ಖರ್ಗೆ ಭೇಟಿ ಮಾಡಿದ ಶಾಸಕ ರಘುಮೂರ್ತಿ: ರಘುಮೂರ್ತಿಗೆ ಸಚಿವ ಸ್ಥಾನ ದೊರೆಯುವುದೇ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕೀಯ ಅಧಿಕಾರ ಬದಲಾವಣೆಯ ಬಗ್ಗೆ ನಡೆಯುತ್ತಿರುವ ಬೆಳವಣಿಗೆಯ ಮಧ್ಯದಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿರುವುದು ಹಲವಾರು ಚರ್ಚೆಗಳಿಗೆ ಗ್ರಾಸವಾಗಿದೆ.

ಎಐಸಿಸಿ ಅಧ್ಯಕ್ಷರ ಭೇಟಿ ಕುರಿತು ಪ್ರತಿಕ್ರಿಯಿಸಿದ ಶಾಸಕ ಟಿ.ರಘುಮೂರ್ತಿ ಸೌಜನ್ಯ ಭೇಟಿ ಎಂದು ಹೇಳಿದರು. ಜೊತೆಯಲ್ಲಿ ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜಿ.ಗೋವಿಂದಪ್ಪ ಜೊತೆಯಲ್ಲಿ ಖರ್ಗೆಯವರನ್ನು ಭೇಟಿ ಮಾಡಿ ಮಾತನಾಡಿದ್ಧಾರೆ. ಸಾರ್ವಜನಿಕ ವಲಯದಲ್ಲಿ ಇವರ ಈ ಭೇಟಿಗೆ ಪುಂಗಾನುಪುಂಗ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

- Advertisement - 

ಈಗಾಗಲೇ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು ಪರಿಶಿಷ್ಟ ಪಂಗಡ ಪ್ರತಿನಿಧಿಸುತ್ತಿದ್ದು, ಆ ಪಂಗಡದ ಇಬ್ಬರು ಸಚಿವರನ್ನು ಈಗಾಗಲೇ ಕೈಬಿಡಲಾಗಿದೆ. ಅದರ ಲಾಭಪಡೆಯಲು ಅದೇ ಸಮುದಾಯದ ಪ್ರಭಾವಿಸಚಿವರೊಂದಿಗೆ ಎಐಸಿಸಿ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪ್ರಸ್ತುತ ಶಾಸಕ ಟಿ.ರಘುಮೂರ್ತಿ ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು
ಈ ಹಿಂದೆ ಹಟ್ಟಿಚಿನ್ನದಗಣಿ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ಧಾರೆ. ಎರಡೂ ನಿಗಮಗಳ ಕಾರ್ಯವೈಖರಿ ಅವರಿಗೆ ಉತ್ತಮ ಹೆಸರು ನೀಡಿದೆ.

ಅಭಿವೃದ್ದಿ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದ್ದರಲ್ಲದೆ. ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಪೈಕಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನೂ ಸಹ ಹಿಂದೆಂದೂ ಕಾಣದಂತಹ ಅಭಿವೃದ್ದಿಪಥದತ್ತ ಕೊಂಡೊಯ್ದಿದ್ಧಾರೆ.

- Advertisement - 

ಮೊದಲಬಾರಿಗೆ ಶಾಸಕರಾದ ೨೦೧೩ರಿಂದ ೧೮ರ ಅವಧಿಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ.ಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ಧರು. ೨೦೧೮ರಿಂದ ೨೩ರ ಅವಧಿಯಲ್ಲೂ  ಕ್ಷೇತ್ರದ ಅಭಿವೃದ್ದಿಗೆ ಹಿನ್ನಡೆಯಾಗದಂತೆ ಜಾಗ್ರತೆ ವಹಿಸಿದ್ದರು.
ವಿಶೇಷವಾಗಿ ವಿಧಾನಸಭಾ ಅಧಿವೇಶನದಲ್ಲಿ ನೀರಾವರಿ ಸೇರಿದಂತೆ ಹಲವಾರು ಸೌಲಭ್ಯಗಳ ಬಗ್ಗೆ ಸೌಹಾರ್ದಿತ ಚರ್ಚೆ ನಡೆಸಿದ್ಧಾರೆ. ಈ ಅವಧಿಯಲ್ಲಿ ವಿಶೇಷವಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು
, ಜಿಟಿಟಿಸಿಯಂತಹ ಶಿಕ್ಷಣ ಸಂಸ್ಥೆಗಳನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಅವರು ಮಾಡಿದ ಅಭಿವೃದ್ದಿಕಾರ್ಯ ಅವರಿಗೆ ಸಚಿವ ಸ್ಥಾನ ತಂದುಕೊಡುವುದೇ ಕಾದುನೋಡಬೇಕಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳೆದ ಎರಡು ದಿನಗಳ ಹಿಂದೆ ದೆಹಲಿಯಿಂದ ತಮ್ಮ ಬೆಂಗಳೂರಿನ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಖರ್ಗೆ ನಿವಾಸ ರಾಜ್ಯದ ಗಮನ ಸೆಳೆದಿದೆ. ಕಾರಣವೆಂದರೆ ಪ್ರತಿಭಾರಿ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದಲ್ಲಿರುವಾಗ ಕೇವಲ ಕೆಲ ಸಚಿವರು, ಶಾಸಕರು ಮಾತ್ರ ಔಪಚಾರಿಕವಾಗಿ ಅವರನ್ನು ಭೇಟಿ ಮಾಡುತ್ತಿದ್ದರು.

ಇಂತಹ ಸಂದರ್ಭದಲ್ಲಿ ಅವರ ಭೇಟಿಗೆ ಹೆಚ್ಚಿನ ಮಹತ್ವ ದೊರೆಯುತ್ತಿರಲಿಲ್ಲ, ಸಹಜವಾಗಿ ಪಕ್ಷದ ರಾಜ್ಯಮಟ್ಟದ ಪದಾಧಿಕಾರಿಗಳು ಅವರೊಂದಿಗೆ ಚರ್ಚಿಸುತ್ತಿದ್ದರು. ಮಲ್ಲಿಕಾರ್ಜುನ್ ಖರ್ಗೆ ಸಹ ಲೋಕಾಭಿರಾಮವಾಗಿ ಪಕ್ಷದ ಆಗುಹೋಗುಗಳು ಮತ್ತು ಸರ್ಕಾರದ ಕಾರ್ಯವೈಖರಿಯ ಬಗ್ಗೆ ಚರ್ಚಿಸಿ ಸಲಹೆ ನೀಡಿದ ಉದಾಹರಣೆಗಳಿವೆ.
ಖರ್ಗೆಯವರ ಈ ಹಿಂದಿನ ಭೇಟಿಗೂ
, ಇಂದಿನ ಭೇಟಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಡೀ ದಿನ ಖರ್ಗೆಯವರ ಮನೆ ರಾಜಕೀಯ ದುರೀಣರಿಂದ ಕೂಡಿತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವ, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಅನೇಕ ಗಣ್ಯರು ಅವರೊಡನೆ ಕುಳಿತು ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಗಹನವಾದ ಚರ್ಚೆ ನಡೆಸುತ್ತಿದ್ದಾರೆ.

ಖರ್ಗೆ ನಿವಾಸದ ಸುತ್ತಮುತ್ತ ನಡೆಯುವ ವಿದ್ಯಾಮಾನಗಳಿಗೆ ರಾಜ್ಯಾದ್ಯಂತ ಭಾರಿ ಚರ್ಚೆ ನಡೆಯುತ್ತಿದ್ದು ಹಲವು ರೀತಿಯ ರೆಕ್ಕೆಪುಕ್ಕಗಳು ಹರಡುತ್ತಿವೆ. ಎಲೆಕ್ಟ್ರಾನಿಕ್ ಮಾಧ್ಯಮವೂ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ಪತ್ರಿಕೆಯಲ್ಲಿ ಖರ್ಗೆಯವರ ನಿವಾಸಕ್ಕೆ ಭೇಟಿ ನೀಡುವ ಎಲ್ಲಾ ನಾಯಕರ ಸುದ್ದಿಗಳು ಹೆಚ್ಚು ಪ್ರಚಾರ ಪಡೆಯುತ್ತಿವೆ. ಮಲ್ಲಿಕಾರ್ಜುನ್ ಖರ್ಗೆಯವರಿಗೆ ಪಕ್ಷದ ನೇತಾರರು ಹಾಗೂ ಸ್ಥಾನಮಾನ ಬಯಸಿಬರುವ ಆಕಾಂಕ್ಷಿಗಳಿಗೆ ಸಮಾಧಾನ ಮಾಡಿಕಳಿಸುವುದೇ ಪ್ರಯಾಸದ ಕೆಲಸವಾಗಿದೆ.
ಅಪಾರವಾದ ರಾಜಕೀಯ ಅನುಭವಹೊಂದಿರುವ ಖರ್ಗೆ ಅವರು ತಮ್ಮ ಎಲ್ಲಾ ಸಾಮರ್ಥ್ಯವನ್ನು ಉಪಯೋಗಿಸಿ ಆಗಮಿಸಿದ ಎಲ್ಲಾ ರಾಜಕೀಯ ನಾಯಕರಿಗೆ ಭರವಸೆ ನೀಡಿ ಕಳಿಸುತ್ತಿದ್ದಾರೆ.

ಮಂತ್ರಿಮಂಡಲ ವಿಸ್ತರಣೆಯಾದರೆ ವಿಶೇಷವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಎಲ್ಲೆಡೆ ಜೋರಾಗಿದೆ.
ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ದಿವಂಗತ ಮಾಜಿ ಸಚಿವ ಬಿ.ಎಲ್.ಗೌಡ
, ದಿವಂಗತ ತಿಪ್ಪೇಸ್ವಾಮಿ ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದರು. ಇವರ ನಂತರ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಹೆಚ್ಚಿದ್ದು ಒಂದು ವೇಳೆ ಸಚಿವ ಸ್ಥಾನ ದೊರೆತರೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು ಆಗಲಿದೆ ಎನ್ನುವುದು ಜಿಲ್ಲೆಯ ಜನರ ಆಶಯವಾಗಿದೆ. ಶಾಸಕರಾಗಿ ಹ್ಯಾಟ್ರಿಕ್ ಸಾಧನೆ ಮಾಡಿರುವ ರಘುಮೂರ್ತಿ ಅವರು ಸಚಿವರಾದರೆ ಕ್ಷೇತ್ರದ ಮೂರನೇ ವ್ಯಕ್ತಿಯಾಗಿ ಹ್ಯಾಟ್ರಿಕ್ ಕೀರ್ತಿಗೆ ಇವರು ಪಾತ್ರರಾಗುತ್ತಾರೆ. ಅಲ್ಲದೆ ಈಗಾಗಲೇ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಚಿವರಾಗಲು ಸಿದ್ಧರಾಗಿರುವಂತೆ ರಘುಮೂರ್ತಿ ಅವರಿಗೆ ಸೂಚನೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಒಟ್ಟಾರೆ ರಘುಮೂರ್ತಿ ಸಚಿವರಾಗಿ ಬರಲಿ ಎನ್ನುವ ಮಹಾದಾಸೆ ಜಿಲ್ಲೆಯ ಜನರದಾಗಿದೆ.

 

 

 

Share This Article
error: Content is protected !!
";