ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರೈತ ಬೆವರು ಸುರಿಸಿ ಬೆಳೆಯುವ ಬೆಳೆಯನ್ನು ತೆಗೆದುಕೊಂಡು ಹೋಗುವ ಮಧ್ಯವರ್ತಿಗಳು ಲಾಭ ಗಳಿಸುತ್ತಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತ ಸಾಲಗಾರನಾಗುತ್ತಿದ್ದಾನೆ. ಇನ್ನಾದರೂ ರೈತರು ಎಲ್ಲಿ ಎಡವುತ್ತಿದ್ದೇವೆನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ರೈತರನ್ನು ಜಾಗೃತಿಗೊಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದಿಂದ ಹಂಪಯ್ಯನಮಾಳಿಗೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರೈತ ಸಂಘದ ಪುನಃಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಖಾಲಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತದೆಂಬ ಭ್ರಮೆಯಲ್ಲಿರಬೇಡಿ. ನೇಮಕ ಮಾಡಿಕೊಂಡರೆ ಸಂಬಳ ನೀಡಲು ಸರ್ಕಾರದಲ್ಲಿ ಹಣವಿಲ್ಲ. ದೇಶ ಸದೃಢವಾಗಬೇಕಾದರೆ ರೈತನ ಶ್ರಮವಿದೆ. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಹಾಗಾಗಿ ಸಾಲ ತೀರಿಸಲಾಗದಂತ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾನೆ. ರೈತರ ಸಂಘಟನೆಗಳಲ್ಲಿ ಓಳಾಗಬಾರದು. ಒಗ್ಗಟ್ಟಾಗಿದ್ದಾಗ ಮಾತ್ರ ಆಳುವ ಸರ್ಕಾರಗಳನ್ನು ಮಣಿಸಲು ಸಾಧ್ಯ. ದೊಡ್ಡ ಶಕ್ತಿಯಾಗಿ ರೈತರು ಬೆಳೆದಾಗ ರೈತ ಕುಲ ಉಳಿಯುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ರೈತ ಚಳುವಳಿಯ ಜೊತೆ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದಾಗ ರೈತ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಸಿಗುತ್ತದೆ. ದುಡಿಯುವ ವರ್ಗ ಒಗ್ಗಟ್ಟಾಗದಿದ್ದರೆ ಕೃಷಿ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಹಸಿರು ಟವಲ್‌ನ ಶಕ್ತಿ ರೈತರಿಗಿಂತ ಬೇರೆಯವರಿಗೆ ಚೆನ್ನಾಗಿ ಗೊತ್ತಿರುವುದರಿಂದ ದಂಧೆಕೋರರು ಹಸಿರು ಟವಲ್ ಬಳಸಿಕೊಳ್ಳುತ್ತಿರುವುದರ ವಿರುದ್ದ ರೈತರು ಜಾಗೃತರಾಗಬೇಕೆಂದು ಕರೆ ನೀಡಿದರು.
ರೈತರು ಹೆಗಲ ಮೇಲೆ ಹಾಕಿಕೊಳ್ಳುವ ಹಸಿರು ಟವಲ್‌ಗೆ ಮಹತ್ವವಿದೆ. ರೈತ ಪರ ಯೋಜನೆಗಳು ರೂಪುಗೊಂಡಿಲ್ಲದ ಕಾರಣ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಬದುಕಲು ರೈತ ದಿನನಿತ್ಯವೂ ಹೋರಾಡಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದಿದ್ದರೂ ಇನ್ನು ಸಂವಿಧಾನದ ಹಕ್ಕುಗಳು ರೈತರಿಗೆ ತಲುಪಿಲ್ಲ. ರೈತ ಎದೆಯುಬ್ಬಿಸಿ ನಡೆಯುವಂತ ಶಕ್ತಿ ಕೊಟ್ಟಿದ್ದು, ರೈತ ಚಳುವಳಿ. ಎಲ್ಲಾ ಧರ್ಮಕ್ಕಿಂತ ದೊಡ್ಡದು ರೈತ ಧರ್ಮ. ಅಧಿಕಾರದಲ್ಲಿರುವವರು ಧರ್ಮ ಜಾತಿಯನ್ನು ಎತ್ತಿ ಕಟ್ಟುವ ಮೂಲಕ ರೈತರನ್ನು ಹೊಡೆದಾಳುತ್ತಿದ್ದಾರೆ. ಅದಕ್ಕಾಗಿ ಧರ್ಮ ಜಾತಿಯನ್ನು ಮೀರಿ ರೈತರು ಒಂದಾಗಬೇಕು. ಗ್ರಾಮೀಣ ಕೃಪಾಂಕ ರೈತರ ಕೊಡುಗೆ. ಸರ್ಕಾರಿ ಶಾಲೆಗಳು ಮುಚ್ಚಿದರೆ ಬಡ ರೈತನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆಂದು ರೈತರನ್ನು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡುತ್ತ ಅತಿವೃಷ್ಟಿ, ಅನಾವೃಷ್ಟಿ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ರೈತ ಸಾಲಗಾರನಾಗುತ್ತಿದ್ದಾನೆ. ಚುನಾವಣೆ ಸಮಯದಲ್ಲಿ ಜಾತಿ ಆಧಾರದ ಮೇಲೆ ರೈತ ಸಂಘದಲ್ಲಿ ಒಡಕುಂಟಾಗುತ್ತದೆ. ನಿಮ್ಮಲ್ಲಿ ಒಗ್ಗಟ್ಟಿಲ್ಲದಿರುವುದು ಇದಕ್ಕೆ ಕಾರಣ. ಕೃಷಿಗೆ ಸಂಕಷ್ಟ ಎದುರಾಗಿದೆ. ಸಂಘಟಿತರಾಗಿದ್ದಾಗ ಮಾತ್ರ ರೈತ ಸಮುದಾಯ ನ್ಯಾಯ ಪಡೆಯಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ರೈತರೆ ನಿಜವಾದ ಮಣ್ಣಿನ ಮಕ್ಕಳು. ದೇಶಕ್ಕೆ ಅನ್ನ ನೀಡುವ ರೈತನ ಬದುಕು ಇನ್ನು ಸುಧಾರಣೆಯಾಗಿಲ್ಲ. ಎಲ್ಲರೂ ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ರೈತನ ಮೇಲೆ ಹಲ್ಲೆ ನಡೆದರೆ ಕೇಳುವವರು ಇಲ್ಲದಂತಾಗಿದ್ದಾರೆ. ರೈತನ ಶಕ್ತಿ ಮಾರ್ಕೆಟ್‌ನಲ್ಲಿ ಬಿದ್ದು ಹೋಗುತ್ತದೆ. ಹೆಗಲ ಮೇಲೆ ಹಸಿರು ಟವಲ್ ಹಾಕಿಕೊಳ್ಳಿ ಬದುಕು ಹಸನಾಗುತ್ತದೆ. ಸಮಸ್ಯೆಯನ್ನು ಮೆಟ್ಟಿ ನಿಲ್ಲಬೇಕಾದರೆ ಮೊದಲು ನೀವುಗಳು ಸಂಘಟಿತರಾಗಿ. ಪಿ.ಡಬ್ಲ್ಯುಡಿ. ಬ್ಯಾಂಕ್‌ನವರು ಸಾಲಕ್ಕಾಗಿ ರೈತರ ವಾಹನಗಳನ್ನು ಜಪ್ತಿ ಮಾಡುವುದನ್ನು ನಿಲ್ಲಿಸಿದ್ದು, ರೈತ ಸಂಘ. ಚುನಾವಣೆ ಬಂದಾಗ ಮತಗಳನ್ನು ಮಾರಿಕೊಳ್ಳಬೇಡಿ ಎಂದು ರೈತರಲ್ಲಿ ಮನವಿ ಮಾಡಿದರು.
ಉಗ್ರ ನರಸಿಂಹಗೌಡ, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ ಇವರುಗಳು ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ರಾಜ್ಯ ವಲಯ ಉಪಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಹಂಪಯ್ಯನಮಾಳಿಗೆ ಗ್ರಾಮದ ಮುಖಂಡ ಗೋವಿಂದರೆಡ್ಡಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ಗೊಲ್ಲರಹಟ್ಟಿ, ಬೊಮ್ಮನಹಳ್ಳಿ, ಹೊಸಮಾಳಿಗೆ ರೈತರು ರೈತ ಸಂಘದ ಪುನಃಶ್ಚೇತನ ಸಮಾರಂಭದಲ್ಲಿ ಭಾಗವಹಿಸಿದ್ದರು.

