ಚಂದ್ರವಳ್ಳಿ ನ್ಯೂಸ್, ಭರಮಸಾಗರ:
ಸರ್ಕಾರಿ ಶಾಲೆಗೆ ಬರುವ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಭರಮಸಾಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಸಂಸ್ಥೆ ನವದೆಹಲಿ ಇವರ ಸಹಯೋಗದಲ್ಲಿ ಚಿತ್ರದುರ್ಗ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಬ್ಯಾಗ್ ಹಾಗೂ ಸ್ವಟರ್‌ಗಳನ್ನು ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನ ಮಂತ್ರಿಯಾಗಿದ್ದಾಗ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮಂಜೂರು ಮಾಡಿದರು. ಸರ್ವ ಶಿಕ್ಷ ಅಭಿಯಾನ ಕೂಡ ಅವರ ಕಾಲದಲ್ಲಿ ಆರಂಭವಾಯಿತು. ಚತುಷ್ಪಥ ಹೆದ್ದಾರಿ ನಿರ್ಮಿಸಿದ್ದರಿಂದ ಲಕ್ಷಾಂತರ ವಾಹನಗಳು ಸಂಚರಿಸುತ್ತಿದ್ದರೂ ಅಪಘಾತಗಳ ಸಂಖ್ಯೆ ಹಿಂದಿಗಿಂತ ಈಗ ಕಡಿಮೆಯಾಗಿದೆ ಎಂದರು.
ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರಿ ಬಡ ಮಕ್ಕಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ನಿಮ್ಮ ನಿಮ್ಮ ಭವಿಷ್ಯಗಳನ್ನು ರೂಪಿಸಿಕೊಂಡು ಸಮಾಜದಲ್ಲಿ ಸತ್ಪ್ರೆಜೆಗಳಾಗಿ. ೧೯೯೪-೯೫ ರಲ್ಲಿ ಒಂದು ಲಕ್ಷ ಶಿಕ್ಷಕರುಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಆಗ ಶೇ.೫೦ ರಷ್ಟು ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಲಾಯಿತು. ಸರ್ಕಾರಿ ಶಾಲೆಗೆ ಬರುವ ಮಕ್ಕಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ.
ಈ ಶಾಲೆಗೆ ದೊಡ್ಡ ಪ್ರಮಾಣದಲ್ಲಿ ಮಕ್ಕಳು ಬರುತ್ತಿರುವುದರಿಂದ ಒಂಬತ್ತು ಶಾಲೆಗಳನ್ನು ಕಟ್ಟಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನ ಹದಿನಾಲ್ಕು ಶಾಲೆಗಳನ್ನು ನೀಡುತ್ತೇನೆ. ಗ್ರಾಮೀಣ ಭಾಗದಿಂದ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಸ್ವಂತ ಖರ್ಚಿನಿಂದ ಬಸ್‌ಗಳ ವ್ಯವಸ್ಥೆ ಕಲ್ಪಿಸುತ್ತೇನೆ. ಡ್ರೈವರ್, ಕಂಡಕ್ಟರ್‌ಗೆ ಸಂಬಳ ನೀಡಿ ಬಸ್‌ಗೆ ಡೀಸೆಲ್ ಕೂಡ ಹಾಕಿಸುತ್ತೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.
ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ರಶೀದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ರುದ್ರೇಶ್, ಸಂಪತ್‌ಕುಮಾರ್, ಡಿ.ಎಸ್.ಪ್ರವೀಣ್, ಕುಮಾರ್, ಈಶ್ವರ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸಂತೋಷ್, ಕೊಟ್ರೇಶ್, ಮಂಜುನಾಥ್ ಹಾಗೂ ಶಿಕ್ಷಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.