ಗ್ರೇಡ್-1 ನಗರಸಭೆ ಮಾಡಲು ಸರ್ಕಾರಕ್ಕೆ ಒತ್ತಾಯ-ಶಾಸಕ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಅಭಿವೃದ್ಧಿಗೆ ಗ್ರೇಡ್1 ನಗರಸಭೆಯನ್ನಾಗಿ ಸರ್ಕಾರ ಕೂಡಲೇ ಘೋಷಣೆ ಮಾಡುವಂತೆ ಒತ್ತಾಯಿಸಲಾಗುತ್ತಿದ್ದು, ಇದರಿಂದ ನಗರದ ಜನತೆಗೆ ಲಾಭವಾದರೆ ಹಾಗೂ ಪೌರಕಾರ್ಮಿಕರನ್ನು ಖಾಯಂ ಗೊಳಿಸಲು ಉಪಯೋಗವಾಗುತ್ತೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ನಗರಸಭೆ ವತಿಯಿಂದ ನಗರದ ಖಾಸಗಿ ಕಲ್ಯಾಣ ಮಂದಿರದಲ್ಲಿ ನಗರಸಭೆ ಹಾಗೂ ಪೌರಸೇವಾ ನೌಕರರ ಸೇವಾ ಸಂಘದ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರೇಡ್ 1 ನಗರಸಭೆಯಾಗಿ ಮಾರ್ಪಟ್ಟರೆ ಹೆಚ್ಚಿನ ಅನುದಾನ ದೊರೆಯುವುದರೊಂದಿಗೆ ಗುತ್ತಿಗೆ ಪೌರಕಾರ್ಮಿಕರು ಖಾಯಂ ಆಗಲು ಸಹಕಾರಿಯಾಗಲಿದೆ. ಸರ್ಕಾರ ಪೌರ ಕಾರ್ಮಿಕರಿಗೆ 34 ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದ್ದು, ಈ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಸಲು ಅನುದಾನ ನೀಡಲಾಗುವುದು.

ಪೌರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿರುವ ಪ್ರದೇಶಗಳಲ್ಲಿ ಕೊಳಗೇರಿ ಅಭಿವೃದ್ದಿ ಮಂಡಲಿಯಿಂದ ಹೆಚ್ಚಿನ ಅನುದಾನ ತಂದು ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ರಾಜ್ಯ ಸರ್ಕಾರದಿಂದ ಪೌರ ಕಾರ್ಮಿಕರಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ನಗರಕ್ಕೆ ತರುವ ಮೂಲಕ ಕಾರ್ಯ ನಿರ್ವಹಿಸಲಾಗುವುದು ಎಂದರು.

ನಗರಸಭೆಯ ಶೇ. 24ರಷ್ಟು ಅನುದಾನದ ಕಾಮಗಾರಿಗಳಿಗೆ ಶೀಘ್ರ ಟೆಂಡರ್ ಕರೆಯುವಂತೆ ಸೂಚಿಸಲಾಗಿದೆ. ನಗರದ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದ್ದು, ಸಮಾಜದ ಮುಖ್ಯ ಭಾಗವಾಗಿದ್ದಾರೆ. ಪೌರ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸಿಸಿ ಜನರ ವಿಶ್ವಾಸ ಗಳಿಸಬೇಕಿದೆ ಎಂದರು.

ಪೌರ ಸೇವಾ ನೌಕರರ ಸೇವಾ ಸಂಘದ ನಗರ ಶಾಖೆ ಅಧ್ಯಕ್ಷ ತಿಪ್ಪಣ್ಣ ಮಾತನಾಡಿ, ಪೌರಕಾರ್ಮಿಕರ ಖಾಯಂ ಮಾಡಿರುವುದು ಸ್ವಾಗತಾರ್ಹವಾಗಿದೆ. ಪೌರಕಾರ್ಮಿಕರು ಇಂದಿನ ಸವಲತ್ತುಗಳನ್ನು ಪಡೆಯಲು ಹೋರಾಟ ನಡೆಸಿದ ಮಹನೀಯರನ್ನು ಸ್ಮರಿಸಬೇಕಿದೆ.

ಆದರೆ, ಗುತ್ತಿಗೆ ಕಾರ್ಮಿಕರಿಗೆ ಖಾಯಂ ಕಾರ್ಮಿಕರಿಗೆ ಇದ್ದಂತೆ ರಜೆ, ಮೊದಲಾದ ಸೌಲಭ್ಯಗಳು ಇಲ್ಲ. ಕಾಯಿಲೆ ಬಂದು ರಜೆ ಹಾಕಿದರೂ ಸಂಬಳ ಕಡಿತ ಮಾಡಲಾಗುತ್ತಿದೆ. ನಮ್ಮ ಸರಿಸಮಾನವಾಗಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು. ಬಾಕಿ ಇರುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಪೌರ ಸೇವಾ ನೌಕರರ ಸೇವಾ ಸಂಘಕ್ಕೆ ಕೊಠಡಿಯನ್ನು ನೀಡಬೇಕಿದೆ ಎಂದು ಮನವಿ ಮಾಡಿದರು.

 ಪರಿಸರ ವಿಭಾಗದ ಸಹಾಯಕ ಅಭಿಯಂತರ ಈರಣ್ಣ ಪ್ರಸ್ತಾವಿಕವಾಗಿ ಮಾತನಾಡಿ, ಬಸವಲಿಂಗಪ್ಪ ಅವರು ಸಚಿವರಾಗಿದ್ದಾಗ ಮಲಹೊರುವ ಪದ್ದತಿಯನ್ನು ನಿಷೇಧಿಸಿದರು,

ಪೌರಕಕಾರ್ಮಿಕರಿಗೆ ಆತ್ಮ ವಿಶ್ವಾಸ ಹಾಗೂ ಮನೋಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅವರಿಗಾಗಿ ಒಂದು ದಿನಾಚರಣೆಯ ಔಚಿತ್ಯ ಇದೆ ಎನ್ನುವುದನ್ನು ಮನಗಂಡು 2007ರಿಂದ ಸೆ.23ರಂದು ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಪೌರಕಾರ್ಮಿಕರಿಗೆ ವಿಶೇಷ ಭತ್ಯೆಗಳನ್ನು ನೀಡುವುದರೊಂದಿಗೆ, ಮನೆ ನಿರ್ಮಾಣಕ್ಕೆ ತಗುಲುವ 7.5 ಲಕ್ಷ ರೂಗಳಲ್ಲಿ 6 ಲಕ್ಷ ರೂಗಳ ಸಹಾಯಧನ ನೀಡಲಾಗುತ್ತಿದೆ ಎಂದರು.

 ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ನಿಕಟ ಪೂರ್ವ ಅಧ್ಯಕ್ಷ ವಿ.ಎಸ್.ರವಿಕುಮಾರ್, ಜಿಲ್ಲಾ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪಾಂಡು ಸಿಂಧೆ, ಖಜಾಂಚಿ ವೆಂಕಟೇಶ ಬಾಬು ಸೇರಿದಂತೆ ನಗರಸಭಾ ಸದಸ್ಯರು, ಸಿಬ್ಬಂದಿ, ಪೌರಕಾರ್ಮಿಕರು ಭಾಗವಹಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";