ಶಾಸಕರಿಗೆ ‘ಎಸಿ’ ವೈಭೋಗ; ವಿದ್ಯಾರ್ಥಿಗಳಿಗೆ ಬಾಡಿಗೆ ಮನೆಯ ‘ಸೆರೆವಾಸ’!​ ಕೋಟಿ ಕೋಟಿ ವೆಚ್ಚದ ‘ಹೈಟೆಕ್’

News Desk
- Advertisement -  - Advertisement - 

ಶಾಸಕರಿಗೆ ಎಸಿವೈಭೋಗ; ವಿದ್ಯಾರ್ಥಿಗಳಿಗೆ ಬಾಡಿಗೆ ಮನೆಯ ಸೆರೆವಾಸ‘! ಕೋಟಿ ಕೋಟಿ ವೆಚ್ಚದ ಹೈಟೆಕ್ಕಟ್ಟಡವಿದ್ದರೂ ಹಂದಿಗಳ ಗೂಡಿನಂತಹ ಬಾಡಿಗೆ ಮನೆಯೇ ಗತಿ: ಹೊಳಲ್ಕೆರೆ ಪರಿಶಿಷ್ಟ ಮಕ್ಕಳ ಪಾಲಿಗೆ ಇಂದಿಗೂ ಮರೀಚಿಕೆಯಾದ ಲೋಕಾರ್ಪಣೆಭಾಗ್ಯ!
ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್
, ಚಿತ್ರದುರ್ಗ:
ಸರ್ಕಾರದ ಹಣವೆಂದರೆ ಅದು ಸಾರ್ವಜನಿಕರ ಬೆವರಿನ ಹನಿಗಳು. ಆದರೆ, ಈ ಬೆವರಿನ ಬೆಲೆಯಲ್ಲಿ ನಿರ್ಮಾಣವಾದ ಬೃಹತ್ ಕಟ್ಟಡವೊಂದು ಬಳಕೆಗೆ ಬಾರದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ನಿಂತಿರುವುದು ದುರಂತದ ಸಂಗತಿ.

ಹೊಳಲ್ಕೆರೆ ಪಟ್ಟಣದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ 6.50 ಕೋಟಿ ರೂಪಾಯಿ ವೆಚ್ಚದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಕಥೆ ಈಗ ದೀಪದ ಕೆಳಗಿನ ಕತ್ತಲೆಯಂತಾಗಿದೆ.

- Advertisement - 

​ಹೈಟೆಕ್ ಸೌಲಭ್ಯಗಳ ನಡುವೆ ಅನಾಥ ಪ್ರಜ್ಞೆ:
​ಒಟ್ಟು 650.00 ಲಕ್ಷ ರೂಪಾಯಿಗಳ ಬೃಹತ್ ಅನುದಾನದಲ್ಲಿ ನಿರ್ಮಾಣಗೊಂಡಿರುವ ಈ ಹಾಸ್ಟೆಲ್ ಸಾಮಾನ್ಯ ಕಟ್ಟಡವಲ್ಲ. ಇದರಲ್ಲಿ 100 ವಿದ್ಯಾರ್ಥಿಗಳು ಆರಾಮವಾಗಿ ವಾಸಿಸಬಹುದಾದ ಸಾಮರ್ಥ್ಯವಿದೆ. 16 ವಿಶಾಲವಾದ ಕೊಠಡಿಗಳು, ಅತ್ಯಾಧುನಿಕ ಡೈನಿಂಗ್ ಹಾಲ್, ಸುಸಜ್ಜಿತ ಅಡುಗೆ ಮನೆ, ವಾರ್ಡನ್ ಮತ್ತು ಸಿಬ್ಬಂದಿ ಕೊಠಡಿಗಳು ಹಾಗೂ ಹೈಟೆಕ್ ಶೌಚಾಲಯಗಳನ್ನು ಒಳಗೊಂಡಿರುವ ಬೃಹತ್ ಹೈಟೆಕ್ ಕಟ್ಟಡ ಪೂರ್ಣಗೊಂಡು 6 ತಿಂಗಳು ಕಳೆದಿದೆ. ಆದರೆ, ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಈ ಕಟ್ಟಡದ ಬಾಗಿಲು ಮಾತ್ರ ಹೊಳಲ್ಕೆರೆಯ ವಿದ್ಯಾರ್ಥಿಗಳ ಪಾಲಿಗೆ ಇನ್ನೂ ತೆರೆದಿಲ್ಲ. ವಿಶಾಲವಾದ ಜಾಗದಲ್ಲಿ ಎದ್ದು ನಿಂತಿರುವ ಈ ಭವ್ಯ ಕಟ್ಟಡ ಇಂದು ಕೇವಲ ಕಲ್ಲು-ಮಣ್ಣಿನ ರಾಶಿಯಂತೆ ಭಾಸವಾಗುತ್ತಿದೆ.

​ನರಕ ಸದೃಶ ಬಾಡಿಗೆ ಕಟ್ಟಡದಲ್ಲಿ ಮಕ್ಕಳ ಜೀವನ:
​ಒಂದೆಡೆ ಕೋಟಿ ಬೆಲೆಯ ಹೈಟೆಕ್ ಕಟ್ಟಡ ಉದ್ಘಾಟನೆಗೆ ಕಾಯುತ್ತಿದ್ದರೆ
, ಇನ್ನೊಂದೆಡೆ ಸಮಾಜದ ಕಟ್ಟಕಡೆಯ ಸಮುದಾಯದ ವಿದ್ಯಾರ್ಥಿಗಳು ಸದ್ಯ ಹಂದಿಗಳ ಗೂಡಿನಂತಿರುವ ಇಕ್ಕಟ್ಟಾದ ಬಾಡಿಗೆ ಕಟ್ಟಡದಲ್ಲಿ ದಿನದೂಡುತ್ತಿದ್ದಾರೆ. ಓದುವ ವಯಸ್ಸಿನ ಮಕ್ಕಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದ ಆ ಜಾಗದಲ್ಲಿ ವಾಸಿಸುವುದು ಒಂದು ರೀತಿಯ ಶಿಕ್ಷೆಯಾಗಿ ಪರಿಣಾಮಿಸಿದೆ. ಸುಸಜ್ಜಿತ ಕಟ್ಟಡವಿದ್ದರೂ ಮಕ್ಕಳು ಮಾತ್ರ ಕೊಳೆಗೇರಿಯಂತಹ ವಾತಾವರಣದಲ್ಲಿ ಬದುಕುವಂತಾಗಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

- Advertisement - 

​”ನಮ್ಮ ಮಕ್ಕಳು ಓದಿ ದೊಡ್ಡವರಾಗಲಿ ಎಂದು ಹೊಳಲ್ಕೆರೆಗೆ ಕಳಿಸಿದರೆ, ಅವರು ಅಲ್ಲಿ ಅನುಭವಿಸುತ್ತಿರುವ ನರಕ ಯಾತನೆ ನೋಡಲು ಸಾಧ್ಯವಾಗುತ್ತಿಲ್ಲ. ಹೊಸ ಕಟ್ಟಡ ಸಿದ್ಧವಿದ್ದರೂ ನಮಗೆ ಯಾಕೆ ಪ್ರವೇಶ ನೀಡುತ್ತಿಲ್ಲ? ನಮ್ಮ ಮಕ್ಕಳ ಭವಿಷ್ಯದ ಜೊತೆ ಯಾಕೆ ಚೆಲ್ಲಾಟವಾಡುತ್ತಿದ್ದೀರಿ?” ಎಂಬುದು ಪೋಷಕರ ಆಕ್ರೋಶದ ನುಡಿಗಳಾಗಿವೆ.

​ಪ್ರಶ್ನೆಯಾಗಿಯೇ ಉಳಿದ ಲೋಕಾರ್ಪಣೆ‘:
​ಸಕಲ ವ್ಯವಸ್ಥೆಗಳಿದ್ದರೂ ಈ ಕಟ್ಟಡದ ಬೀಗ ತೆರೆಯಲು ಮುಹೂರ್ತ ಯಾಕೆ ಕೂಡಿ ಬರುತ್ತಿಲ್ಲ? ಅಧಿಕಾರಿಗಳ ಉದಾಸೀನವೋ ಅಥವಾ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯೋ? ಗೊತ್ತಿಲ್ಲ.

 ಆದರೆ ಮೂಲಗಳ ಪ್ರಕಾರ ಲೋಕೋಪಯೋಗಿ ಇಲಾಖೆ ಈ ಕಟ್ಟಡವನ್ನು ನಿರ್ಮಿಸಿ ಗುತ್ತಿಗೆದಾರರಿಂದ ಈಗಾಗಲೇ ವಶಕ್ಕೆ ಪಡೆದು ಸಂಬಂಧಿಸಿದ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ಹೊಳಲ್ಕೆರೆ ಲೋಕೋಪಯೋಗಿ ಇಲಾಖೆ ಎಇಇ ಅವರು ಮಾಹಿತಿ ನೀಡಿದ್ದಾರೆ. ಪರಿಶಿಷ್ಟ ವರ್ಗಗಳ ತಾಲೂಕು ಅಧಿಕಾರಿ ಮಾತ್ರ ಇನ್ನೂ ಶಾಸಕರು ಒಪ್ಪಿಗೆ ಕೊಟ್ಟಿಲ್ಲ, ಹಾಗಾಗಿ ನಾವು ಹಸ್ತಾಂತರ ಮಾಡಿಕೊಳ್ಳುವುದಿಲ್ಲ ಎನ್ನುವ ಉದಾಸೀನದ ಮಾತುಗಳನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಅಧಿಕಾರಿಯ ಸ್ಪಷ್ಟನೆಗೆ ಪೋನ್ ಮಾಡಿದರೆ ಆ ಅಧಿಕಾರಿ ಪೋನ್ ರಿಸೀವ್ ಮಾಡುತ್ತಿಲ್ಲ.
ಒಟ್ಟಿನಲ್ಲಿ ಸರ್ಕಾರದ ಹಣ ನೀರಿನಂತೆ ಖರ್ಚಾದರೂ
, ಯಾರೋ ಒಬ್ಬರ ಪ್ರತಿಷ್ಠೆ ಅಥವಾ ನಿರ್ಲಕ್ಷ್ಯದಿಂದಾಗಿ ನೂರಾರು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಹಾದಿ ದುರ್ಗಮವಾಗಿದೆ.

ಶಾಸಕರಿಗೆ ಎಸಿವೈಭೋಗ;
ಒಂದು ಕಡೆ ಜನರ ಸೇವಕರೆಂದು ಕರೆಸಿಕೊಳ್ಳುವ ಜನಪ್ರತಿನಿಧಿಗಳು ಜನರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಅರಮನೆಯಂತಹ ಸರ್ಕಾರಿ ಬಂಗಲೆಗಳಲ್ಲಿ
, ಎಸಿ ಗಾಳಿಯ ಸುಖ ಸವಿಯುತ್ತಿದ್ದಾರೆ.
ಇನ್ನೊಂದೆಡೆ
, ಇವರನ್ನ ಆಯ್ಕೆ ಮಾಡಿದಂತಹ ಅದೇ ಜನರ ಮಕ್ಕಳು ಶಿಕ್ಷಣಕ್ಕಾಗಿ ಊರು ಬಿಟ್ಟು ಬಂದು, ಮೂಲಸೌಕರ್ಯವಿಲ್ಲದ ಬಾಡಿಗೆ ಕಟ್ಟಡಗಳ ಕತ್ತಲ ಕೋಣೆಯಲ್ಲಿ ಜೀವನ ತಳ್ಳುತ್ತಿದ್ದಾರೆ. ಇದು ಇಂದಿನ ವ್ಯವಸ್ಥೆಯ ಅಣಕಕ್ಕೆ ಹಿಡಿದ ಕನ್ನಡಿ.

​ಇಕ್ಕಟ್ಟಾದ ಬಾಡಿಗೆ ಕಟ್ಟಡ:
​ಸರ್ಕಾರಿ ಹಾಸ್ಟೆಲ್‌ಗಳೆಂದರೆ ಅಲ್ಲಿ ಕನಿಷ್ಠ ಸೌಲಭ್ಯಗಳಿರಬೇಕು ಎಂಬ ನಿಯಮವಿದೆ. ಆದರೆ
, ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಮನೆಗಳಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳ ಸ್ಥಿತಿ ಶೋಚನೀಯವಾಗಿದೆ. ಇಕ್ಕಟ್ಟಾದ ಜಾಗದಲ್ಲೇ ಮಕ್ಕಳು ಓದಿ ಜೀವನ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಾರೆ.

​ಜಾಗದ ಅಭಾವ: ಒಂದು ಸಣ್ಣ ಕೊಠಡಿಯಲ್ಲಿ ಹತ್ತಾರು ವಿದ್ಯಾರ್ಥಿಗಳು ಮಲಗಬೇಕಾದ ಪರಿಸ್ಥಿತಿ. ಇದರಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಮಕ್ಕಳಿಗೆ ಕಾಡುತ್ತಿವೆ.

​ಶೌಚಾಲಯದ ಸಮಸ್ಯೆ:
ನೂರಾರು ವಿದ್ಯಾರ್ಥಿಗಳಿಗೆ ಕೇವಲ ಮೂರ್ನಾಲ್ಕು ಶೌಚಾಲಯಗಳಿರುವ ಹಾಸ್ಟೆಲ್, ಇದರಿಂದಾಗಿ ಮುಂಜಾನೆ ಎದ್ದಾಗಿನಿಂದಲೇ ಪ್ರಕೃತಿ ಕರೆಗಾಗಿ ಸಾಲು ನಿಲ್ಲಬೇಕಾದ ಅನಿವಾರ್ಯತೆ.

​ಅಭ್ಯಾಸಕ್ಕೆ ತೊಂದರೆ:
ಓದಲು ಪ್ರತ್ಯೇಕ ಜಾಗವಿಲ್ಲದೆ, ದೀಪದ ವ್ಯವಸ್ಥೆಯೂ ಸರಿಯಿಲ್ಲದೆ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ.

​ಶಾಸಕರ ಎಸಿ ರೂಮಿನ ತಂಪುರಾಜಕೀಯ:
​ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ಹೊತ್ತ ಶಾಸಕರು ತಮ್ಮ ಕಚೇರಿಗಳನ್ನು ಅತ್ಯಾಧುನಿಕವಾಗಿ ನವೀಕರಿಸಿಕೊಳ್ಳುತ್ತಾರೆ. ಕಡು ಬೇಸಿಗೆಯಲ್ಲಿ ತಂಪು ಗಾಳಿಯ ನಡುವೆ ಕುಳಿತು ಬಡವರ ಅಭಿವೃದ್ಧಿಯ ಬಗ್ಗೆ ಭಾಷಣ ಮಾಡುವ ಇವರಿಗೆ, ತಮ್ಮದೇ ಕ್ಷೇತ್ರದ ಹಾಸ್ಟೆಲ್ ಮಕ್ಕಳು ಬೆವರಿನಲ್ಲಿ ನೆನೆಯುತ್ತಾ, ಕನಿಷ್ಠ ಗಾಳಿ-ಬೆಳಕಿಲ್ಲದೆ ಪರದಾಡುತ್ತಿರುವುದು ಕ್ಷೇತ್ರದ ಶಾಸಕರ ಕಣ್ಣಿಗೆ ಕಾಣುತ್ತಿಲ್ಲವೇ? ಎಂಬುದು ಪೋಷಕರು ಮತ್ತು ಸಾರ್ವಜನಿಕರ ಪ್ರಶ್ನೆ.

​ಆಡಳಿತ ಯಂತ್ರದ ನಿರ್ಲಕ್ಷ್ಯ:
​ವರ್ಷಗಳಿಂದ ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದ್ದರೂ
, ಸ್ವಂತ ಕಟ್ಟಡ ನಿರ್ಮಿಸಿ ಅರ್ಧ ವರ್ಷ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಕ್ಷೇತ್ರದ ಶಾಸಕರ ಕಡೆ ಕೈ ತೋರಿಸಿ ನೆಪ ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಆದರೆ, ಅಧಿಕಾರದ ಮದದಲ್ಲಿ ಸಾಮಾನ್ಯ ಜನರ ಮತ್ತು ವಿದ್ಯಾರ್ಥಿಗಳ ಸಂಕಷ್ಟಗಳು ಗೌಣವಾಗುತ್ತಿವೆ.

ಸಾರ್ವಜನಿಕರ ಆಗ್ರಹ:
ಈಗಲಾದರೂ ಹೊಳಲ್ಕೆರೆಯ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ. ಬಾಡಿಗೆ ಕಟ್ಟಡದ ನರಕದಿಂದ ಮಕ್ಕಳನ್ನು ಮುಕ್ತಗೊಳಿಸಿ
, ಈ ಹೈಟೆಕ್ ವಿದ್ಯಾರ್ಥಿ ನಿಲಯವನ್ನು ಕೂಡಲೇ ಲೋಕಾರ್ಪಣೆ ಮಾಡಬೇಕು. ಸುಸಜ್ಜಿತ ಪರಿಸರದಲ್ಲಿ ಓದುವ ಹಕ್ಕು ಈ ಮಕ್ಕಳಿಗೂ ಇದೆ ಎಂಬುದನ್ನು ಆಡಳಿತ ರೂಢರು ಮರೆಯಬಾರದು.

​ಕೊನೆಯ ಮಾತು:
​ವಿದ್ಯಾರ್ಥಿಗಳು ದೇಶದ ಆಸ್ತಿ. ಅವರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಶಾಸಕರು ತಮ್ಮ ಎಸಿ ಕೊಠಡಿಗಳಿಂದ ಹೊರಬಂದು ಒಮ್ಮೆ ಈ ಬಾಡಿಗೆ ಕಟ್ಟಡದ ಹಾಸ್ಟೆಲ್‌ಗಳಿಗೆ ಭೇಟಿ ನೀಡಲಿ. ಅಂದಾಗ ಮಾತ್ರ ಅವರಿಗೆ ಅಲ್ಲಿನ ಮಕ್ಕಳ ನೋವು ಅರ್ಥವಾಗಲು ಸಾಧ್ಯ. ಜನಪ್ರತಿನಿಧಿಗಳ ಐಷಾರಾಮಿ ಜೀವನದ ಬೆಲೆ ವಿದ್ಯಾರ್ಥಿಗಳ ಭವಿಷ್ಯವಾಗಬಾರದು.

 

Share This Article
error: Content is protected !!
";