಣಕ್ಕೂ ರಸ್ತೆ ದುರಸ್ತಿ ಮಾಡುವ ತನಕ ಬಿಲ್ ನೀಡಬೇಡಿ”. ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು.