ಶಿಕ್ಷಣದಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ-ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಾತ್ಯಾತೀತ ಮನೋಭಾವ ಬೆಳೆಸಿಕೊಂಡು ಮಕ್ಕಳು ಸಾಧನೆ ಮಾಡುವ ಮೂಲಕ ಪೋಷಕರ ಕನಸು ನನಸು ಮಾಡಬೇಕು, ಶಿಕ್ಷಣದಿಂದ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ ಹೇಳಿದರು.
 

ನಗರದ ಪತ್ರಿಕಾ ಭವನದಲ್ಲಿ ಭಾನುವಾರದಂದು  ಕರ್ನಾಟಕ ಪ್ರತಿಭಾ ಅಕಾಡೆಮಿ ಚಿತ್ರದುರ್ಗ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರ ಸಮಾರಂಭ-೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

- Advertisement - 

ಡಾ.ಬಿ.ಆರ್.ಅಂಬೇಡ್ಕರ್ ಆದರ್ಶಗಳನ್ನು ಮೈಗೂಡಿಸಿಕೊಂಡು ಜಾತಿ ವ್ಯವಸ್ಥೆಯಲ್ಲಿ ಪ್ರತಿಭಾ ಅಖಾಡಮಿಯಿಂದ ಜಾತ್ಯತೀತವಾಗಿ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ. ಪ್ರತಿಯೊಬ್ಬ ಪೋಷಕರು ಸಹ ನಮ್ಮ ಮಕ್ಕಳು ಉನ್ನತ ಸ್ಥಾನಕ್ಕೆ ಏರಬೇಕೆಂಬುದು ದೊಡ್ಡ ಕನಸಾಗಿರುತ್ತದೆ. ಪೋಷಕರ ಕನಸನ್ನು ನನಸು ಮಾಡುವ ದೊಡ್ಡ ಹೊಣೆಗಾರಿಕೆ ಮಕ್ಕಳ ಮೇಲಿದ್ದು ಮಕ್ಕಳು ಸಹ ಉತ್ತಮ ಸಾಧನೆ ಕಡೆ ಹೆಜ್ಜೆ ಹಾಕಬೇಕು ಎಂದು ಸಲಹೆ ನೀಡಿದರು.

ಪ್ರಸ್ತು ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಿದ್ದು ಮೊದಲಿನಂತೆ ಯಾವುದೇ ವ್ಯವಸ್ಥೆಗೆ ಕಾಯುವ ಅವಶ್ಯಕತೆ ಇಲ್ಲ. ಆಧುನೀಕರಣದಲ್ಲಿ ಅಂಗೈಯಲ್ಲಿ ಎಲ್ಲಾ ಮಾಹಿತಿ ದೊರೆಯುತ್ತಿದ್ದು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಮಕ್ಕಳು ಶಿಕ್ಷಣ ಮೈಲುಗಲ್ಲು ಮುಟ್ಟುಬೇಕು.

- Advertisement - 

ದೇಶದಲ್ಲಿ ಜಾತಿ ವ್ಯವಸ್ಥೆಯ ನಡುವೆ ಜಾತ್ಯತೀತ ಬೀಜವನ್ನು ಬಿತ್ತುವ ಕೆಲಸ ಮಾಡುತ್ತುರುವ ಏಕೈಕ ವ್ಯಕ್ತಿ ಸತೀಶ್ ಜಾರಕಿಹೊಳಿ ಅವರು ಎಂದರು.

ಮಾನವ ಬಂದುತ್ವ ವೇದಿಕೆ ಮೂಲಕ ರಾಜ್ಯದಲ್ಲಿ ತಮ್ಮ ಹೆಸರನ್ನು ಸಹ ಬಳಕೆ ಮಾಡದೇ ತೆರೆಯ ಹಿಂದೆ ಸಮ ಸಮಾಜ ಕಟ್ಟುವ ಕೆಲಸವನ್ನು ಸತೀಶ್ ಅಣ್ಣ ಮಾಡುತ್ತಿದ್ದು ಇಂತಹ ವ್ಯಕ್ತಿಗಳ ಸಂಖ್ಯೆ ರಾಜಕಾರಣದಲ್ಲಿ ತುಂಬಾ ವಿರಳವಾಗಿದೆ ಎಂದು ತಿಳಿಸಿದರು.

ರಾಜಕಾರಣದಲ್ಲಿ ಪ್ರಚಾರ ಅಗತ್ಯ ಆದರೆ ಪ್ರಚಾರ ಬಯಸದೆ ಕೆಲಸ ಮಾಡುವ ಒಬ್ಬ ರಾಜಕಾರಣಿ ದೇಶದಲ್ಲಿ ಇದ್ದರೆ ಅದು ನಮ್ಮ ಸತೀಶ್ ಜಾರಕಿಹೊಳಿ ಅವರು ಎಂದರೆ ತಪ್ಪಗಲಾರದು. ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಮಕ್ಕಳ ಪಾತ್ರ ದೊಡ್ಡದಿದೆ. ಶಿಕ್ಷಣಕ್ಕಿರುವ ಶಕ್ತಿ ಬೇರೆ ಯಾವುದಕ್ಕೂ ಇರುವುದಿಲ್ಲ. ಈ ಜಾತಿ ವ್ಯವಸ್ಥೆ ತೊಗಿಸುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ ಎಂದು ಶಾಸಕ ರಘುಮೂರ್ತಿ ತಿಳಿಸಿದರು.

ಮಾನವ ಬಂದುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.  ರಾಮಚಂದ್ರಪ್ಪ ಮಾತನಾಡಿ ಪ್ರತಿಭೆ ಮತ್ತು ಜಾತಿಗೆ ಯಾವುದೇ ಸಂಬಂಧವಿಲ್ಲ, ಅಂಬೇಡ್ಕರ್ ಹಾಕಿ ಕೊಟ್ಟ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ. ನಾಳಿನ ಸಮಾಜಕ್ಕೆ ಆಸ್ತಿ ಎಂದರೆ ಅದು ಪ್ರತಿಭಾವಂತ ಮಕ್ಕಳು ಎಂದರು.

ಸಾಹಿತಿ ಪ್ರೋ. ಲೋಕೇಶ್ ಅಗಸನಕಟ್ಟೆ ಮಾತನಾಡಿ ಮಾನವ ಬಂದುತ್ವ ವೇದಿಕೆ ಮೂಲಕ ಎಲ್ಲಾರೊಳಗೆ ಬಂದುತ್ವ ಸಾಧಿಸುವ ಮೂಲಕ ಕಲ್ಯಾಣ ಕರ್ನಾಟಕ ಮಾಡಬಹುದಾಗಿದೆ. ರಾಮರಾಜ್ಯ ಮಾಡಲು ಸಾಧ್ಯವಾಗದಿದ್ದರು ಸಹ ಕಲ್ಯಾಣ ಭಾರತ ಸ್ಥಾಪಿಸಬೇಕಾಗಿದೆ. ನಮಗೆಲ್ಲ ಪ್ರಧಾನವಾಗಿ ಸಮಾನತೆ ಮತ್ತು ಸಹೋದರತ್ವ ಅತ್ಯಗತ್ಯವಾಗಿ ಬೇಕಾಗಿದೆ, ಈ ಎರಡರಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಉತ್ತಮ ತತ್ವಗಳನ್ನು ಅಳವಡಿಸಿಕೊಂಡು ಎಲ್ಲಾ ತತ್ವಗಳನ್ನು ಮೀರಿ ನಡೆಯಬೇಕಿದೆ. ತಮ್ಮ ಸಮುದಾಯದವರನ್ನ ಮಾತ್ರ ಗುರುತಿಸಿ ಸನ್ಮಾನಿಸಿ ಪ್ರೋತ್ಸಹಿಸುವ ಕೆಲಸ ಬಿಟ್ಟು ಎಲ್ಲಾರನ್ನು ಗೌರವಿಸಿ, ಸನ್ಮಾನಿಸುವ ಕೆಲಸ ಆಗಬೇಕಿದೆ ಎಂದು ಸಾಹಿತಿ ಲೋಕೇಶ್ ಅಗಸನಕಟ್ಟೆ ಸಮಾಜಕ್ಕೆ ಕಿವಿ ಮಾತು ಹೇಳಿದರು.

ಸಮಾಜ ಚಿದ್ರ ಚಿದ್ರವಾಗಿರುವ ಇಂತಹ ಸಮಯದಲ್ಲಿ  ಮಾನವ ಬಂದುತ್ವ ವೇದಿಕೆ ಮೂಲಕ ಸಮಾಜ ಕಟ್ಟುವ ಕೆಲಸ ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ. ಎಲ್ಲಾ ಜನಾಂಗದ ವಿಶ್ವಾಸ ಗಳಿಸಿರುವ ಸತೀಶ್ ಜಾರಕಿಹೊಳಿ ಅವರು ಮುಂದಿನ ದಿನದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಮಕ್ಕಳು ಸಹ ಈ ಪುರಸ್ಕಾರದಿಂದ ಪ್ರೇರಪಣೆ ಹೊಂದುವ ಜೊತೆ ಮುಂದಿನ ದಿನಗಳಲ್ಲಿ ಇತರೆ ಮಕ್ಕಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಮಾತನಾಡಿ ಮಕ್ಕಳಲ್ಲಿ ಅಡಗಿರುವ ಸುಪ್ತಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವುದರಿಂದ ಮಕ್ಕಳಿಗೆ ಪ್ರೇರಪಣೆ ನೀಡಿದಂತೆ ಆಗುತ್ತದೆ. ವಿಶೇಷವಾಗಿ ಪ್ರತಿಭಾ ಅಕಾಡಮಿಯಿಂದ ಎಲ್ಲಾ ವರ್ಗದ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಪ್ರಶಂಸೆ ವ್ಯಕ್ತಪಡಿಸಿದರು. 

ಕರ್ನಾಟಕ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಯೋಗೇಶ್ ಬಾಬು ಮಾತನಾಡಿ ಎಲ್ಲಾ ಸಮುದಾಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದು ಅವರನ್ನು ಗೌರವಿಸುವ ಕೆಲಸ ಇಂದು ಪ್ರತಿಭಾ ಅಖಾಡಮಿ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಜಾತ್ಯತೀತ ಕಾರ್ಯಕ್ರಮ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಿ.ಟಿ.ಜಗದೀಶ್, ನಾಗರಾಜ್ ಕ್ಯಾದಿಗುಂಟೆ, ಹೆಚ್.ಅಂಜಿನಪ್ಪ, ಬಿ.ಮಂಜುನಾಥ್, ಸಯ್ಯದ್ ಖುದ್ದೂಸ್, ಚಳ್ಳಕೆರೆ ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುಬಾಬುಪ್ರಕಾಶ್ ರಾಮಾನಾಯ್ಕ, ಕಣುಮೇಶ್, ಮಾ.ಬಂ. ವೇದಿಕೆಯ ಮಹಿಳಾ ಸಂಚಾಲಕಿ ಬೈಲಮ್ಮ, ಬಸವರಾಜ್, ಹನುಂಮತಪ್ಪ ತಮಟಕಲ್,ಪ್ರಭಾವತಿ, ಅಂಬಿಕ, ಮಾರುತೇಶ್, ಮಾರುತಿ, ತಿಪ್ಪೇಸ್ವಾಮಿ ಇದ್ದರು.

 

 

 

Share This Article
error: Content is protected !!
";