ಚಂದ್ರವಳ್ಳಿ ನ್ಯೂಸ್, ಶಿರಾ:
ಶಿರಾ ನಗರದ ಪ್ರತಿಷ್ಠಿತ ಕುಂಚಿಟಿಗರ ಸಂಘದ ಆವರಣದಲ್ಲಿರುವ ರಂಗನಾಥ ಕಾಲೇಜ್ ಆವರಣದಲ್ಲಿ ಭಾನುವಾರ ನಡೆದ ಕುಂಚಶ್ರೀ ಪ್ಯಾಲೇಸ್ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಮತ್ತು ಮಹತ್ವದ ಘೋಷಣೆಗಳೊಂದಿಗೆ ನೆರವೇರಿತು.
ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಡಾ. ಹನುಮಂತನಾಥ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿ ಕುಂಚಿಟಿಗ ಸಮಾಜ ತನ್ನದೆ ಆದ ಸಮಸ್ಯೆ ಎದುರಿಸುತ್ತಿದೆ. ಸಮಾಜದ ಮಕ್ಕಳಿಗೆ ಉತ್ತಮ ಸಂಸ್ಕಾರ, ಉತ್ತಮ ಶಿಕ್ಷಣ ಕೊಡಿಸುವ ಕಡೆ ಪೋಷಕರು ಗಮನ ನೀಡಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ. ಗೌಡ ರವರು, ಶಿಕ್ಷಣದ ಬೆಳವಣಿಗೆಗೆ ಮತ್ತು ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಮಹತ್ವದ ಆರ್ಥಿಕ ನೆರವನ್ನು ಘೋಷಿಸಿದರು.
ವೇದಿಕೆ ಮೇಲೆಯೇ ಅವರು ಸಂಸ್ಥೆಗೆ ವೈಯಕ್ತಿಕವಾಗಿ 50 ಲಕ್ಷ ಹಾಗೂ ಸರ್ಕಾರದ ಅನುದಾನದ ಮೂಲಕ 50 ಲಕ್ಷ ಸೇರಿ ಒಟ್ಟು 1 ಕೋಟಿ ನೀಡುವುದಾಗಿ ಭರವಸೆ ನೀಡಿದರು. ಶಾಸಕರ ಈ ಘೋಷಣೆಗೆ ಸಭಿಕರಿಂದ ಭಾರೀ ಕರತಾಡನ ವ್ಯಕ್ತವಾಯಿತು.
ಅವರು ತಮ್ಮ ಭಾಷಣದಲ್ಲಿ, “ಶಿರಾದಲ್ಲಿ ಶಿಕ್ಷಣದ ಬೆಳವಣಿಗೆಗೆ ಈ ಹೊಸ ಕಟ್ಟಡವು ಬಹುದೊಡ್ಡ ಕೊಡುಗೆಯಾಗಲಿದೆ. ಪ್ರತಿಭೆಗೆ ಪ್ರೋತ್ಸಾಹ ನೀಡುವ ಇಂತಹ ಕಾರ್ಯಕ್ರಮಗಳು ಸಮಾಜದ ಪ್ರಗತಿಗೆ ಅಡಿಪಾಯ” ಎಂದು ಹೇಳಿದರು.
ಕಾರ್ಯಕ್ರಮದ ಮತ್ತೊಂದು ಭಾಗವಾಗಿ, ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಸಿ.ಎಂ ರಾಜೇಶ್ ಗೌಡ, ಕುಂಚಿಟಿಗ ಸಂಘದ ಅಧ್ಯಕ್ಷ ಕೆ.ಎಲ್. ಮುಕುಂದಪ್ಪ, ಖಾಯಂ ನಿರ್ದೇಶಕ ಸತೀಶ್ ಕೆ.ಮಲ್ಲಣ್ಣ, ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಿ.ಆರ್ ಮಂಜುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಆರ್.ನಾಗರಾಜು, ಟೌನ್ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಪಿ.ಎಸ್ ತ್ಯಾಗರಾಜು ಹಾಗೂ ಅನೇಕ ಸಮುದಾಯದ ಮುಖಂಡರು ಗ್ರಾಮಸ್ಥರು ವಿದ್ಯಾರ್ಥಿಗಳು ಹಾಜರಿದ್ದರು.

