ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೋದಿ ಅವರು ಪ್ರಧಾನಿಯಾಗುವ ಮೊದಲು ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಕುರಿತು ತೀವ್ರ ಟೀಕೆಗಳನ್ನು ಮಾಡುತ್ತಿದ್ದರು ಎಂದು ಕಾಂಗ್ರೆಸ್ ತಿಳಿಸಿದೆ.
ಜಿಎಸ್‌ಟಿ, ರೂಪಾಯಿ ಅಪಮೌಲ್ಯ, ವಿದೇಶಿ ಸಾಲ, ಲೋಕಪಾಲ ಮಸೂದೆ, ವಿದೇಶಿ ನೇರ ಹೂಡಿಕೆ, ಆಧಾರ್ ಯೋಜನೆ, ಮಹಾತ್ಮಗಾಂಧಿ ನರೇಗಾ, ಪೆಟ್ರೋಲ್ ಬೆಲೆ ಏರಿಕೆ, ಜಿಡಿಪಿ ಬೆಳವಣಿಗೆ ಎಲ್ಲವನ್ನೂ ಖಂಡತುಂಡವಾಗಿ ಖಂಡಿಸುತ್ತಿದ್ದರು!
ಆದರೆ, ಪ್ರಧಾನಿಯಾದ ನಂತರ, ಇದೆಲ್ಲಾ ವಿಚಾರಗಳಲ್ಲೂ ಯು ಟರ್ನ್ ಹೊಡೆದು ಜಿಎಸ್‌ಟಿ ಹೇರಿದರು, ಆಧಾರ್ ನಮ್ಮಿಂದಲೇ ಎಂದರು, ರೂಪಾಯಿ ಮೌಲ್ಯ ಕುಸಿತದ ಕುರಿತು ತುಟಿಬಿಚ್ಚುತ್ತಿಲ್ಲ, ವಿದೇಶಿ ಸಾಲ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ, ಲೋಕಪಾಲ ಮಸೂದೆ ಕಡೆ ಗಮನವೇ ಇಲ್ಲ. ಪೆಟ್ರೋಲ್ ಬೆಲೆ ಏರಿಕೆ, ಜಿಡಿಪಿ ಕುಸಿತ, ಹಣದುಬ್ಬರದ ಬಗ್ಗೆ ಸೊಲ್ಲೆತ್ತುತ್ತಿಲ್ಲ ಎಂದು ಮೋದಿ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ಮಾಡಿದೆ.
ಕಾಂಗ್ರೆಸ್ ಅವಧಿಯಲ್ಲಾದ ಅಭಿವೃದ್ಧಿ ಯೋಜನೆ, ಜನಪರ ಕಾರ್ಯಗಳನ್ನು ಟೀಕಿಸಿ ಈಗ ತಮ್ಮ ಅವಧಿಯಲ್ಲಿ ಆ ಯೋಜನೆಗಳನ್ನು ನಕಲು ಮಾಡಿ ಹೆಸರು ಬದಲಿಸಿದ್ದೇ ಮೋದಿ ಸರ್ಕಾರದ ಸಾಧನೆಯೇ..? ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.