ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಗ್ರಾಮೀಣ ಭಾಗದ ಜನರು ಸಾಮಾನ್ಯವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಠಿಯಲ್ಲಿ ಹಲವಾರು ಸಂದರ್ಭದಲ್ಲಿ ನಿರ್ಲಕ್ಷ್ಯೆ ತಾಳುತ್ತಾರೆ. ಸರ್ಕಾರ ಸಾರ್ವಜನಿಕರಿಗಾಗಿ ಆಸ್ಪತ್ರೆಗಳನ್ನು ಆರಂಭಿಸಿ ಚಿಕಿತ್ಸೆ ನೀಡಿದರೂ ಕೆಲವರಿಗೆ ಸೂಕ್ತಸ್ಪಂದನೆ ಸಿಗುವುದಿಲ್ಲ. ಆದರೆ, ಗ್ರಾಮದಲ್ಲೇ ನುರಿತತಜ್ಞವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯಭಾಗ್ಯವನ್ನು ಕಲ್ಪಿಸಿದ ವೆಂಕಟಸಾಯಿಸೇವಾಟ್ರಸ್ಟ್ ಅಧ್ಯಕ್ಷ ಸಂಜೀವಮೂರ್ತಿ ಸೇರಿದಂತೆ ಅವರ ತಂಡವನ್ನು ಅಭಿನಂದಿಸುವುದಾಗಿ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶನಿವಾರ ನಗರಂಗೆರೆ ಗ್ರಾಮದ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ನಗರಂಗೆರೆ ಗ್ರಾಮೀಣಾಭಿವೃದ್ದಿ ಹಾಗೂ ದೇವಾಲಯಗಳ ನಿರ್ವಹಣಾಸೇವಾ ಟ್ರಸ್ಟ್, ನಗರಂಗೆರೆ ಗ್ರಾಮಪಂಚಾಯಿತಿ ಹಿತರಕ್ಷಣಾ ಟ್ರಸ್ಟ್, ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜು, ನ್ಯೂಬರ್ಗ ವಾಸವಿಲ್ಯಾಬ್ ಹಾಗೂ ಮೂರ್ತಿ ಇಂಡಸ್ಟ್ರೀಸ್ ಅಂಡ್ ಡೆವಲಪರ್‍ಸ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯತಪಾಸಣಾ ಶಿಬಿರವನ್ನು ಜ್ಯೋತಿಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಗ್ರಾಮಾಭಿವೃದ್ದಿ ಹಾಗೂ ದೇವಾಲಯ ನಿರ್ವಹಣಾ ಸಮಿತಿ, ಗ್ರಾಪಂ ಸಹಯೋಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಕ್ರೀಡೆಗಳನ್ನು ಆಯೋಜಿಸಿದೆ, ಈಗ ಆರೋಗ್ಯ ಶಿಬಿರ ನಡೆಸಿದೆ. ನಿರಂತರ ಕಾರ್ಯಚಟುವಟಿಕೆಯಿಂದ ಟ್ರಸ್ಟ್‌ನ ಗೌರವವು ಹೆಚ್ಚಿದೆ, ಸಾರ್ವಜನಿಕರೂ ಇದರ ಸದುಪಯೋಗವನ್ನು ಪೂರ್ಣಪ್ರಮಾಣದಲ್ಲಿ ಪಡೆಯಬೇಕು. ಟ್ರಸ್ಟ್ರ್ ನಡೆಸುವ ಎಲ್ಲಾ ಸೇವಾಕಾರ್ಯಕ್ಕೆ ತುಂಬುಹೃದಯದ ಸಹಕಾರ ನೀಡುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್‌ನ ನಿರ್ವಹಣಾಧಿಕಾರಿ ಬಿ.ಸಿ.ಸಂಜೀವಮೂರ್ತಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುವಂತೆ ನಮ್ಮ ಟ್ರಸ್ಟ್‌ನ ಎಲ್ಲಾ ಸದಸ್ಯರು ಸಭೆ ಸೇರಿ ಚರ್ಚೆ ನಡೆಸಿ ನಮಗೆ ಅಗತ್ಯವಿರುವ ತಜ್ಞ ವೈದ್ಯರನ್ನುಭೇಟಿ ಮಾಡಿದಾಗ ಅವರು ಸಹಕರಿಸುವ ಭರವಸೆ ನೀಡಿದರು. ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಈ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸದಾಕಾಲ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರ ಪ್ರೋತ್ಸಾಹ ನಮಗೆ ಶ್ರೀರಕ್ಷೆಯಾಗಿದೆ.ಇಂದಿನ ಶಿಬಿರದಲ್ಲಿ ಭಾಗವಹಿಸಿ ರೋಗಿಗಳನ್ನು ಪರೀಕ್ಷಿಸಿ, ಸಲಹೆ, ಸೂಚನೆ ನೀಡಿದ ವೈದ್ಯರ ತಂಡಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ರವೀಂದ್ರನಾಥ, ಡಾ.ಪ್ರಹ್ಲಾದ್, ಡಾ.ಪಾಲಾಕ್ಷಪ್ಪ, ಡಾ.ನಾರಾಯಣಮೂರ್ತಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಬಿ.ಸಿ.ವೆಂಕಟೇಶ್, ಕೆಡಿಪಿ ಸದಸ್ಯ ಅಂಗಡಿರಮೇಶ್, ಬಿ.ಸಿ.ಸತೀಶ್‌ಕುಮಾರ್, ಕಾರ್ತಿಕ್ ಎಸ್.ಮೂರ್ತಿ, ಗ್ರಾಮದ ಮುಖಂಡರಾದ ಸಿ.ಓಬಯ್ಯ, ಮೈನಾಬಾಬು, ತಿಪ್ಪೇಶ್, ಬಿ.ಕೆ.ಲೋಹಿತ್, ನಿಂಗಣ್ಣ, ಸುದರ್ಶನ್, ಕುಮಾರಸ್ವಾಮಿ, ಮೈಲಾರಪ್ಪ, ದ್ಯಾಮಣ್ಣ, ರವಿ, ರಾಜು, ರಂಗನಾಥ ಮುಂತಾದವರು ಪಾಲ್ಗೊಂಡಿದ್ದರು.

