ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕ್ಷೇತ್ರದ ಶೈಕ್ಷಣಿಕ ಅಭಿವೃದ್ದಿಗಾಗಿ ಕಳೆದ ಸುಮಾರು ೧೨ ವರ್ಷಗಳಿಂದ ನೂರಾರು ಕೋಟಿ ಹಣವನ್ನು ಶಿಕ್ಷಣ ಇಲಾಖೆ ಸರ್ಕಾರದಿಂದ ವೆಚ್ಚಮಾಡಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳ ದುರಸ್ಥಿ, ಸೌಲಭ್ಯ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ಉತ್ತಮಪಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಣ್ಣಕೈಗಾರಿಕೆ ಅಭಿವೃದ್ದಿಗೆಮಂಡಳಿ ಅಧ್ಯಕ್ಷ, ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶನಿವಾರ ಬೆಳಗೆರೆ-ನಾರಾಯಣಪುರ ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ ಆವರಣದಲ್ಲಿ ಸುಮಾರು ೮೦ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ ನಾಲ್ಕು ಕೊಠಡಿಗಳ ಭೂಮಿಪೂಜೆ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯಾವುದೇ ಶಾಲೆಯಲ್ಲೂ ಸೌಲಭ್ಯಗಳ ಕೊರತೆ ಉಂಟಾಗದಂತೆ ಜಾಗ್ರತೆ ವಹಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ಸರ್ಕಾರ ಅನುದಾನ ನೀಡಲು ವಿಳಂಬ ಮಾಡಿದರೂ ಸಹ ಶಿಕ್ಷಣ ಸಚಿವರ ಮನವಲಿಸಿ ಅನುದಾನವನ್ನು ಒದಗಿಸಲಾಗುತ್ತಿದೆ. ಸರ್ಕಾರ ನೀಡುವ ಸೌಲಭ್ಯಗಳು ಸದ್ವಿನಿಯೋಗವಾಗುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಜೂನ್ ೨ರಿಂದ ತಾಲೂಕಿನಾದ್ಯಂತ ಶಾಲೆಗಳು ಆರಂಭಗೊಂಡಿವೆ. ವಿಶೇಷವಾಗಿ ಈ ಬಾರಿ ಶಾಲೆಗಳ ಆರಂಭಕ್ಕೂ ಮುನ್ನವೇ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಶಾಲೆಗಳಿಗೆ ದಾಖಲಾತಿ ಅಂದೋಲನ ಜಾಗೃತಿಯನ್ನು ವಿಶೇಷವಾಗಿ ನಡೆಸಿದ್ಧಾರೆ.
ದಾಖಲಾತಿ ಅಂದೋಲನ ಈ ಬಾರಿ ಉತ್ತಮ ಫಲನೀಡಿದೆ. ಕೇವಲ ಐದು ದಿನಗಳಲ್ಲಿ ತಾಲ್ಲೂಕಿನಾದ್ಯಂತ ೧೫೦೦ಕ್ಕೂ ಹೆಚ್ಚು ಮಕ್ಕಳು ಶಾಲೆಗಳಿಗೆ ದಾಖಲಾಗಿದ್ಧಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಶಾಲೆಗಳ ದಾಖಲಾತಿ ಸಂಖ್ಯೆ ದ್ವಿಗುಣಗೊಳ್ಳಲಿದೆ. ಶಾಸಕ ಟಿ.ರಘುಮೂರ್ತಿ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಪ್ರಗತಿಗೆ ಎಲ್ಲಾ ಹಂತದಲ್ಲೂ ಪ್ರಾಮಾಣಿಕ ಕಾರ್ಯ ಮುಂದುವರೆದಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ರೂಪ, ನಿವೃತ್ತ ಪ್ರಾಂಶುಪಾಲ ಪ್ರೊ.ಶಿವಲಿಂಗಪ್ಪ ಹಾಗೂ ಗ್ರಾಮಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.