ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
“ಬೆಂಬಲ ಬೆಲೆ ಹೆಚ್ಚಳ ರೈತರ ಆದಾಯ ದ್ವಿಗುಣಗೊಳಿಸಲು ಮೋದಿ ಸರ್ಕಾರದ ದಿಟ್ಟ ಹೆಜ್ಜೆ” ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಮುಂಗಾರಿನ ಆರಂಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಸಜ್ಜೆ, ತೊಗರಿ, ಉದ್ದು, ಹೆಸರು ಕಾಳು, ಸೋಯಾ, ಎಳ್ಳು, ಹುಚ್ಚೆಳ್ಳು, ಹತ್ತಿ ಸೇರಿದಂತೆ 14 ಆಹಾರ ಧಾನ್ಯಗಳ ಬೆಂಬಲ ಬೆಲೆ (MSP) ಹೆಚ್ಚಿಸಿ ಮಹತ್ವದ ತೀರ್ಮಾನ ಕೈಗೊಂಡಿದೆ.
ದೇಶದ ಒಟ್ಟು ವಾರ್ಷಿಕ ಆಹಾರ ಧಾನ್ಯ ಉತ್ಪಾದನೆಗೆ ಶೇ.50% ಕ್ಕಿಂತ ಹೆಚ್ಚು ಕೊಡುಗೆ ನೀಡುವ ಬೆಳೆಗಳ ಬಿತ್ತನೆಗೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದ್ದು, ರೈತರು ತಮ್ಮ ಬೆಳೆಗಳಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ಅನ್ನದಾತರ ಆದಾಯ ದ್ವಿಗುಣಗೊಳಿಸುವ ಸಂಕಲ್ಪಿತ ಹಾದಿಗೆ ಬದ್ಧವಾಗಿರುವ ಮೋದಿ ಜೀ ಅವರ ನೇತೃತ್ವದ ಎನ್.ಡಿ.ಎ ಸರ್ಕಾರ ಹಿಂದಿನ ವರ್ಷಗಳಿಗಿಂತ ಅತಿಹೆಚ್ಚು ಬೆಂಬಲ ಬೆಲೆ ನೀಡಿರುವುದು ಕೃಷಿ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿನ ಬದ್ಧತೆ ಹಾಗೂ ರೈತ ಪರ ಕಾಳಜಿಯನ್ನು ಸಾಕ್ಷೀಕರಿಸುತ್ತದೆ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.