ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿಡ್ಡೇಗೌಡರು ಆದಿಚುಂಚನಗಿರಿ ಮಠದ ಪೀಠಾದೀಶರಾದ ಪರಮಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಬಗ್ಗೆ ಆಡಿರುವ ಮಾತುಗಳು ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯವಾಗಿದ್ದು, ಹಿಂದೂ ಧರ್ಮದ ಬಗ್ಗೆ, ಹಿಂದೂ ಧಾರ್ಮಿಕ ಗುರುಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇರುವ ಧೋರಣೆಗೆ ಮತ್ತೊಂದು ನಿದರ್ಶನವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೂಜ್ಯ ಶ್ರೀಗಳ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಹಗುರವಾಗಿ ಮಾತನಾಡುವ ಮೂಲಕ ಗುರು ನಿಂದನೆ ಮಾಡಿರುವ ಶಾಸಕರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಮತ್ತು ನಮ್ಮ ಧಾರ್ಮಿಕ ಗುರುಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಕಿಂಚಿತ್ತಾದರೂ ಗೌರವವಿದ್ದರೆ, ಈ ಕೂಡಲೇ ರಮೇಶ್ ಬಂಡಿಸಿದ್ದೇಗೌಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.
“ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ” ಎಂಬ ಮಾತಿದೆ. ಒಕ್ಕಲಿಗ ಸಮಾಜದ ಕೆಂಗಣ್ಣಿಗೆ ಗುರಿಯಾದರೆ ಕಾಂಗ್ರೆಸ್ ಪಕ್ಷ ಧೂಳೀಪಟವಾಗುವುದು ನಿಶ್ಚಿತ ಎಂದು ಅಶೋಕ್ ಎಚ್ಚರಿಕೆ! ನೀಡಿದ್ದಾರೆ.

