ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಶೇಷ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ ಬಿಡುಗಡೆಯಾದ ಅನುದಾನ ಸಂಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಅನುಷ್ಠಾನದಲ್ಲಿ ಲೋಪ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜಿಲ್ಲೆಯ ತಾಮ್ರ ಅದಿರಿನ ಗಣಿಗಾರಿಕೆಯನ್ನು ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಿಲೀನ ಮಾಡಲಾಗಿದೆ. ಸದ್ಯ ಜಿಲ್ಲೆಯ ತಾಮ್ರ ಗಣಿಗಾರಿಕೆ ಮುಚ್ಚಿದೆ. ಪ್ರಸ್ತುತ ತಾಮ್ರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಹಟ್ಟಿ ಚಿನ್ನದ ಗಣಿ ಕಂಪನಿ ವಾರ್ಷಿಕವಾಗಿ ರೂ.1000 ಕೋಟಿ ಲಾಭಮಾಡುತ್ತಿದೆ.
ಇದರಲ್ಲಿ ಜಿಲ್ಲೆಯ ತಾಮ್ರ ಅದಿರಿನ ಗಣಿ ಪುನಶ್ಚೇತನಕ್ಕೆ ರೂ.100 ಕೋಟಿ ಬಿಡುಗಡೆ ಮಾಡಿದರೆ, ಜನರಿಗೆ ಉದ್ಯೋಗವಕಾಶಗಳು ದೊರಕುತ್ತವೆ. ಹೊಸದುರ್ಗ ತಾಲ್ಲೂಕನ್ನು ರಾಷ್ಟ್ರೀಯ ಸಿರಿಧಾನ್ಯಗಳ ವಲಯವನ್ನಾಗಿ ಘೋಷಿಸಿ ವಿಶೇಷ ಯೋಜನೆಗೆ ಶಿಫಾರಸ್ಸು ಮಾಡುವಂತೆ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮನವಿ ಮಾಡಿದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಜಿಲ್ಲೆಯ 100 ವರ್ಷಗಳ ಇತಿಹಾಸದಲ್ಲಿ 79 ವರ್ಷ ಬರಗಾಲಕ್ಕೆ ತುತ್ತಾಗಿದೆ. ಶೇ.30ರಷ್ಟು ಜನರು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಈ ಹಿಂದೆ ನಂಜುಂಡಪ್ಪ ವರದಿ ಆಧಾರಿಸಿ ನೀಡಿದ ವಿಶೇಷ ಅಭಿವೃದ್ಧಿ ಯೋಜನೆ ಅನುದಾನದಿಂದ ಸರ್ವಾಂಗೀಣ ಅಭಿವೃದ್ಧಿ ಆಗಿಲ್ಲ. ಆದ್ದರಿಂದ ಸಮಿತಿಯು ಶಿಕ್ಷಣ, ಕೃಷಿ, ತೋಟಗಾರಿಕೆ ಹೆಚ್ಚಿನ ಒತ್ತು ನೀಡಬೇಕಿದೆ. ಜನರಿಗೆ ಉದ್ಯೋಗ, ರೈತರಿಗೆ ಅನುಕೂಲ ಹಾಗೂ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶಿಫಾರಸ್ಸು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜೊತೆಗೆ ಕಾಡುಗೊಲ್ಲರ ಜನಸಂಖ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿದೆ. ಈಗಾಗಲೇ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಸಮಿತಿ ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಜಿಲ್ಲೆಯ ಶಿಕ್ಷಣ ಹಾಗೂ ಉದ್ಯೋಗಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.
ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುವ ಯೋಜನಾ ಇಲಾಖೆ ಕಾರ್ಯದರ್ಶಿ ಡಾ. ಆರ್.ವಿಶಾಲ್, ಸದಸ್ಯರಾದ ಡಾ.ಎಸ್.ಟಿ.ಬಾಗಲಕೋಟೆ, ಕೆ.ಎನ್.ಸಂಗೀತ, ಯೋಜನಾ ಇಲಾಖೆ ನಿರ್ದೇಶಕ ಚಂದ್ರಶೇಖರಯ್ಯ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಸೇರಿದಂತೆ ತುಮಕೂರು, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ವಿವಿಧ ಇಲಾಖೆ ಅಧಿಕಾರಿಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.