ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಲ್ ಜೀವನ್‌ಮಿಷನ್‌ಯೋಜನೆ ಪ್ರಾರಂಭಕ್ಕೂ ಮುನ್ನ ರಾಜ್ಯದ 101.30ಲಕ್ಷ ಗ್ರಾಮೀಣ ವಸತಿಗಳ ಪೈಕಿ ಕೇವಲ 24.51 ಲಕ್ಷ (ಶೇ. 24.20) ವಸತಿಗಳಿಗೆ ಕೊಳವೆ ನೀರಿನ ಸೌಲಭ್ಯ ಲಭ್ಯವಿತ್ತು. ಇದೇ ರೀತಿಯ ವಾತಾವರಣ ದೇಶದ ವಿವಿಧ ರಾಜ್ಯಗಳಲ್ಲಿತ್ತು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು. ಭಾರತದ ಗ್ರಾಮೀಣ ವಸತಿಗಳಿಗೆ ಶುದ್ಧ ಹಾಗೂ ಸುರಕ್ಷಿತ ನೀರನ್ನು ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಲ್ ಜೀವನ ಮಿಷನ್‌ಯೋಜನೆಯನ್ನು ಸಾಕಾರಗೊಳಿಸಿ, ದಿನಾಂಕ 15.08.2019 ರಂದು ಘೋಷಿಸಿದರು. ಅಂದಿನಿಂದ ಈವರೆಗೆ ರಾಜ್ಯದ ಗ್ರಾಮೀಣ ವಸತಿಗಳಲ್ಲಿ ನೀರಿನ ಸೌಲಭ್ಯದಲ್ಲಿ ಗಣನೀಯ ಪ್ರಗತಿ ಕಂಡಿದೆ ಎಂದು ಸೋಮಣ್ಣ ತಿಳಿಸಿದರು.
ಭಾರತ ಸರ್ಕಾರದ ನಿರಂತರ ಬೆಂಬಲ ಹಾಗೂ ಸೂಕ್ತ ಮಾರ್ಗದರ್ಶನದಿಂದಾಗಿ ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆ ಮೂಲಕ ನೀರಿನ ಸಂಪರ್ಕ ಶೇಕಡ 86.34% ಕ್ಕೆ ಏರಿದೆ.
ತೆಲಂಗಾಣ, ಗೋವಾ, ಹರಿಯಾಣ, ಗುಜರಾತ್, ಪಂಜಾಬ್, ಹಿಮಾಚಲ್ ಪ್ರದೇಶ, ಅರುಣಾಚಲ್ ಪ್ರದೇಶ, ಉತ್ತರಾಖಂಡ್, ಮಿಜೋರಾಂ, ಪುದುಚೇರಿ, ದಾದರ್ ಮತ್ತು ನಾಗರ್ ಹಾವೇಲಿ, ದಿಯು & ದಮನ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಂತಹ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಗ್ರಾಮೀಣ ಪ್ರದೇಶದ ವಸತಿಗಳಿಗೆ ಶೇಕಡ 100ರಷ್ಟು ಶುದ್ಧ ಕೊಳವೆ ನೀರಿನ ಸಂಪರ್ಕ ಕಲ್ಪಿಸುವ ಸಾಧನೆಗೈದಿದೆ. ಆದರೆ ಕೇಂದ್ರ ಸರ್ಕಾರದ ಮಾರ್ಗದರ್ಶನ ಹಾಗೂ ಬೆಂಬಲದ ಹೊರತಾಗಿಯೂ ನಿಗದಿತ ಸಮಯದಲ್ಲಿ ಕರ್ನಾಟಕದಲ್ಲಿ ಈ ಸಾಧನೆಗೈಯಲು ವಿಫಲವಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ಭಾರತ ಸರ್ಕಾರದಿಂದ ಹಂಚಿಕೆಯಾದ ಅನುದಾನಕ್ಕೆ ತಕ್ಕ, ತನ್ನ ಪಾಲಿನ ಮ್ಯಾಚಿಂಗ್ ಅನುದಾನ ಬಿಡುಗಡೆ ಮಾಡದ ಕಾರಣದಿಂದಾಗಿ ಕರ್ನಾಟಕ ಇಂತಹ ಸಾಧನೆ ಮಾಡಲು ವಿಫಲವಾಗಿದೆ. 2019-20 ಹಾಗೂ 2024-25ರ ಅವಧಿಯಲ್ಲಿ ಭಾರತ ಸರ್ಕಾರವು ಕರ್ನಾಟಕ ರಾಜ್ಯಕ್ಕೆ 28,623.89 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಿದ್ದು, ರಾಜ್ಯ ಸರ್ಕಾರ ಕೇವಲ 11,760 ರೂಗಳನ್ನು ಮಾತ್ರ ಪಡೆಯುವಲ್ಲಿ ಸಾಧ್ಯವಾಗಿದೆ. ಏಕೆಂದರೆ ರಾಜ್ಯ ಸರ್ಕಾರ ಈ ಅವಧಿಯಲ್ಲಿ ಮಾಡಿದ ಖರ್ಚು ಕೇವಲ 11,097.92 ಕೋಟಿ ರೂ.ಗಳು ಮಾತ್ರ).
ಜಲ್ ಜೀವನ್‌ಮಿಷನ್‌ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರವು 69,487.60 ಕೋಟಿ ವೆಚ್ಚದ 66,344 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳ ಪೈಕಿ ಮಾರ್ಚ್ 2024ರ ತನಕವೂ 1,716.60 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮಂಜೂರಾತಿ ಆದೇಶ ನೀಡಿರುವುದಿಲ್ಲ. ಪ್ರಗತಿಯಲ್ಲಿರುವ 66,344 ಯೋಜನೆಗಳ ಪೈಕಿ ಯೋಜನಾ ಅವಧಿಯಲ್ಲಿ(31.03.2024 ರವರೆಗೆ) ಕೇವಲ 24,888 (ಶೇ. 37.50) ಯೋಜನೆಗಳು ಭೌತಿಕವಾಗಿ ಮುಗಿದಿದ್ದು, ಆರ್ಥಿಕವಾಗಿ ಕೇವಲ 9,325 (ಶೇ. 14.05) ಯೋಜನೆಗಳು ಮಾತ್ರ ಪೂರ್ಣಗೊಂಡಿವೆ.
ಕರ್ನಾಟಕ ಸರ್ಕಾರವು ಭಾರತ ಸರ್ಕಾರದೊಂದಿಗೆ ಸೂಕ್ತ ಸಹಕಾರ ಹಾಗೂ ಸಮಯ ಸಮನ್ವಯದೊಂದಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಕರ್ನಾಟಕ ರಾಜ್ಯವು ಸಹ ಇತರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಂತೆ ಗ್ರಾಮೀಣ ವಸತಿಗಳಲ್ಲಿ ಶೇಕಡ 100ರಷ್ಟು ಕೊಳವೆ ಮೂಲಕ ಶುದ್ಧ ನೀರಿನ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗುತ್ತಿತ್ತು.
ಗ್ರಾಮೀಣ ಪ್ರದೇಶದ ವಸತಿಗಳಿಗೆ ಕೊಳವೆ ಮೂಲಕ ನೀರು ಒದಗಿಸುವುದು ರಾಜ್ಯ ಸರ್ಕಾರದ ವಿಷಯವಾಗಿದೆ. ಅದಾಗ್ಯೂ, ಭಾರತ ಸರ್ಕಾರವು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ನೂರರಷ್ಟು ಸಾಧನೆಗೈಯುವಲ್ಲಿ ಬೆಂಬಲವಾಗಿ ನಿಲ್ಲಲು ಸದಾ ಬದ್ಧವಾಗಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.

