ಮೋದಿ ಸರ್ಕಾರದ ಭ್ರಷ್ಟ ಮತ್ತು ಅಸಮರ್ಥ ಆಡಳಿತ ಶೀಘ್ರ ಅಂತ್ಯ- ಖರ್ಗೆ
ಚಂದ್ರವಳ್ಳಿ ನ್ಯೂಸ್, ಪಾಟ್ನಾ:
ಮೋದಿ ಸರ್ಕಾರದ ಭ್ರಷ್ಟ ಮತ್ತು ಅಸಮರ್ಥ ಆಡಳಿತದ ಅಂತ್ಯಕ್ಕೆ ಬಿಹಾರ ವಿಧಾನಸಭಾ ಚುನಾವಣೆ ನಾಂದಿಯಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಪಾಟ್ನಾದಲ್ಲಿ ಬುಧವಾರ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಬಿಹಾರದ ರಾಜಕೀಯ ಬೆಳವಣಿಗೆ ಕುರಿತು ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.
ಎನ್‘ಡಿಎ ನೇತೃತ್ವದ ಕೇಂದ್ರ ಆಡಳಿತಾರೂಢ ಸರ್ಕಾರದಲ್ಲಿ ಬಿರುಕುಗಳು ಮೂಡುತ್ತಿದ್ದು, ಆಂತರಿಕ ಕಲಹ ಈಗಾಗಲೇ ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.
ಎನ್‘ಡಿಎ ಒಕ್ಕೂಟದ ಬಿರುಕಿಗೆ ಬಿಜೆಪಿ ನಾಯಕರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಲು ನೋಡುತ್ತಿದೆ. ಬಿಹಾರ ಜನತೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತಿರಸ್ಕರಿಸಿ, ಅಭಿವೃದ್ಧಿ ಪರ ಮತ ಹಾಕಲಿದ್ದಾರೆಂದು ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಟೀಕಿಸಿದ ಖರ್ಗೆ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ವಿಫಲಗೊಳಿಸಿದ್ದಾರೆಂದು ಆರೋಪಿಸಿದರು.
ರಾಜತಾಂತ್ರಿಕ ತಪ್ಪು ಹೆಜ್ಜೆಗಳು ಮೋದಿ ಆಡಳಿತದಲ್ಲಿ ಇಟ್ಟಿರುವುದರಿಂದ ಆಡಳಿತದ ಸಂಪೂರ್ಣ ವೈಫಲ್ಯವನ್ನು ಪ್ರತಿಬಿಂಬಿಸುತ್ತಿವೆ. ಹಾಗಾಗಿ ಭಾರತವು ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ಮೋದಿಯವರು ನನ್ನ ಸ್ನೇಹಿತ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಆದರೆ, ಅದೇ ಸ್ನೇಹಿತ ಭಾರತಕ್ಕೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆಂದು ಖರ್ಗೆ ವ್ಯಂಗ್ಯವಾಡಿದ್ದಾರೆ.
ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗವನ್ನು ಟೀಕಿಸಿದ ಖರ್ಗೆ ಅವರು, ಚುನಾವಣಾ ಪ್ರಕ್ರಿಯೆ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ದೇಶದ ಹಲವು ರಾಜ್ಯಗಳಿಂದ ಮತ ಕಳ್ಳತನದ ಬಗ್ಗೆ ಆರೋಪಗಳು ಕೇಳಿ ಬರುತ್ತಿದೆ. ಚುನಾವಣಾ ಆಯೋಗದ ನಡವಳಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಆದರೆ, ಆಯೋಗವು ಈ ಕಳವಳಗಳನ್ನು ಪರಿಹರಿಸುವ ಬದಲು, ನಮ್ಮಿಂದ ಅಫಿಡವಿಟ್ಗಳನ್ನು ಕೇಳುತ್ತಿದೆ. ಇದು ಪ್ರಶ್ನಿಸುವವರನ್ನು ಮೌನಗೊಳಿಸುವ ಪ್ರಯತ್ನವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಮೋದಿ ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ. ಹಾಗಾಗಿ ದೇಶದಲ್ಲಿ ನಿರುದ್ಯೋಗ, ಸಾಮಾಜಿಕ ಧ್ರುವೀಕರಣ ಮತ್ತು ಸಾಂವಿಧಾನಿಕ ಸಂಸ್ಥೆಗಳ ವ್ಯವಸ್ಥಿತ ದುರ್ಬಲಗೊಳಿಸುವಿಕೆ ಹೆಚ್ಚುತ್ತಿದ್ದು ಎಂದು ಖರ್ಗೆ ಅವರು ಆರೋಪಿಸಿದ್ದಾರೆ.

