ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಾದೇಶಿಕ ಅಸಮತೋಲನ ಸೂಚ್ಯಂಕದಲ್ಲಿ ತಾಲ್ಲೂಕು ಅನ್ನು ಘಟಕವಾಗಿ ಪರಿಗಣಿಸಿ, ಅಭಿವೃದ್ಧಿ, ಹಿಂದುಳಿದಿರುವಿಕೆ ಎಂದು ವರ್ಗೀಕರಣ ಮಾಡಲಾಗುತ್ತಿದೆ. ಆದರೆ ಮುಂದುವರೆದ ತಾಲ್ಲೂಕಿನಲ್ಲಿಯೂ ಸಹ ಕೆಲವು ಹೋಬಳಿಗಳು ಪ್ರಾದೇಶಿಕ ಅಸಮಾತೋಲನಕ್ಕೆ ತುತ್ತಾಗಿವೆ. ಈ ಹಿನ್ನಲೆಯಲ್ಲಿ ಹೋಬಳಿಯನ್ನು ಘಟಕವಾಗಿ ಪರಿಗಣಿಸಿ, ವರದಿ ಶಿಫಾರಸ್ಸು ಮಾಡುವಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು.
ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 1 ತಾಲ್ಲೂಕು ಅತ್ಯಂತ ಹಿಂದುಳಿದ ತಾಲ್ಲೂಕು ಹಾಗೂ 5 ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳಾಗಿವೆ. ರೂ. 3724 ಕೋಟಿ ರೂಪಾಯಿ ಕೆಎಂಇಆರ್ಸಿ ಅನುದಾನದಡಿಯಲ್ಲಿ ಹೊಳಲ್ಕೆರೆ, ಹೊಸದುರ್ಗ ಹಾಗೂ ಚಿತ್ರದುರ್ಗ ತಾಲ್ಲೂಕುಗಳು ಅಭಿವೃದ್ಧಿಯಾಗುತ್ತಿವೆ. ಉಳಿದ ಮೂರು ತಾಲ್ಲೂಕುಗಳಾದ ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳ ಅಭಿವೃದ್ಧಿಗೆ ಬೇರೆ ವಿಧದಲ್ಲಿ ಸರ್ಕಾರ ಅನುದಾನ ಒದಗಿಸಿದರೆ ಅನುಕೂಲವಾಗಲಿದೆ.
ಚಳ್ಳಕೆರೆ ತಾಲ್ಲೂಕಿನಲ್ಲಿ ಡಿಆರ್ಡಿಒ, ಇಸ್ರೋ, ಬಾರ್ಕ್, ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಅಂತಹ ಸಂಸ್ಥೆಗಳು ಇರುವುದರಿಂದ ಚಿತ್ರದುರ್ಗ ಜಿಲ್ಲೆಗೆ ಇಂಡಸ್ಟ್ರೀಯಲ್ ಕಾರಿಡಾರ್ ಬಂದರೆ ಈ ಭಾಗಕ್ಕೆ ಪೂರಕವಾಗಿರಲಿದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.