ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಜ್ಯ ಸರ್ಕಾರ ಕೃಷಿ ಇಲಾಖೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾ ಬಂದಿದೆ. ರೈತರ ಹಲವಾರು ಸಮಸ್ಯೆಗಳನ್ನು ನಿಯಂತ್ರಿಸುವ ಮೂಲಕ ರೈತರು ನೆಮ್ಮದಿಯ ಬದುಕು ಕಂಡುಕೊಳ್ಳಲು ಸರ್ಕಾರ ಎಲ್ಲ ಸಹಕಾರ ನೀಡುತ್ತಿದೆ. ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಾದಲ್ಲಿ ಕೃಷಿಯಲ್ಲಿ ತಾಂತ್ರಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕೆಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ನಗರ ಕೃಷಿ ಇಲಾಖೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತರ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿವರ್ಷವೂ ಕೃಷಿ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ನಿರೀಕ್ಷೆ ಮಾಡಲಾಗುತ್ತಿದೆ. ಕಳೆದ ವರ್ಷ, ಪ್ರಸ್ತುತ ವರ್ಷವೂ ಮಳೆ ಕೊರತೆಯಾಗಿಲ್ಲ.
ಆದರೂ ಬಹುತೇಕ ಜಮೀನುಗಳಲ್ಲಿ ಶೇಂಗಾ ಬಿತ್ತನೆ ಕುಂಠಿತವಾಗಿದೆ. ಅಕಾಲಿಕ ಮಳೆಯಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ತಾಲ್ಲೂಕಿನ ರೈತರ ಸ್ಥಿತಿಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದಿದ್ದು, ರೈತರ ಹಿತದೃಷ್ಠಿಯಿಂದ ಮುಖ್ಯಮಂತ್ರಿಗಳಿಗೆ ಗಮನಕ್ಕೆ ತರುವ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ಕೃಷಿ ನಿರ್ದೇಶಕ ಪ್ರಭಾಕರ್, ಕಳೆದ ಜೂನ್ ಮತ್ತು ಜುಲೈ ಮಾಹೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ರೈತರು ಸಂತೋಷದಿಂದಲೇ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ತದನಂತರದ ದಿನಗಳಲ್ಲಿ ಬಿತ್ತೆನೆಯಾಗಿ ಸಾಕಷ್ಟು ದಿನಗಳೆದರೂ ಮಳೆಯ ದರ್ಶನವಾಗಲಿಲ್ಲ.
ಇದು ರೈತರಿಗೆ ಆತಂಕವನ್ನುಂಟು ಮಾಡಿತ್ತು. ಶೇಂಗಾ ಬಿತ್ತನೆ ಮಾಡಿದ ನಂತರ ಉತ್ತಮ ಮಳೆಯಾಗಿದ್ದಲ್ಲಿ ಶೇ.೮೦ರಷ್ಟು ಬೆಳೆಯಾಗುವ ನಿರೀಕ್ಷೆ ಇತ್ತು. ಆದರೆ, ಸಕಾಲಿಕವಾಗಿ ಮಳೆಬಾರದ ಕಾರಣ ಶೇಂಗಾ ಬೆಳೆಯೂ ಸಹ ಈ ಬಾರಿ ಕೈಕೊಟ್ಟಿದೆ. ಆದರೂ ಸರ್ಕಾರಕ್ಕೆ ರೈತರ ಹಿತದೃಷ್ಠಿಯಿಂದ ನಷ್ಟದ ವರದಿ ಕಳಿಸಿರುವುದಾಗಿ ತಿಳಿಸಿದರು.
ಅಖಂಡ ಕರ್ನಾಟಕ ರೈತ ಸಂಘ ಮಾಜಿ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ರೈತ ಸಂಘದ ಹಿರಿಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ರೈತರಿಗೆ ಶುಭಹಾರೈಸಿದರು.
ಸಮಗ್ರ ಕೃಷಿ ಬೇಸಾಯ ಪದ್ದತಿ ಅಳವಡಿಸಿಕೊಂಡ ಪ್ರಗತಿಪರ ರೈತರಾದ ಚಿಕ್ಕೇನಹಳ್ಳಿ ಪ್ರೇಮಕ್ಕ, ವಡೆರಹಳ್ಳಿಮಾರಣ್ಣ, ದುರ್ಗಾವರ ಕೃಷ್ಣಮೂರ್ತಿ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇಒ ಶಶಿಧರ, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಕೃಷಿ ಅಧಿಕಾರಿ ಜೆ.ಅಶೋಕ್, ಪಶು ವೈದ್ಯ ರೇವಣ್ಣ, ನಂದಿನಿ, ಶಿವಲೀಲಾ, ಜೀವನ್ ಮಂಜುನಾಥ, ತಿಪ್ಫೇಸ್ವಾಮಿ, ಗುರುನಾಥ, ಕಿಸಾನ್ ಸೇಲ್ ಜಿಲ್ಲಾಧ್ಯಕ್ಷ ಎ.ನಾಗರಾಜು, ಕೆಡಿಪಿ ಸದಸ್ಯ ಅಂಗಡಿ ರಮೇಶ್, ಚೌಳೂರು ಬಸವರಾಜು, ಜಿಲ್ಲಾ ಕೆಡಿಪಿ ಸದಸ್ಯ ಓ.ರಂಗಸ್ವಾಮಿ ಮುಂತಾದವರು ಇದ್ದರು.