ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಹಳದಿ (ಯೆಲ್ಲೋ) ಮೆಟ್ರೋ ಲೈನ್ ಅನ್ನು ಇದೇ 10ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಹಿತಿ ನೀಡಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕನಿಷ್ಠ 8 ಲಕ್ಷ ಜನರಿಗೆ ಯೆಲ್ಲೋ ಲೈನ್ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಪ್ರಧಾನಿಯವರು ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತದ ಬಳಿ ಇರುವ ಮಿಲಿಟರಿ ಮೈದಾನಕ್ಕೆ ಅಂದು ಆಗಮಿಸಲಿದ್ದಾರೆ. ಬಳಿಕ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ ಮೂಲಕ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‍ಗೆ ಬಂದು ತಲುಪಲಿದ್ದಾರೆ.
ಅಲ್ಲಿ ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲಿನ ಉದ್ಘಾಟನೆ ನೆರವೇರಿಸುವರು ಎಂದು ವಿಜಯೇಂದ್ರ ಮಾಹಿತಿ ನೀಡಿದರು.
ಇದಾದ ನಂತರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‍ನಿಂದ ಸೌತ್ ಎಂಡ್ ಸರ್ಕಲ್ ಮೂಲಕ ರಾಗಿಗುಡ್ಡ ತಲುಪುತ್ತಾರೆ. ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್‍ನಲ್ಲೂ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಮಹಾಜನತೆ ಈ ಸಂದರ್ಭಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಪ್ರಧಾನಿಯವರನ್ನು ಸಂತೋಷದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗುವ ನಿಟ್ಟಿನಲ್ಲಿ ಬೆಂಗಳೂರಿನ ಮಹಾಜನತೆ ಕೈಜೋಡಿಸಬೇಕೆಂದು ವಿಜಯೇಂದ್ರ ಅವರು ಮನವಿ ಮಾಡಿದರು.
ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ, ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಮ್ಮ ಮೆಟ್ರೋ ಕಾಮಗಾರಿಯು ಸಾಕಷ್ಟು ವೇಗ ಪಡೆದಿತ್ತು ಎಂದು ಬಿ ವೈ ವಿಜಯೇಂದ್ರ ವಿಶ್ಲೇಷಿಸಿದರು.
ಬೆಂಗಳೂರಿನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಇದೆ. ಭಾರತದ ಪ್ರಧಾನಮಂತ್ರಿಯವರು ಮೆಟ್ರೋ ಲೋಕಾರ್ಪಣೆಗೆ ಬರುತ್ತಿದ್ದಾರೆ ಎಂಬುದನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನೆಗೆ ಉತ್ತರಿಸಿದರು.
ಪ್ರಧಾನಿ ಸ್ವಾಗತಕ್ಕೆ ಸಕಲ ಸಿದ್ಧತೆ:
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಗಳೂರಿನ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್ ಎಂಡ್ ಸರ್ಕಲ್, ರಾಗಿಗುಡ್ಡ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್‍ಗಳ ಬಳಿ ಮತ್ತು ಮೆಟ್ರೋ ಹಳದಿ ಮಾರ್ಗದ ಎಲ್ಲ ಮೆಟ್ರೋ ಸ್ಟೇಷನ್‍ಗಳಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಪ್ರಧಾನಿ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಬಿ.ವೈ ವಿಜಯೇಂದ್ರ ತಿಳಿಸಿದರು.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಸ್.ಆರ್. ವಿಶ್ವನಾಥ್, ಸಿ.ಕೆ. ರಾಮಮೂರ್ತಿ, ಎಸ್. ಮುನಿರಾಜು ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.

