ಕಕ್ಷಿದಾರರ ಹಿತ ಕಾಯುವ ಮೂಲಕ ನ್ಯಾಯಾಂಗದ ಹಿರಿಮೆ ಹೆಚ್ಚಿಸಿ: ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವಕೀಲರು ಹೆಚ್ಚು ಅಧ್ಯಯನ ಶೀಲರಾಗಿ ಕಾರ್ಯನಿರ್ವಹಿಸಿ ನ್ಯಾಯ ಬಯಸಿ ಬರುವ ಕಕ್ಷಿದಾರರಿಗೆ ಕಾನೂನಿನಡಿ ನ್ಯಾಯ ದೊರಕಿಸಿಕೊಟ್ಟಾಗ ಮಾತ್ರ ನ್ಯಾಯಾಂಗ ಇಲಾಖೆಗೆ ಘನತೆ, ಗೌರವ ಹೆಚ್ಚುತ್ತದೆ. ಎಂತಹ ಸಂದರ್ಭದಲ್ಲೂ ನಿಯಮಗಳ ಉಲ್ಲಂಘನೆಯಾಗದಂತೆ ಜಾಗ್ರತೆ ವಹಿಸಬೇಕೆಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು. ನಗರದ ನ್ಯಾಯಾಲಯದ ಸಭಾಂಗಣದಲ್ಲಿ ತಾಲ್ಲೂಕು ವಕೀಲರ ಸಂಘ ಬುಧವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ನ್ಯಾಯಾಂಗ ಇಲಾಖೆಯ ಬಗ್ಗೆ ಅಪಾರವಾದ ಗೌರವ, ವಿಶ್ವಾಸ ವ್ಯಕ್ತವಾಗುತ್ತಿದೆ. ಬಹಳಷ್ಟು ಪ್ರಕರಣದಲ್ಲಿ ನ್ಯಾಯಾಂಗ ಇಲಾಖೆ ಉತ್ತಮ ನ್ಯಾಯ ದಾನ ಮಾಡುವ ಮೂಲಕ ನ್ಯಾಯಾಲಯದ ಮೌಲ್ಯ ಸಂರಕ್ಷಿಸಿಕೊಂಡಿದೆ. ವಕೀಲರು ಕಕ್ಷಿದಾರರ ಹಿತ ಕಾಯುವ ಜೊತೆಗೆ ನ್ಯಾಯಾಂಗ ಇಲಾಖೆಯ ಗೌರವ ಉಳಿಸುವತ್ತ ಹೆಚ್ಚು ಗಮನ ನೀಡಬೇಕೆಂದು ತಿಳಿಸಿದರು.

- Advertisement - 

ಹಿರಿಯ ಸಿವಿಲ್ ನ್ಯಾಯಾಧೀಶ ಶಮೀರ್ ಪಿ.ನಂದ್ಯಾಲ್ ಮಾತನಾಡಿ, ವಕೀಲರ ದಿನಾಚರಣೆ ಕಾರ್ಯಕ್ರಮ ವಕೀಲರಲ್ಲಿ ಹೊಸ ಆತ್ಮವಿಶ್ವಾಸ ಹುಟ್ಟುಹಾಕುವಂತಹದ್ದು. ಇಡೀ ವರ್ಷ ಕಾರ್ಯನಿರ್ವಹಿಸುವ ವಕೀಲರು ದಿನಾಚರಣೆ ಮೂಲಕ ತಾವು ಸಾಗಿಬಂದ ಹಾದಿಯ ಬಗ್ಗೆ ಚರ್ಚೆ ನಡೆಸಬಹುದಾಗಿದೆ. ಪ್ರಸ್ತುತ ಇಂದಿನ ಕಾಲದಲ್ಲಿ ಕಾನೂನಿನ ಸೂಕ್ಷ್ಮತೆ ಹೆಚ್ಚಾಗಿದ್ದು, ಕಾನೂನಿನಡಿಯಲ್ಲೇ ನ್ಯಾಯ ದೊರಕಿಸುವಾಗ ವಕೀಲರು ಹೆಚ್ಚು ಜಾಗ್ರತೆವಹಿಸಬೇಕಿದೆ. ಪ್ರತಿಯೊಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದರು.

ಆಶಯ ಮಾತುಗಳನ್ನಾಡಿದ ಜೆಎಂಎಫ್‌ಸಿ ನ್ಯಾಯಾಧೀಶೆ ಹೆಚ್.ಆರ್.ಹೇಮಾ, ತಮ್ಮ ವೃತ್ತಿ ಬದುಕಿನಲ್ಲಿ ವೈಶಿಷ್ಟ್ಯಮಯ ದಾಖಲೆಗಳನ್ನು ನಿರ್ಮಿಸಿದ ಅನೇಕ ವಕೀಲರು ನಮ್ಮ ಕಣ್ಣ ಮುಂದಿದ್ದಾರೆ. ಹಿರಿಯ ವಕೀಲರ ಮಾರ್ಗದರ್ಶನವನ್ನು ಪಡೆಯುವ ಮೂಲಕ ಕಿರಿಯ ವಕೀಲರು ತಮ್ಮ ವೃತ್ತಿ ಘನತೆ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

- Advertisement - 

ತಾಲ್ಲೂಕು ವಕೀಲರ ಸಂಘ ಅಧ್ಯಕ್ಷ ಕೆ.ಎಂ.ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ವಕೀಲರು ಸಂತಸ ಪಡುವದಿನವಾಗಿದೆ. ನಾವೆಲ್ಲರೂ ಒಟ್ಟಿಗೆ ಕೂತು ನಾವು ನಡೆದುಬಂದ ಹಾದಿಯ ಬಗ್ಗೆ ವಿಚಾರ ವಿಮರ್ಶೆ ಮಾಡಿಕೊಳ್ಳುವ ದಿನವಿದು. ಅನೇಕ ಸಂದರ್ಭದಲ್ಲಿ ನ್ಯಾಯಾಲಯ ಕಾರ್ಯಕಲಾಪದಲ್ಲಿ ಕಕ್ಷಿದಾರರ ಹಿತ ಕಾಪಾಡುವ ಹೊಣೆಹೊತ್ತ ನಾವು ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಹಲವಾರು ಸಂದರ್ಭಗಳಲ್ಲಿ ಕಕ್ಷಿದಾರರ ಹಿತ ಕಾಪಾಡುವ ಎಲ್ಲಾ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಆದರೆ, ನ್ಯಾಯಾಂಗ ಇಲಾಖೆ ಮಾತ್ರ ಯಾವುದೇ ತೀರ್ಪು ಪ್ರಕಟಿಸಿದರು ಅಳೆದು, ತೂಗಿ ತನ್ನ ತೀರ್ಪು ನೀಡುತ್ತದೆ. ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸದಿಂದ ನಾವೆಲ್ಲರೂ ಕೆಲಸಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ವಕೀಲರಾದ ಜಿ.ಬಿ.ಬಾಲಕೃಷ್ಣಸ್ವಾಮಿ, ಡಿ.ಮಲ್ಲಿಕಾರ್ಜುನ್, ಜಡೇಕುಂಟೆ ಕುಮಾರ್, ಶ್ರೀನಿವಾಸ್‌ಮೂರ್ತಿ, ಎಸ್.ಡಿ.ಹನುಮಂತರಾಯ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಸಿದ್ದರಾಜು, ಸಹಕಾರ್ಯದರ್ಶಿ ರಾಮಕೃಷ್ಣ, ಖಜಾಂಚಿ ಟಿ.ರುದ್ರಯ್ಯ, ಬೀರಪ್ಪ, ಪ್ರಕಾಶ್, ತಿಪ್ಪೇಸ್ವಾಮಿ, ಬೋರಯ್ಯ, ಜಿ.ಶರಣಪಯ್ಯ, ಟಿ.ತಮ್ಮಣ್ಣ, ಜಯಪ್ಪ, ಪ್ರಭಾಕರ, ಎಂ.ಎಸ್.ಜಗದೀಶ್‌ನಾಯಕ, ರಾಘವೇಂದ್ರನಾಯಕ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Share This Article
error: Content is protected !!
";