ವೈದ್ಯರೇ ಇಲ್ಲದ ಮೇಲೆ ಕಟ್ಟಡ ಇತರೆ ಮೂಲ ಸೌಲಭ್ಯಗಳೇಕೆ- ಶಾಸಕ ಚಂದ್ರಪ್ಪ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಆಸ್ಪತ್ರೆಗಳ ಬಗ್ಗೆ ಸರಿಯಾದ ಮಾಹಿತಿ ನೀಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿರುದ್ಧ ಶಾಸಕರು, ಸಚಿವರು ಆಕ್ರೋಶ ವ್ಯಕ್ತ ಪಡಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ ಸಚಿವರು, ಶಾಸಕರಿಗೆ ವೈದ್ಯರ ವಸ್ತುಸ್ಥಿತಿ ಕುರಿತು ಸರಿಯಾದ ಮಾಹಿತಿ ನೀಡಬೇಕು ಎಂದು ಡಿ.ಹೆಚ್.ಒ ರೇಣುಪ್ರಸಾದ್ ಗೆ ತಾಕೀತು ಮಾಡಿದರು.

ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ತ್ರೈ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆ ವಹಿಸಿ ನಡೆಸಿದ ಅನುಪಾಲನಾ ವರದಿಯ ಪರಿಶೀಲನೆ ವೇಳೆ ಶಾಸಕ ಎಂ.ಚಂದ್ರಪ್ಪ ಆಕ್ರೋಶ ವ್ಯಕ್ತ ಪಡಿಸಿದರು.

ಗ್ರಾಮೀಣ ಭಾಗದಲ್ಲಿರುವ ಆಸ್ಪತ್ರೆಗಳು, ಹೋಬಳಿ ಮಟ್ಟದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. 17 ಮಂದಿ ತಜ್ಞ ವೈದ್ಯರ ಹುದ್ದೆಗಳ ಖಾಲಿ ಇದ್ದರೆ ಜನ ಸಾಮಾನ್ಯರಿಗೆ ಹೇಗೆ ವೈದ್ಯಕೀಯ ಸೇವಾ ಸೌಲಭ್ಯ ದೊರೆಯಲು ಸಾಧ್ಯ ಎಂದು ಸಚಿವ ಡಿ.ಸುಧಾಕರ್ ಪ್ರಶ್ನಿಸಿದರು.

ಮೊಳಕಾಲ್ಮೂರಿನ ಆಸ್ಪತ್ರೆಯಲ್ಲಿ ಹರಿಗೆ ಮಾಡಿಸಲು ವೈದ್ಯರಿಲ್ಲ, ಅವರೆಲ್ಲ ಬಳ್ಳಾರಿ ಆಸ್ಪತ್ರೆ ಹೋಗುತ್ತಾರೆ. ಹೋಬಳಿ, ತಾಲೂಕು ಮಟ್ಟದ ಆಸ್ಪತ್ರೆ ವೈದ್ಯರು ರಿಸ್ಕ್ ತೆಗೆದುಕೊಳ್ಳುವುದಿಲ್ಲ, ರೋಗಿಗಳ ಬಂದ ತಕ್ಷಣ ಹಾಗೇ ಮುಂದಕ್ಕೆ ಸಾಗಿಸುತ್ತಾರೆ. ಇನ್ನೂ ಜಿಲ್ಲಾ ಆಸ್ಪತ್ರೆಯು ಇದಕ್ಕಿಂತ ಭಿನ್ನವಾಗಿಲ್ಲ.

ಅವರು ಕೂಡಾ ಬೆಂಗಳೂರು, ಮಣಿಪಾಲ, ಮಂಗಳೂರು, ದಾವಣಗೆರೆ ಕಡೆ ರೋಗಿಗಳನ್ನು ಕಳುಹಿಸುವ ವ್ಯವಸ್ಥೆ ಕೂಡಲೇ ಸ್ಥಗಿತ ಆಗಬೇಕು, ಸರ್ಕಾರ ಎಷ್ಟು ಅಂತ ಹಣ ಕೊಡುತ್ತದೆ ಎಂದು ಸಚಿವ ಸುಧಾಕರ್ ಕಿಡಿ ಕಾರಿದರು.

 

- Advertisement -  - Advertisement -  - Advertisement - 
Share This Article
error: Content is protected !!
";