ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ದೇಶಕ್ಕೆ ಅನ್ನಕೊಡುವ ರೈತರ ಬಗ್ಗೆ ಎಲ್ಲರಿಗೂ ವಿಶೇಷವಾದ ಗೌರವವಿದೆ. ರೈತ ಸಮುದಾಯ ತಮ್ಮೆಲ್ಲಾ ಸಂಕಷ್ಟಗಳನ್ನು ಮರೆತು ನಾಡಿನ ಜನಕ್ಕಾಗಿ ಅನ್ನ, ಆಹಾರ ಕೊಡುವ ಉತ್ತಮ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ರೈತರೇ ಈ ನೆಲದ ಬೆನ್ನೆಲುಬು. ರೈತ ಸಮುದಾಯಕ್ಕೆ ರಾಜ್ಯಸರ್ಕಾರ ಹಲವಾರು ಯೋಜನೆಗಳಲ್ಲಿ ನೆರವು ನೀಡುತ್ತಾ ಬಂದಿದೆ ಎಂದು ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಮಂಗಳವಾರ ನಗರದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತದಿನಾಚರಣೆ ಹಾಗೂ ಪ್ರಗತಿಪರ ರೈತರಿಗೆ ಕೃಷಿಪಂಡಿತ ಪ್ರಶಸ್ತಿಯನ್ನು ವಿತರಿಸುವ ಕಾರ್ಯಕ್ರಮವನ್ನು ಜ್ಯೋತಿಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಾರಂಭದ ಹಂತದಲ್ಲೇ ನಾನು ಸಹ ಒಬ್ಬರೈತನ ಮಗನೆಂದು ಹೆಮ್ಮೆಯಿಂದ ಹೇಳಿದ ಶಾಸಕ ರಘುಮೂರ್ತಿ ಇತ್ತೀಚಿನ ದಿನಗಳಲ್ಲಿ ಬೆಳೆವಿಮೆ, ಬೆಳೆನಷ್ಟ ಪರಿಹಾರ ಕುರಿತಂತೆ ರೈತರಲ್ಲಿ ಅಸಮದಾನವಿದ್ದು, ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಸರಿಪಡಿಸುವ ಕಾರ್ಯ ಮಾಡಿದ್ದೇನೆ. ತಾಲ್ಲೂಕಿನ ಕಸಬಾ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದವೂ ಮಧ್ಯಂತರ ಪರಿಹಾರ ನೀಡುವಂತೆ ಮನವಿ ನೀಡಿದೆ. ಈ ಬಗ್ಗೆಯೂ ಗಮನಹರಿಸಲಾಗಿದೆ. ಪ್ರತಿಯೊಂದು ಹಂತದಲ್ಲೂ ರೈತರು ಧರಣಿ ಸತ್ಯಾಗ್ರಹ, ಪ್ರತಿಭಟನೆ ನಡೆಸಿ ತಮಗೆ ನ್ಯಾಯನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಸರ್ಕಾರವೂ ಹಲವಾರು ರೂಪದಲ್ಲಿ ರೈತರ ಬೆನ್ನಹಿಂದಯೇ ಕೆಲಸ ನಿರ್ವಹಿಸುತ್ತಿದೆ. ರೈತರು ಯಾವುದೇ ಕಾರಣಕ್ಕೂ ಬೇಸರಗೊಳ್ಳದೆ ಸರ್ಕಾರದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಗೆ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗುವ ಪುಣ್ಯದಿನ ಹತ್ತಿರ ಬರುತ್ತಿದೆ. ಈಗಾಗಲೇ ಚಿತ್ರದುರ್ಗ ಗೋನೂರು ಗ್ರಾಮದಲ್ಲಿ ಭದ್ರಾಮೇಲ್ದಂಡೆ ಯೋಜನೆ ನೀರು ಹರಿಸಲು ಕಾಮಗಾರಿ ಮುಕ್ತಾಯಗೊಂಡಿದ್ದು ಜನವರಿ ಎರಡನೇ ವಾರದಲ್ಲಿ ಈ ಕಾರ್ಯ ನೆರವೆರಲಿದೆ. ಸುಮಾರು ೫೦ ವರ್ಷಗಳ ರೈತರು ಮತ್ತು ಭದ್ರಾಮೇಲ್ದಂಡೆ ಯೋಜನೆ ಹೊರಾಟ ಸಮಿತಿ ನಡೆಸಿದ ಹೋರಾಟಕ್ಕೆ ಪ್ರತಿಫಲ ದೊರೆಯುವ ಕಾಲ ಹತ್ತಿರ ಬಂದಿದೆ. ಭದ್ರಾ ಮೇಲ್ದಂಡೆ ನೀರು ನಮ್ಮ ಜಿಲ್ಲೆಯಲ್ಲಿ ಹರಿದರೆ ಚಿತ್ರದುರ್ಗ ಜಿಲ್ಲೆ ಶಾಶ್ವತವಾಗಿ ಬರಗಾಲದಿಂದ ದೂರ ಉಳಿಯಲಿದೆ. ಇಂತಹ ಒಂದು ಉತ್ತಮ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರ ಸಕಾರಗೊಳಿಸುತ್ತಿದೆ. ಯೋಜನೆ ಜಾರಿಗೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ನೀರಾವರಿ ಇಲಾಖೆಯ ಎಲ್ಲಾ ಅಧಿಕಾರಿ ವರ್ಗಕ್ಕೆ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರ ಪರವಾಗಿ ಅಭಿನಂದಿಸುವೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದ ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ೧೨ ತಾಲ್ಲೂಕಿನ ರೈತರಿಗೆ ಈ ಯೋಜನೆ ಸದುಪಯೋಗವಾಗಲಿದೆ. ವಿಶೇಷವಾಗಿ ಚಳ್ಳಕೆರೆ ತಾಲ್ಲೂಕಿನ ೫೧ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಯಶಸ್ವಿಯಾಗಲಿದೆ. ಈ ಯೋಜನೆ ಜಾರಿಗೆ ಸರ್ಕಾರ ಈಗಾಗಲೇ ೨೧.೪೬೩ ಕೋಟಿ ಹಣವನ್ನು ಖರ್ಚುಮಾಡಿದೆ. ಚಳ್ಳಕೆರೆ ತಾಲ್ಲೂಕು ಸಂಪೂರ್ಣವಾಗಿ ನೀರಿನ ವ್ಯವಸ್ಥೆಯನ್ನು ಪಡೆಯಲಿದೆ. ಮುಂದಿನ ದಿನಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಮುಕ್ತಾಯವಾಗಲಿದೆ ಎಂದರು.
ಕೃಷಿ ಇಲಾಖೆಯ ಜಂಟಿನಿರ್ದೇಶಕ ಹಾಗೂ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಾ.ಬಿ.ಮಂಜುನಾಥ ಮಾತನಾಡಿ, ತಾಲ್ಲೂಕಿನ ಬೆಳೆವಿಮೆ, ಬೆಳೆನಷ್ಟ ಪರಿಹಾರ ಹಾಗೂ ತೊಗರಿ ಬೆಳಗಾರರಿಗೆ ಮಧ್ಯಂತರ ಪರಿಹಾರವೂ ಸೇರಿದಂತೆ ಎಲ್ಲಾ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸಂಪೂರ್ಣವರದಿಯನ್ನು ಕೃಷಿ ಆಯುಕ್ತರ ಮೂಲಕ ಸರ್ಕಾರಕ್ಕೆ ಕಳಿಸಿಕೊಟ್ಟಿದೆ. ಸರ್ಕಾರದಿಂದ ಮಾಹಿತಿ ಬಂದಕೂಡಲೇ ರೈತರಿಗೆ ಪರಿಹಾರವನ್ನು ಒದಗಿಸಲಾಗುವುದು. ಬೆಳೆವಿಮೆ ಸಮೀಕ್ಷೆ ಸರಿಯಾದ ರೀತಿಯಲ್ಲಿ ಆಗಿಲ್ಲವೆಂಬ ಆರೋಪದ ಬಗ್ಗೆ ಮಾತನಾಡಿದ ಅವರು, ರೈತರು ನೇರವಾಗಿ ಯಾಪ್ ಮೂಲಕ ಮಾಹಿತಿ ದಾಖಲಿಸುವ ಅವಕಾಶವನ್ನು ಸರ್ಕಾರ ನೀಡಿದೆ. ಶಾಸಕರ ಮಾರ್ಗದರ್ಶನದಲ್ಲಿ ಮತ್ತೊಮ್ಮೆ ಈಗಾಗಲೇ ಸಮೀಕ್ಷೆ ಕುರಿತು ನಿರ್ದೇಶನ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ(ಪ್ರೊ.ಬಣ)ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ, ರೈತ ಸಂಘದ ಪುಟ್ಟಣ್ಣಯ್ಯಬಣದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಅಖಂಡ ಕರ್ನಾಟಕ ರೈತ ಸಂಘ ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ, ಕಸಬಾ ಹೋಬಳಿ ತೊಗರಿ ಮತ್ತು ಶೇಂಗಾ ಬೆಳೆಗಾರರ ಸಂಘದ ಅಧ್ಯಕ್ಷ ಪ್ರೊ.ಸಿ.ಶಿವಲಿಂಗಪ್ಪ ಮಾತನಾಡಿದರು. ಕೃಷಿ ಪಂಡಿತಪ್ರಶಸ್ತಿಯನ್ನು ದೊಡ್ಡೇರಿಶಿವಣ್ಣ, ಎನ್.ದೇವರಹಳ್ಳಿ ಕೆ.ಟಿ.ಚಂದ್ರಣ್ಣ, ವಡೇರಹಳ್ಳಿ ಜಿ.ಸಿ.ಬಸವರಾಜ, ಹಾಲಗೊಂಡನಹಳ್ಳಿ ಹನುಮಂತರಾಯ, ಕಸ್ತೂರಿತಿಮ್ಮನಹಳ್ಳಿ ತಿಪ್ಪೇಸ್ವಾಮಿಗೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ಧಾರ್ ರೇಹಾನ್ಪಾಷ, ಇಒ ಟಿ.ಶಶಿಧರ, ತೋಟಗಾರಿಕೆ ಅಧಿಕಾರಿ ರಮೇಶ್ನಾಯ್ಕ, ಉಪಕೃಷಿ ನಿರ್ದೇಶಕ ಡಿ.ಉಮೇಶ್, ಸಹಾಯಕ ಕೃಷಿ ನಿರ್ದೇಶಕ ಎಂ.ರಮೇಶ್, ಜೀವನ್, ಮಂಜುನಾಥ, ಪ್ರಗತಿಪರ ರೈತ ಆರ್.ಎ.ದಯಾನಂದನಮೂರ್ತಿ, ಜಿಲ್ಲಾ ಕಿಸಾನ್ಸಂಘದ ಅಧ್ಯಕ್ಷ ನಾಗರಾಜು, ಗ್ಯಾರಂಟಿಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ನವೀನ್, ಜಿಲ್ಲಾ ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ತಾಲ್ಲೂಕು ಕೆಡಿಪಿ ಸದಸ್ಯ ಅಂಗಡಿ ರಮೇಶ್, ಬಸವರಾಜು, ವಿಶ್ವನಾಥರೆಡ್ಡಿ, ಸುರೇಶ್, ಕೃಷಿ ವಿಜ್ಞಾನಿ ಓಂಕಾರಪ್ಪ, ಕೇಶವ, ಹೆಗ್ಗೆರೆ ಆನಂದಪ್ಪ, ಅನ್ವರ್ಮಾಸ್ಟರ್, ಕರೀಕೆರೆತಿಪ್ಪೇಸ್ವಾಮಿ ಕಾಂಗ್ರೆಸ್ ಮುಖಂಡ ಸಿ.ಟಿ.ಶ್ರೀನಿವಾಸ್, ಶಶಿಧರ, ಬಿ.ಟಿ.ರಮೇಶ್ಗೌಡ ಮುಂತಾದವರು ಉಪಸ್ಥಿತರಿದ್ದರು.

