ಚಂದ್ರವಳ್ಳಿ ನ್ಯೂಸ್, ಸಿರಿಗೆರೆ:
ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವುಳ್ಳವರು ಶಿವಕುಮಾರ ಶ್ರೀಗಳು. ಹಿರಿಯ ಶ್ರೀಗಳ ವ್ಯಕ್ತಿತ್ವ ಜಗದಗಲ, ಮುಗಿಲಾಗಲವಾದುದು. ಮಹಾಕವಿ ಕಾಳಿದಾಸನನ್ನು ಸರಿಗಟ್ಟುವ ಪ್ರೌಢಿಮೆ ಸಂಸ್ಕೃತದಲ್ಲಿ ಹಿರಿಯ ಶ್ರೀಗಳಿಗಿತ್ತು. ಬಸವಣ್ಣನರ ಪಡಿಯಚ್ಚು ಹಿರಿಯ ಶ್ರೀಗಳಲ್ಲಿ ಕಾಣಬಹುದು ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತಿಳಿಸಿದರು.
ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದ ಮುಂಭಾಗದಲ್ಲಿ ಸುಸಜ್ಜಿತ ಸಭಾಂಗಣದಲ್ಲಿ ಶನಿವಾರ ಜರುಗಿದ ಎರಡನೆಯ ದಿನದ ಲಿಂ. ಶಿವಕುಮಾರ ಶ್ರೀಗಳ ೩೨ನೆಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.
೧೯೫೬ ಕ್ಕಿಂತ ಮುಂಚೆಯೇ ಸಿರಿಗೆರೆಯಲ್ಲಿ ಅಡಿಪಾಯ ಹಾಕಿದವರು. ದೇಶದಲ್ಲೇ ಮೊದಲು ಸಹಪಂಕ್ತಿ ಭೋಜನ ಜಾರಿಗೆ ತಂದವರು ಲಿಂ. ಶ್ರೀಗಳವರು. ಸಿರಿಗೆರೆ ಒಂದು ಜಾತಿಯ ಮಠವಲ್ಲ. ಸರ್ವಜನಾಂಗದ ಶಾಂತಿಯ ತೋಟವಾಗಿದೆ. ನೀರಾವರಿ ಯೋಜನೆಯಲ್ಲಿ ಸಹಕರಿಸಿದವರು ಕಾರಜೋಳ ಅವರೂ ಪ್ರಮುಖರು. ಸರ್ವಪಕ್ಷದವರು ಸಹ ನೀರಾವರಿ ಯೋಜನೆಗೆ ಶ್ರಮಿಸಿದ್ದಾರೆ.
ಅಖಂಡ ಭಾರತವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರಂತೆ ಹಿರಿಯ ಶ್ರೀಗಳು ಹರಿದು ಹಂಚಿಹೋಗಿದ್ದ ಸಮಾಜವನ್ನು ಸಂಘಟಿಸಿದರು. ಧರ್ಮವನ್ನು ಜನಸಾಮಾನ್ಯರಿಗೆ ಆಡುಭಾಷೆಯಲ್ಲಿ ತಲುಪಿಸಿದವರು ಬಸವಾದಿ ಶರಣರು. ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಶ್ರೀಗಳು ಕಾಳಿದಾಸನ ಪ್ರೌಢಿಮೆಗೆ ಸರಿಗಟ್ಟುವಂತಿತ್ತು. ಆದರೆ ಸ್ವಾಮಿಗಳಾದ ಮೇಲೆ ಸಾಮಾಜಿಕ ಸಂಘ?ದಲ್ಲಿ ಶ್ರೀಗಳ ಪ್ರತಿಭೆ ಬರಡಾಯಿತು.
ಬಸವ ಪೂರ್ವ ಯುಗವಿದ್ದಂತೆ ಶ್ರೀಗಳ ವಿದ್ಯಾರ್ಥಿ ಜೀವನ. ಪೀಠಾದಿಪತಿಯಾದ ನಂತರ ದಿನಗಳು ಬಸವ ಯುಗವಿದ್ದಂತೆ. ಬಸವಣ್ಣನವರ ತಾತ್ವಿಕ ನೆಲೆಗಟ್ಟಿನ ಮೇಲೆ ಸಹಪಂಕ್ತಿ ಭೋಜನ ವ್ಯವಸ್ಥೆಯನ್ನು ದೇಶದಲ್ಲಿ ಮೊಟ್ಟಮೊದಲು ಜಾರಿಗೆ ತಂದವರು. ಸಿರಿಗೆರೆ ಮಠ ಒಂದು ಜಾತಿಯ ಮಠವಾಗಿದ್ದರೂ ಅದನ್ನು ಜಾತ್ಯತೀತವಾಗಿ ಬೆಳೆಸಿದರು. ಕುವೆಂಪು ಅವರ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿದರು.
ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ ಮಾತನಾಡಿ ಶ್ರೀಗಳ ಆಶೀರ್ವಾದದಿಂದ ಚಿತ್ರದುರ್ಗ ಲೋಕಸಭೆಯಲ್ಲಿ ಜಯಗಳಿದೆ. ೧೨ನೇ ಶತಮಾನದಲ್ಲಿ ಬಸವಣ್ಣ ಸೇರಿದಂತೆ ಎಲ್ಲಾ ಶರಣರ ತತ್ವ ಆದರ್ಶಗಳನ್ನು ಪಾಲಿಸುತ್ತಿರುವ ಮಠ ಸಿರಿಗೆರೆ ಶ್ರೀಮಠವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ನಾಡಿನಾದ್ಯಾಂತ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿದೀಪವಾದವರು ಶಿವಕುಮಾರ ಶ್ರೀಗಳು.
ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಏತನೀರಾವರಿ ಯೋಜನೆಗಳ ಮೂಲಕ ರೈತರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ರೈತರಿಗೆ ಮತ್ತು ರೈತರ ಮಕ್ಕಳ ಶಿಕ್ಷಣಕ್ಕೆ ಉದಯೋನ್ಮೂಖ ಕೊಡುಗೆ ನೀಡಿದ ಮಠ ತರಳಬಾಳು ಮಠ. ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯ ರಥವನ್ನು ಮುಂದೆ ಎಳೆದ ಕೀರ್ತಿ ಹಿರಿಯ ಶ್ರೀಗಳಿಗೆ ಸಲ್ಲುತ್ತದೆ. ಶರಣರ ಆದರ್ಶಗಳಾದ ಶೋಷಣೆ ರಹಿತ, ಸಮಸಮಾಜವನ್ನು ೨೦ನೆಯ ಶತಮಾನದಲ್ಲಿ ನಿರ್ಮಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದರು. ಬಡವರು, ರೈತರು, ಶೋಷಿತರ ಪರವಾಗಿ ಸಿರಿಗೆರೆ ಮಠದ ಶ್ರೀಗಳ ಕಾರ್ಯ ಶ್ಲಾಘನೀಯ
ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಕರ್ನಾಟಕದಲ್ಲಿ ಸಿರಿಗೆರೆ ಮಠವು ಉತ್ತುಂಗದಲ್ಲಿ ಇರಲು ಲಿಂ. ಶ್ರೀಗಳವರ ಕ್ರಾಂತಿಕಾರಿ ಆಡಳಿತವೇ ಕಾರಣ. ಇತ್ತೀಚೆಗೆ ಅಕ್ಕ ಸಮ್ಮೇಳನದಲ್ಲಿ ಅಲ್ಲಿನ ಭಕ್ತರು ಸಿರಿಗೆರೆ ಮಠ ಹಾಗೂ ಶ್ರೀಗಳನ್ನು ಕೊಂಡಾಡಿದ್ದು, ಹೆಮ್ಮೆಯ ವಿಚಾರವಾಗಿದೆ. ಶ್ರೀಮಠದ ವಿದ್ಯಾಸಂಸ್ಥೆಯಲ್ಲಿ ಹಲವಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ-ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯವಾಗಿದೆ. ಶಿಕ್ಷಣ ಇಂದು ವಾಣಿಜ್ಯಿಕರಣವಾಗಿದೆ. ಆದರೆ ಅಂದು ಸಿರಿಗೆರೆ ಹಿರಿಯ ಶ್ರೀಗಳು ಉಚಿತ ಶಿಕ್ಷಣಕ್ಕೆ ಮಹತ್ವ ನೀಡಿದುದನ್ನು ತಮ್ಮಯ್ಯ ಸ್ಮರಿಸಿದರು.
ಹೊಳಲ್ಕೆರೆ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ ಭರಮಸಾಗರ ಹಾಗೂ ಜಗಳೂರು ಏತನೀರಾವರಿ ರುವಾರಿ ಡಾ.ಶ್ರೀಗಳನ್ನು ಆಧುನಿಕ ಭಗೀರಥ ಎಂದು ರೈತರು ಹೆಮ್ಮೆಯಿಂದ ಕರೆಯುತ್ತಿದ್ದಾರೆ. ಶ್ರೀಗಳ ಇಚ್ಚಾಶಕ್ತಿಯು ರೈತರ ಕಲ್ಯಾಣಕ್ಕಾಗಿ ಮುಡಿಪಾಗಿದೆ. ಶ್ರೀಗಳ ಮಾರ್ಗದರ್ಶನ ಇಡೀ ಸಮಾಜಕ್ಕೆ ಬೇಕಿದೆ. ಸರ್ವ ಸಮುದಾಯವನ್ನು ಗೌರವಿಸುವ ಮಠ ಸಿರಿಗೆರೆ ಶ್ರೀಮಠವಾಗಿದೆ.
ಕಡೂರು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ ಹನ್ನೆರಡನೇ ಶತಮಾನದ ವಚನಕಾರರ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಮಠ. ಭಕ್ತರಿಗೆ ದಿಕ್ಕನ್ನು ತೋರಿಸಿದವರು ಹಾಗೂ ಸಮಸ್ತ ಜನತೆಗೆ ದಾರಿದೀಪವಾದವರು ಶಿವಕುಮಾರ ಶ್ರೀಗಳವರು. ಡಾ.ಶ್ರೀಗಳು ಸರ್ಕಾರದ ಸಹಾಯದಿಂದ ಸಾವಿರಾರು ಕೋಟಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ರೈತರ ಬದುಕಿನಲ್ಲಿ ಆಶಾಕಿರಣವಾಗಿದ್ದಾರೆ. ಏತ ನೀರಾವರಿ ಮೂಲಕ ಬಯಲು ಸೀಮೆಗೆ ನೀರುಣಿಸಿ, ಪರಿಸರದ ಸಮತೋಲನಕ್ಕೆ ಕಾರಣವಾಗಿದ್ದಾರೆ ಎಂದು ಅವರು ತಿಳಿಸಿದರು.
ದಾವಣಗೆರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಮತಿ ಜಯಪ್ಪ ಉಪನ್ಯಾಸ ನೀಡಿ ವಚನ ಸಾಹಿತ್ಯವನ್ನು ಸಂಗೀತ, ನಾಟಕದ ಮೂಲಕ ಜನಮನಕ್ಕೆ ತಲುಪಿಸಿದ ಕೀರ್ತಿ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಸಲ್ಲುತ್ತದೆ. ಗುಬ್ಬಿ ವೀರಣ್ಣ ನಾಟಕ ಕಂಪನಿಯ ಹಾರ್ಮೋನಿಯಂ ಮಾಸ್ತರ್ ರಾಜು ಅವರ ಮೂಲಕ ಸಾವಿರಾರು ವಚನಗಳಿಗೆ ರಾಗ ಸಂಯೋಜನೆ ಮಾಡಿಸಿದರು. ಆ ವಚನಗಳನ್ನು ಅಕ್ಕನ ಬಳಗದ ಕಲಾವಿದರು ನಾಡಿನಾದ್ಯಂತ ಹಾಡುತ್ತಿದ್ದರು. ಶರಣರ ನಾಟಕಗಳು ಕರ್ನಾಟಕ ಮಾತ್ರವಲ್ಲದೆ ದೇಶದ ನಾನಾ ನಗರಗಳಲ್ಲಿ ಪ್ರದರ್ಶನ ಮಾಡಿಸಿದರು ಎಂದು ಸುಮತಿ ಜಯಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಪಂಚಾಕ್ಷರಿ ಸಂಗೀತ ಶಾಲೆಯ ಟಿ.ಎಚ್.ಎಂ ಶಿವಕುಮಾರಸ್ವಾಮಿ ವಚನಗೀತೆ ಹಾಡಿದರು, ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಡೆದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿಗಳು ಮೂಡಲ ಪಾಯ ದೊಡ್ಡಾಟ ಪ್ರದರ್ಶಿಸಿದರು. ಈ.ದೇವರಾಜು ನಿರೂಪಿಸಿದರು, ಎಂ.ಎನ್.ಶಾಂತ ಸ್ವಾಗತಿಸಿದರು.