ಶಾಸಕ ಮುನಿರತ್ನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರ್​ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ಶಾಸಕ ಮುನಿರತ್ನ ಸೇರಿ 7 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ. 3 ಸಾವಿರ ಪುಟಗಳ ಚಾರ್ಜ್​ಶೀಟ್​​ನಲ್ಲಿ ಮುನಿರತ್ನ, ಸುಧಾಕರ್, ಇನ್ಸ್​ಪೆಕ್ಟರ್ ಐಯ್ಯಣ್ಣ ರೆಡ್ಡಿ, ಲೋಹಿತ್ ಗೌಡ, ಶ್ರೀನಿವಾಸ್, ಕಿರಣ್ ಕುಮಾರ್, ಮಂಜುನಾಥ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

ಆರೋಪಿಗಳು ಪಿಐಗಳು, ಎಸಿಪಿಗಳ ಅಶ್ಲೀಲ ಫೋಟೋ, ವಿಡಿಯೋ ಮಾಡಿರುವುದು ಚಾರ್ಜ್​ಶೀಟ್​ನಿಂದ ಬಯಲಾಗಿದೆ. ತಮ್ಮ ಪರ ಕೆಲಸ ಮಾಡುವಂತೆ ಮಾಡಲು ಬ್ಲ್ಯಾಕ್​ ಮೇಲ್ ಮಾಡಿದ ಬಗ್ಗೆಯೂ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಯಕರ ಅಶ್ಲೀಲ ಫೋಟೋ ತೋರಿಸುವಂತೆ ಹೇಳಿರುವುದನ್ನೂ ಉಲ್ಲೇಖಿಸಲಾಗಿದೆ. ಎಚ್​ಐವಿ ಸೋಂಕಿತ ಸಂತ್ರಸ್ತೆ, ನೊಂದ ಮಹಿಳೆಯಿಂದ ಸಿಐಡಿ ಅಧಿಕಾರಿಗಳು ಹೇಳಿಕೆಗಳನ್ನು ಪಡೆದಿದ್ದರು. ಜತೆಗೆ ಸಾಕ್ಷ್ಯಗಳ ಹೇಳಿಕೆಯನ್ನೂ ಪಡೆಯಲಾಗಿತ್ತು. ಶಾಸಕ ಮುನಿರತ್ನರನ್ನೂ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಬರೋಬ್ಬರಿ 63 ಪ್ರಶ್ನೆಗಳನ್ನು ಮುನಿರತ್ನ  ಮುಂದಿಡಲಾಗಿತ್ತು.

ಮುನಿರತ್ನ ವಿರುದ್ಧ ಐಪಿಸಿ ಕಲಂ 354(ಎ),354(ಸಿ), 376(2)(ಎನ್),308, 270,120ಬಿ,119,504,506,201,511, ರೆ/ವಿ 34 ಐಪಿಸಿ, ಕಲಂ 66, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು.

ಏನಿದು ಪ್ರಕರಣ?
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಆರೋಪ
, ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣವನ್ನು ಶಾಸಕ ಮುನಿರತ್ನ ಎದುರಿಸುತ್ತಿದ್ದಾರೆ. ಮುನಿರತ್ನ ವಿರುದ್ಧದ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಯತ್ನದ ಆರೋಪ ಬಹಳ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಮುನಿರತ್ನ ನಾಯ್ಡು ಬಳಿ ಹಲವರ ಖಾಸಗಿ ಅಶ್ಲೀಲ ವಿಡಿಯೋಗಳಿವೆ. ಮುನಿರತ್ನ ಅನೇಕ ಮಂದಿಯ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಅವರನ್ನು ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು. ರಾಜಕೀಯ ಎದುರಾಳಿಗಳನ್ನು ಮಣಿಸಲು ಅವುಗಳನ್ನು ಬಳಕೆ ಮಾಡುತ್ತಿದ್ದರು ಎಂದು ಸಂತ್ರಸ್ತೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪದಡಿ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.ಈ ಪ್ರಕರಣ ರಾಜಕೀಯವಾಗಿಯೂ ಕರ್ನಾಟಕದಲ್ಲಿ ಬಹಳಷ್ಟು ಸದ್ದು ಮಾಡಿತ್ತು. ಮುನಿರತ್ನ ಕಾಂಗ್ರೆಸ್ ನಾಯಕರ, ಅದರಲ್ಲಿಯೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪಗಳನ್ನು ಮಾಡಿದ್ದರು. ರಾಜಕೀಯವಾಗಿ ಮುಗಿಸಲು ಡಿಕೆ ಶಿವಕುಮಾರ್ ಕುತಂತ್ರ ಹೂಡಿದ್ದಾರೆ ಎಂದು ಅವರು ದೂರಿದ್ದರು.

Share This Article
error: Content is protected !!
";