ಮೋದಿ ಸರ್ಕಾರ 5 ವರ್ಷ ಪೂರ್ಣಗೊಳಿಸಲ್ಲ-ಸಿಎಂ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಪ್ರಧಾನಿ ನರೇಂದ್ರ ‌ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷ ಪೂರೈಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರದಲ್ಲಿನ ರಾಜಕೀಯ ವಿದ್ಯಾಮಾನಗಳು ಮತ್ತು ಕೇಂದ್ರ ಪಕ್ಷಕ್ಕೆ ಇರುವ ಮಾಹಿತಿ ಆಧರಿಸಿ ನಾನು ಹೇಳುತ್ತಿದ್ದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷ ಪೂರ್ಣ ಅವಧಿ ಮುಗಿಸುವುದಿಲ್ಲ ಎಂದು ಭವಿಷ್ಯ ನುಡಿದರು.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ನಿರೀಕ್ಷಿತ ಪ್ರಮಾಣದ ಸೀಟುಗಳನ್ನು ಪಡೆಯುವಲ್ಲಿ ಬಿಜೆಪಿ ಸೋತಿದೆ. ಅಲ್ಲದೆ ಬಹಿರಂಗವಾಗಿ ಬಂಡಾಯ ಎದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿ ಏಕೆ ಇಟ್ಟುಕೊಂಡಿದೆ? ಯತ್ನಾಳ್ ಅವರನ್ನು ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಮಾಡಲು ಇಟ್ಟುಕೊಂಡಿದೆ ಎಂದು ಸಿಎಂ ಹೇಳಿದರು.
ಇದೇ ಯತ್ನಾಳ್ ಈ ಹಿಂದೆ ಯಡಿಯೂರಪ್ಪ ವಿರುದ್ಧ ಇಪ್ಪತ್ತು ಸಾವಿರ ಕೋಟಿ ಹಗರಣ ಆಗಿದೆ ಎಂದು ಆರೋಪಿಸಿದ್ದರು. ಆದರೂ ಯತ್ನಾಳ ವಿರುದ್ಧ ಕೇಂದ್ರ ಬಿಜೆಪಿಯವರು ಏಕೆ ಕ್ರಮ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

 ಬಿಜೆಪಿ ಅವರು ರಾಹುಲ್ ಗಾಂಧಿಯವರನ್ನು ಮುಗಿಸಲು ಸಂಚು ನಡೆಸುತ್ತಿದ್ದಾರೆಂದು ಸಿಎಂ ಆರೋಪಿಸಿದರು. ರಾಹುಲ್ ಗಾಂಧಿ ಅವರು ತ್ಯಾಗ ಬಲಿದಾನದ ಸಂಸ್ಕೃತಿ ಮತ್ತು ಹುತಾತ್ಮರ ಕುಟುಂಬದಿಂದ ಬಂದಿದ್ದು ಬಿಜೆಪಿ ಷಡ್ಯಂತ್ರಕ್ಕೆಲ್ಲಾ ಹೆದರುವವರಲ್ಲ. ಇಂಧಿರಾಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಇಂಥಾ ಉನ್ನತ ತ್ಯಾಗ ಬಲಿದಾನದ ಕುಟುಂಬದಿಂದ ಬಂದು ರಾಹುಲ್ ಗಾಂಧಿ ಅವರು ದೇಶಕ್ಕಾಗಿ ಅವಿರತ ಹೋರಾಟ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಇಂದಿರಾಗಾಂಧಿಗೆ ಆದ ಗತಿಯೇ ರಾಹುಲ್ ಗಾಂಧಿಗೆ ಆಗುತ್ತದೆ ಎಂದು ಬಿಜೆಪಿ‌ಬೆದರಿಕೆ ಹಾಕಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರು, ರಾಹುಲ್ ಗಾಂಧಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಈ ರೀತಿ ಜೀವ ಬೆದರಿಕೆಗಳ ಮೂಲಕ ಬಿಜೆಪಿ, ಕಾರ್ಯಕರ್ತರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

 

 

- Advertisement -  - Advertisement - 
Share This Article
error: Content is protected !!
";