ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ: ಶಾಸಕ ಟಿ.ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವ ಮಧುಬಂಗಾರಪ್ಪ ಶೈಕ್ಷಣಿಕ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಸಾಕಷ್ಟು ಒತ್ತು ನೀಡಿದೆ.

ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ರೂಪಿಸುವ ಶಿಕ್ಷಕರು ಅಕ್ಷರ ಜ್ಞಾನವನ್ನು ನೀಡಿ ಅವರ ಬದುಕನ್ನು ಕಟ್ಟಿಕೊಳ್ಳುವಂತಹ ಗುಣಾತ್ಮಕ ಶಿಕ್ಷಣ ನೀಡಬೇಕು. ಇತ್ತೀಚಿಗಷ್ಟೇ ಸರ್ಕಾರ ಕಳೆದ ಹತ್ತು ವರ್ಷಗಳ ಹಿಂದೆ ನೆನೆಗುದಿಗೆ ಬಿದ್ದಿದ್ದ ವೃಂದ ಮತ್ತು ನೇಮಕಾತಿ ತಿದ್ದುಪಡಿಗೆ ಅವಕಾಶ ನೀಡಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಬಾಳನ್ನು ಬೆಳಗುವ ಜವಾಬ್ದಾರಿ ಶಿಕ್ಷಕರಾಗಿರಬೇಕೆಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

- Advertisement - 

ಅವರು, ಶುಕ್ರವಾರ ವಾಲ್ಮೀಕಿ ಕಲ್ಯಾಣಮಂಟಪದಲ್ಲಿ ಶಿಕ್ಷಣ ಕ್ಷೇತ್ರದ ದೈತಶಕ್ತಿ, ಭವ್ಯಭಾರತದ ವರಪುತ್ರ, ಶಿಕ್ಷಣ ಕ್ಷೇತ್ರದ ಧೀಮಂತನಾಯಕ, ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿರಾಧಕೃಷ್ಣನ್‌ರವರ ೧೩೭ನೇ ಜನ್ಮದಿನ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನಾಗಿ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ದಿನಾಚರಣೆ ಇಂದು ಪ್ರತಿಯೊಬ್ಬ ಶಿಕ್ಷಕನೂ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕಾಯೋನ್ಮುಖನಾಗಬೇಕು. ನೀವು ಬೋಧನೆ ಮಾಡುವ ವಿಷಯದಲ್ಲಿ ಯಾವ ವಿದ್ಯಾರ್ಥಿಯೂ ಫೇಲಾಗದಂತೆ ಜಾಗ್ರತೆ ವಹಿಸಬೇಕು. ಗುಣಾತ್ಮಕ ಶಿಕ್ಷಣ, ನಿಮ್ಮ ಪರಿಶ್ರಮ ಶಿಕ್ಷಣ ಇಲಾಖೆಯ ಮೌಲ್ಯವನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಹಂತದಲ್ಲೂ ಶಿಕ್ಷಕರು ಶಿಕ್ಷಣ ಇಲಾಖೆಯ ಹಿರಿಮೆ, ಗರಿಮೆಯನ್ನು ಸಂರಕ್ಷಿಸುವ ಸಂಕಲ್ಪಮಾಡಬೇಕೆಂದರು.

ನಾನು ಇಂಜಿನಿಯರಿಂಗ್ ಪದವಿಪಡೆದು ಕ್ಷೇತ್ರದ ಶಾಸಕನಾಗಿ ಮೂರನೇ ಬಾರಿಗೆ ಆಯ್ಕೆಯಾದರೂ ಬಾಲ್ಯದಿಂದ ಹಿಡಿದು ಇಲ್ಲಿಯ ತನಕ ನನ್ನ ವೈಯಕ್ತಿಕ ಬದುಕಿನಲ್ಲಿ ಸಂಪೂರ್ಣ ಬದಲಾವಣೆಯಾಗಿದ್ದರೂ ಜನಸೇವೆ ಮಾಡುವ ಅವಕಾಶ ಪಡೆದಿದ್ದರೂ ಅಭಿವೃದ್ದಿ ದಾಖಲಿಸುವ ನಿಟ್ಟಿನಲ್ಲಿ ಶ್ರಮವಹಿಸಿದ್ದರೂ ಇದರ ಹಿಂದೆ ನನಗೆ ಶಿಕ್ಷಣ ನೀಡಿದ ಗುರುಗಳ ಮಾರ್ಗದರ್ಶನವಿದೆ. ಇಂದಿಗೂ ಅವರನ್ನು ಗೌರವದಿಂದ ನಮಿಸುತ್ತೇನೆ. ಸಮಾಜದಲ್ಲಿ ಯಾವುದೇ ವ್ಯಕ್ತಿ, ಶಕ್ತಿಗೆ ಸಿಗದ ವಿಶೇಷ  ಗೌರವ ಶಿಕ್ಷಕರಿಗೆ ಮಾತ್ರ ದೊರೆಯುತ್ತದೆ.

- Advertisement - 

ಅದು ಶಿಕ್ಷಣ ಇಲಾಖೆಯ ವೈವಿಧ್ಯತೆ. ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಸರ್ಕಾರ ಯಾವುದೇ ರೀತಿಯ ಕೊರತೆ ಉಂಟಾಗದಂತೆ ಎಲ್ಲಾ ಸೌಲಭ್ಯ ಒದಗಿಸಿದೆ. ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಪಾಠಪ್ರವಚನ ನಡೆಯುವುದಿಲ್ಲವೆಂಬ ಪೋಷಕರ ನಿಲುವನ್ನು ಬದಲಾಯಿಸುವ ಶಕ್ತಿ ಶಿಕ್ಷಕರಿಗೆ ಇದೆ. ಶಿಕ್ಷಣ ಇಲಾಖೆ ತನ್ನದೇಯಾದ ಮೌಲ್ಯವನ್ನು ಉಳಿಸಿ,ಬೆಳೆಸಿಕೊಳ್ಳುವ ಕಾರ್ಯಕ್ಕೆ ನಿಮ್ಮೆಲ್ಲರ ಸಹಕಾರ ಶ್ರೀರಕ್ಷೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಚಳ್ಳಕೆರೆ ತಾಲ್ಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕೊರತೆ ಉಂಟಾಗದಂತೆ ಸದಾಕಾಲ ಶಿಕ್ಷಕರಿಗೆ, ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಶಾಸಕ ಟಿ.ರಘುಮೂರ್ತಿ ಶಿಕ್ಷಣವನ್ನು ಕಟ್ಟಿಬೆಳೆಸುವ ಕಾರ್ಯಕ್ಕೆ ಸಹಕಾರ ನೀಡಿದ್ಧಾರೆ. ಸುಮಾರು ಮೂರು ಕೋಟಿಗೂ ಹೆಚ್ಚು ಹಣವನ್ನು ಶಿಕ್ಷಣ ಇಲಾಖೆ ನೀಡಿ ನೂರು ಹೊಸ ಕೊಠಡಿ ನಿರ್ಮಾಣ, ರಿಪೇರಿ ಹಾಗೂ ಇನ್ನಿತರೆ ಸೌಲಭ್ಯಗಳಿಗೆ ಸಹಕಾರ ನೀಡಿದ್ಧಾರೆ. ಚಳ್ಳಕೆರೆ ತಾಲ್ಲೂಕಿಗೆ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು, ಉದ್ಯೋಗವಾಶವನ್ನು ಕಲ್ಪಿಸುವ ಜಿಟಿಟಿಸಿ ಮುಂತಾದ ವೃತ್ತಪರ ಶಿಕ್ಷಣ ಪ್ರಾರಂಭಿಸುವ ಮೂಲಕ ಚಳ್ಳಕೆರೆ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಬಲತುಂಬಿದ್ಧಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸಂದರ್ಭದಲ್ಲೂ ನಮ್ಮೊಡನೆ ಸದಾಕಾಲವಿದ್ದು, ಶಿಕ್ಷಣ ಅಭಿವೃದ್ದಿಯ ಬಗ್ಗೆ ಮಾರ್ಗದರ್ಶನ ನೀಡಿದ್ಧಾರೆ. ಕ್ಷೇತ್ರದ ಶೈಕ್ಷಣಿಕ ಸಾಧನೆಗೆ ಶಾಸಕರ ಕೊಡುಗೆ ಅಪಾರವೆಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ನಗರಸಭೆ ಅಧ್ಯಕ್ಷ ಶಿಲ್ಪಮುರುಳಿ, ಉಪಾಧ್ಯಕ್ಷೆ ಕವಿತಾಬೋರಯ್ಯ ಮಾತನಾಡಿದರು. ಶಿಕ್ಷಕರ ದಿನಾಚರಣೆಯ ಬಗ್ಗೆ ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಎಂ.ಶಿವಲಿಂಗಪ್ಪ, ಸರ್ವಪಲ್ಲಿರಾಧಕೃಷ್ಣನ್‌ರವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ರಾಷ್ಟ್ರದ ಅತ್ಯುನ್ನತ್ತ ಸ್ಥಾನ ರಾಷ್ಟ್ರಪತಿ ಹಾಗೂ ರಾಯಬಾರಿಯಾಗಿ ಸೇವೆಸಲ್ಲಿಸಿದ ಮಹಾನೀಯರು ಪ್ರತಿಯೊಬ್ಬ ಶಿಕ್ಷಕನೂ ಅವರ ಆದರ್ಶಗಳನ್ನು ರೂಢಿಸಿಕೊಂಡರೆ ಮಾತ್ರ ಶಿಕ್ಷಕರ ದಿನಾಚರಣೆಗೆ ವಿಶೇಷ ಅರ್ಥಬರಲಿದೆ ಎಂದರು.

ಪ್ರಾರಂಭದಲ್ಲಿ ಅಕ್ಷರದಾಸೋಹ ಅಧಿಕಾರಿ ಜಿ.ಟಿ.ಮಂಜುನಾಥಸ್ವಾಮಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ನಗರಸಭಾ ಸದಸ್ಯ ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ, ಸುಮಭರಮಣ್ಣ, ಸುಜಾತಪ್ರಹ್ಲಾದ್, ಕವಿತಾವೀರೇಶ್, ನಾಮಿನಿ ಸದಸ್ಯರಾದ ಬಡಗಿಪಾಪಣ್ಣ, ನೇತಾಜಿಪ್ರಸನ್ನ, ಇಒ ಎಚ್.ಶಶಿಧರ, ಜಿಲ್ಲಾಪಂಚಾಯಿತಿ ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ಕೆಡಿಪಿ ಸದಸ್ಯೆ ನೇತ್ರಾವತಿ, ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸಣ್ಣಸೂರಮ್ಮ, ಕಾರ್ಯದರ್ಶಿ ಈ.ಹನುಮಂತರಾಯ,

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಟಿ.ಶ್ರೀನಿವಾಸನ್, ಕಾರ್ಯದರ್ಶಿ ಡಿ.ಎಸ್.ಪಾಲಯ್ಯ, ಸಹಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಕುಮಾರ್, ಕಾರ್ಯದರ್ಶಿ ಈರಣ್ಣ, ದೈಹಿಕ ಶಿಕ್ಷಣ ಪರಿವೀಕ್ಷಕ ಸುನೀಲ್‌ನಾಯ್ಕ, ಬಿಆರ್‌ಸಿ ಬಿ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ನಗರದ ವಾಲ್ಮೀಕಿ ವೃತ್ತದಿಂದ ವಾಲ್ಮೀಕಿ ಕಲ್ಯಾಣಮಂಟಪದವರೆಗೂ ಮೆರವಣಿಗೆ ನಡೆಸಲಾಯಿತು. ತಿಮ್ಮಪ್ಪಯ್ಯನಹಳ್ಳಿ ಸರ್ಕಾರಿಪ್ರೌಢಶಾಲೆ ವಿದ್ಯಾರ್ಥಿಗಳು ನಡೆಸಿದ ಕಂಸಾಳೆ ಜಾನಪದ ಹಾಡು ಎಲ್ಲರ ಗಮನಸೆಳೆಯಿತು.

 

 

Share This Article
error: Content is protected !!
";