ಜನಾಂಗೀಯ ನಿಂದನೆ ಮಾಡಿ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತೆ ಮಾಡಿದ ಶಾಸಕ ಮುನಿರತ್ನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರವರು ಗುತ್ತಿಗೆದಾರರೊಬ್ಬರೊಂದಿಗೆ ತನ್ನ ಹಣಕಾಸಿನ ವ್ಯವಹಾರ ಮಾತನಾಡುವ ಸಂದರ್ಭದಲ್ಲಿ ಎಗ್ಗಿಲ್ಲದೆ ತನ್ನ ಮಾತುಗಳಲ್ಲಿ ದಲಿತರನ್ನು ನಿಂದನೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ.

ಅಲ್ಲದೆ ಅವರು ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ರಾಷ್ಟ್ರ ಕಂಡ ಪ್ರಜಾಪ್ರಭುತ್ವದ ಪಿತಾಮಹ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ “ಈ ಸಮಾಜದಿಂದಲೇ ಹುಟ್ಟಿ ಬಂದವರು” ಈ ಸಮಾಜಕ್ಕೆ ಈ ರೀತಿ ತುಚ್ಛ ಮನಸ್ಸಿನಿಂದ ಬಯ್ಯುವುದು ಅಥವಾ ಅವಮಾನಿಸುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದಂತೆಯೇ ಸರಿ. ಬಾಬಾ ಸಾಹೇಬರು ಈ ರೀತಿ ತನ್ನ ಸಮಾಜಕ್ಕೆ ಸ್ವಾರ್ಥದಿಂದ ನೋಡಿಕೊಳ್ಳದೆ ಇಡೀ ಭಾರತದಲ್ಲಿರುವ ಶೋಷಿತ ಸಮಾಜಕ್ಕೆ ಶ್ರಮಿಸಿದವರು.

ಆದರೆ ಪೂರ್ವಗ್ರಹ ಪೀಡಿತರಾಗಿ ಈ ಸಮಾಜವನ್ನು ಕೆಟ್ಟ ರೀತಿಯಿಂದ ನೋಡುವುದು ಕೆಟ್ಟ ರೀತಿಯಿಂದ ಹೇಳುವುದು ಎಷ್ಟು ಸರಿ?…

ಶಾಸಕ ಮುನಿರತ್ನ ರವರು ಈ ಸಮಾಜವನ್ನು ಅವಮಾನಿಸಿರುವುದು ಇಡೀ ರಾಷ್ಟ್ರಕ್ಕೆ ಮಾಡಿದ ಅಪಮಾನ ಹಾಗೂ ಎಲ್ಲರೂ ತಲೆತಗ್ಗಿಸಬೇಕಾಗಿರುವ ಪ್ರಸಂಗ ಬಂದಿರುವುದು ಅಂತೂ ಸತ್ಯ.  ಈ ನಿಟ್ಟಿನಲ್ಲಿ ಮುನಿರತ್ನ ರವರು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಭಿಕ್ಷೆಯ ವರದಿಂದ ಶಾಸಕರಾಗಿರುವುದು ಸತ್ಯ. 

ಅದರೆ ಇದೇ ಸಮಾಜವನ್ನು ಬೈಯುವುದು ಎಷ್ಟು ಸರಿ?. ಈ ಹಿನ್ನೆಲೆಯಲ್ಲಿ ಅವರಿಗೆ ಆತ್ಮಸಾಕ್ಷಿ ಆತ್ಮ ಗೌರವ ಇದ್ದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಇದರ ಜೊತೆಗೆ ಅವರ ಈ ಪ್ರಕರಣವು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಅವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿ ಅವರನ್ನು ಕೂಡಲೇ ಬಂಧಿಸಬೇಕು.

ಹೊಲೆಯ ಸಮುದಾಯವನ್ನು ತುಂಬಾ ಕೆಳಮಟ್ಟದಲ್ಲಿ ನಿಂದಿಸಿ ಬೈದಿದ್ದಾರೆ. ನಮ್ಮ ಸಮುದಾಯವೂ ಕೂಡ ಇಂದು ಅವರು ಶಾಸಕರಾಗಲು ಮತವನ್ನು ಕೊಟ್ಟು ಕಾರಣರಾಗಿದ್ದಾರೆ ಎಂಬುದನ್ನು ಅವರು ಮರೆತಂತಿದೆ. ಅವರು ಪ್ರಜಾಪ್ರಭುತ್ವದಲ್ಲಿ ಶಾಸಕರಾಗಿ ಮುಂದುವರೆಯಲು ಯೋಗ್ಯರಲ್ಲದ ವ್ಯಕ್ತಿ. ಈ ತಕ್ಷಣ ಅವರು ರಾಜೀನಾಮೆ ನೀಡಿ ಸಮುದಾಯದ ಬಹಿರಂಗ ಕ್ಷಮೆ ಯಾಚಿಸುವಂತೆ ವಕೀಲರಾದ ಭಾರ್ಗವಿ ದ್ರಾವಿಡ್ ಆಗ್ರಹಿಸಿದ್ದಾರೆ.

ಈ ವ್ಯಕ್ತಿಯ ಜಾತಿನಿಂದನೆಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದ ಉನ್ನತ ಮಟ್ಟದ ಜವಾಬ್ದಾರಿ ಇರುವವರು ಮತ್ತು ರಾಜ್ಯಾಧ್ಯಕ್ಷರು ಅವರ ವಿರುದ್ದ ಕ್ರಮ ಜರುಗಿಸುವಂತೆ ಜನಾಂಗದ ಪರ ಅವರು ಒತ್ತಾಯಿಸಿದ್ದಾರೆ.

ಮಹಿಳೆಯರನ್ನು ತನ್ನ ಬೈಗುಳದಲ್ಲಿ ಅವಾಚ್ಯವಾಗಿ ನಿಂದಿಸಿರುವ ಕಾರಣ ರಾಜ್ಯ ಮತ್ತು ಕೇಂದ್ರದ ಮಹಿಳಾ ಆಯೋಗವು ಸುಮೋಟೋ  ದೂರು ದಾಖಲಿಸಿಕೊಂಡು ಕಾನೂನಿನನ್ವಯ ಅವರಿಗೆ ಶಿಕ್ಷೆ ನೀಡಬೇಕು. ಮತ್ತು ರಾಜ್ಯ ಸರ್ಕಾರವೂ ಕೂಡ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇದೊಂದು ಆಕಸ್ಮಿಕ ಬೈಗುಳ ಎಂದು ಹೇಳುವ ಮೂಲಕ ನಿಂದನೆಗೊಳಪಟ್ಟ ಸಮುದಾಯದ ನಾಯಕ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಟ್ಟು ಸುಮ್ಮನಾಗಬಾರದು ಎಂದು ಅವರು ಎಚ್ಚರಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";