ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ವಿವಿದ ಕಾಮಾಗಾರಿಗಳಿಗೆ ಈಗಾಗಲೇ ಶಂಕು ಸ್ಥಾಪನೆಯಾಗಿದ್ದು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗ ಬೇಕಾದ ಅನುದಾನಕ್ಕೆ ಅಡ್ಡಿ ಪಡಿಸಲು ಹೊರಟ ಕೆಲವರ ನಡೆ ಖಂಡನಿಯ ಎಂದು ಶಾಸಕ ದೀರಜ್ ಮುನಿರಾಜ್ ಹೇಳಿದರು.
ಅವರು ನಗರದ ಶಾಸಕರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ದ್ವೇಷ ರಾಜಕಾರಣ ಮಾಡದೆ ಈ ಹಿಂದಿನ ಕಾಂಗ್ರೆಸ್ ಶಾಸಕರು ಮಾಡಿದ್ದ ಕ್ರಿಯಾಯೋಜನೆ ಯಥಾವತ್ತಾಗಿ ಕಾರ್ಯರೂಪಕ್ಕೆ ತರುತ್ತಿದ್ದು ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಇತ್ತೀಚೆಗೆ ನಗರಸಭೆ ಮುಂದೆ ಅಲ್ಪಸಂಖ್ಯಾತರ ಅನುದಾನ ಬಳಕೆ ಕುರಿತು ಪ್ರತಿಭಟನೆ ನಡೆಸಲಾಗಿದೆ.
ಈ ಪ್ರತಿಭಟನೆಯಲ್ಲಿ ಟೀಕೆ ಮಾಡಿರುವ ಸದಸ್ಯರ ವಾರ್ಡ್‌ಗಳಲ್ಲಿ ಒಬ್ಬ ಅಲ್ಪಸಂಖ್ಯಾತರೂ ಇಲ್ಲ. ನಿಯಮಾನುಸಾರವೇ ಅನುದಾನ ಬಳಕೆ ಮಾಡಲಾಗಿದೆ. ಹೀಗಿದ್ದು ಸಹ ಪ್ರತಿಭಟನೆ ಮಾಡಿರುವ ಉದ್ದೇಶ ಏನು ಅನ್ನುವುದನ್ನು ಸಾರ್ವಜನಿಕರೇ ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.
ನಿಯಮ ಗಾಳಿಗೆ ತೂರಿ ಬಿಬಿಎಂಪಿ ಕಾರ್ಯ ನಿರ್ವಹಣೆ. ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಇರುವ ಎಂ.ಎಸ್.ಜಿ.ಪಿ ಕಸ ವಿಲೇವಾರಿ ಘಟಕ ಪರಿಸರ ಇಲಾಖೆ ಎಲ್ಲಾ ನಿಯಮ ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಇಲ್ಲಿನ ಬಿಬಿಎಂಪಿ ಕಸ ವಿಲೇವಾರಿ ಘಟಕ ಮುಚ್ಚಬೇಕು.
ಕಸ ವಿಲೇವಾರಿ ಘಟಕದಿಂದ ಹೊರಗೆ ಹರಿದು ಬತ್ತಿರುವ ತ್ಯಾಜ್ಯ ನೀರು ಅಂತರ್ಜಲ ಸೇರುವ ಮೂಲಕ ಸುತ್ತ- ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಶುದ್ದ ಕುಡಿಯು ನೀರು ಇಲ್ಲದಾಗಿದೆ. ಕಳೆದ ವಿಧಾನಸಭೆ ಅಧಿವೇಶದಲ್ಲಿ ಈ ಬಗ್ಗೆ ಕೇಳಲಾಗಿರುವ ಪ್ರಶ್ನೆಗೆ ಅರಣ್ಯ ಹಾಗೂ ಪರಿಸರ ಸಚಿವರು ನೀಡಿರುವ ಉತ್ತರದಲ್ಲೂ ಸಹ ಕಸ ವಿಲೇವಾರಿ ಘಟಕ ಸೂಕ್ತ ರೀತಿಯಲ್ಲಿ ಕಾರ್ಯನಿರ್ವ ಹಿಸದೆ ಇರುವ ಬಗ್ಗೆ ನೋಟಿಸ್ ಜಾರಿ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಘಟಕದ ಕಾರ್ಯನಿರ್ವಹಿಸುತ್ತಿರುವ ಕುರಿತಂತೆ ಅಗತ್ಯ ಇರುವ ಎಲ್ಲಾ ದಾಖಲಾತಿ ಪಡೆಯಲಾಗಿದೆ. ಸರ್ಕಾರ ತಕ್ಷಣ ಕಸ ವಿಲೇವಾರಿ ಘಟಕ ಬಂದ್ ಮಾಡದೇ ಇದ್ದರೆ ಕಾನೂನು ಹೋರಾಟ ನಡೆಸಲಾಗುವುದು.
ಕಸ ವಿಲೇವಾರಿ ಘಟಕದ ಸುತ್ತಲಿನ ಗ್ರಾಮ ಪಂಚಾಯಿತಿ ಗಳಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಬಿಬಿಎಂಪಿ ವತಿಯಿಂದ ಬರುವ ಅನುದಾನ ಪಡೆದುಕೊಂಡಿಲ್ಲ. ಅಭಿವೃದ್ಧಿ ಜತೆಗೆ ಸ್ಥಳೀಯ ಜನರ ಆರೋಗ್ಯ ಕೂಡ ಮುಖ್ಯವಾಗಿದೆ ಎಂದರು.
ಕಸ ವಿಲೇವಾರಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಹುತೇಕ ಕಾರ್ಮಿಕರು ಬಾಂಗ್ಲಾದೇಶದ ಅಕ್ರಮ ವಲಸಿಗರೇ ಆಗಿದ್ದಾರೆ. ಈ ಕುರಿತಂತೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತಾಲ್ಲೂಕಿನಲ್ಲಿ ಯಾವುದೇ ಅನಾಹುತ ನಡೆಯುವ ಮುನ್ನ ಅಕ್ರಮ ವಲಸಿಗರ ವಿರುದ್ಧ ಪೊಲೀಸರು ಎಚ್ಚರ ವಹಿಸಬೇಕಿದೆ ಎಂದು ಆಗ್ರಹಿಸಿದರು.
ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ-
ಜಿಲ್ಲಾ ಆಸ್ಪತ್ರೆ ಕಟ್ಟಡ ನಗರಸಭೆ ವ್ಯಾಪ್ತಿಯ ಸಿದ್ದೇನಾಯಕನಹಳ್ಳಿಯಲ್ಲಿ 9 ಎಕರೆ ಪ್ರದೇಶದಲ್ಲಿ 195 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದೇ ಸ್ಥಳದಲ್ಲಿ ಸುಮಾರು 22ಕೋಟಿ ವೆಚ್ಚದಲ್ಲಿ 50 ಬೆಡ್ ವ್ಯವಸ್ಥೆ ಇರುವ ಕ್ರಿಟಿಕಲ್ ಕೇರ್ ಆಸ್ಪತ್ರೆಯು ನಿರ್ಮಾಣವಾಗಲಿದೆ. ಪ್ರಸ್ತುತ ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಈ ಕೊರತೆ ನೀಗಿಸಲು 6 ಎಕರೆ ಪ್ರದೇಶದಲ್ಲಿ ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾವ ನೀಡಲಾಗಿದೆ. ಆರೋಗ್ಯ ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.
ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಯೂ ಉತ್ತಮ ರೀತಿಯಲ್ಲಿ ನೆಡೆದಿದ್ದು, ಪ್ರತಿ ಗ್ರಾಮದಲ್ಲಿ ಯೋಜನೆಯು ಸಮರ್ಪಕವಾಗಿ ಜನತೆಗೆ ತಲುಪಿದೆ ದೊಡ್ಡತುಮಕೂರು, ಮಜರಾ ಹೊಸಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
50 ವರ್ಷ ರಾಜಕಾರಣ ಮಾಡೇ ಮಾಡ್ತೀನಿ-
ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನವ ದೊಡ್ಡಬಳ್ಳಾಪುರ ಖಂಡಿತ ಮಾಡುತ್ತೇನೆ, ಟೀಕೆ ಮಾಡುವ ಕೆಲವರಿಗೆ ನನ್ನ ಅಭಿವೃದ್ಧಿ ಕಾರ್ಯಗಳಿದ್ದಲೇ ಉತ್ತರಿಸುತ್ತೇನೆ. ವಿನಾ ಕಾರಣ ಟೀಕೆ ಮಾಡುವವರು ಒಮ್ಮೆ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ಬಂತಿ ವೆಂಕಟೇಶ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ, ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ನಗರಸಭೆ ಸದಸ್ಯ ಪದ್ಮನಾಭ್ ಇದ್ದರು.