ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರು ತಪ್ಪಿಸಿಕೊಂಡು ಹೋಗಲು ಅವರು ಕಾಂಗ್ರೆಸ್ ನಾಯಕರಲ್ಲ! ಅವರು ಜನರಿಂದ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಚುನಾಯಿತರಾದ ಹೆಮ್ಮೆಯ ನಾಯಕರು ಎಂದು ವಿಪ ಶಾಸಕ ಸಿ.ಟಿ ರವಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಯಾವ ದಿನ ಲೋಕಸಭೆಯಲ್ಲಿ ಪ್ರಧಾನಿ ಭಾಷಣ ಮಾಡಲಿಲ್ಲ ಎಂದು ಸಿದ್ದರಾಮಯ್ಯ ದೂರುತ್ತಿದ್ದಾರೋ, ಅದೇ ದಿನ ರಾಜ್ಯಸಭೆಯಲ್ಲಿ ಪ್ರಧಾನಿಯವರು ಕಾಂಗ್ರೆಸ್ ಪಕ್ಷದ ದುಷ್ಟಕೂಟಗಳ ಕುರಿತು ದೇಶದ ಮುಂದೆ ವಿಷದವಾಗಿ ವಿವರಿಸಿ, ಕಾಂಗ್ರೆಸಿನ ಬಣ್ಣ ಬಯಲು ಮಾಡಿದ್ದರು. ಬಹುಶಃ ಸಿದ್ದರಾಮಯ್ಯನವರಿಗೆ ಜಾಣ ಕಿವುಡಿರುವುದರಿಂದ ಆ ದಿನದ ಪ್ರಧಾನಿಯವರ ಭಾಷಣ ಕೇಳಿಸಿರಲಿಲ್ಲವೇನೋ! ಎಂದು ಸಿಟಿ ರವಿ ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷಗಳು ಪ್ರಧಾನ ಮಂತ್ರಿ ಲೋಕಸಭೆಗೆ ಬಂದರೆ, ಅವರ ವಿರುದ್ಧ ಏನು ಮಾಡಬಹುದು, ಹೇಗೆ ಹಲ್ಲೆ ಮಾಡಬಹುದು ಎಂಬ ಕುರಿತು ಚರ್ಚೆ ನಡೆಸಿರುವ ಅಂಶಗಳು ಈಗಾಗಲೇ ಬಯಲಿಗೆ ಬಂದಿದ್ದು, ಸ್ಪೀಕರ್ ಓಮ್ ಬಿರ್ಲಾ ಅವರು ಪ್ರಧಾನಿಯವರನ್ನು ಲೋಕಸಭೆಗೆ ಬರದಂತೆ ಆಗ್ರಹಿಸಿ, ಪ್ರಧಾನಿಯವರ ಸುರಕ್ಷತೆಯ ಕುರಿತು ಆತಂಕ ವ್ಯಕ್ತಪಡಿಸಿದ್ದರು.
ಸ್ವತಃ ಸದನದ ಬಾವಿಗಿಳಿದು, ಗಲಭೆ ಎಬ್ಬಿಸಿ, ಶತಾಯಗತಾಯ ಅಧಿಕಾರ ಪಡೆಯಲೇಬೇಕೆಂದು ಹೆಣಗುತ್ತಿರುವ ಕಾಂಗ್ರೆಸ್ ನಾಯಕರು ಈಗ ನಾವು ಪ್ರಧಾನಿಯವರ ಮೇಲೆ ಹಲ್ಲೆ ನಡೆಸುವ ಉದ್ದೇಶ ಹೊಂದಿರಲಿಲ್ಲ ಎಂದರೆ ಅದನ್ನು ನಂಬುವ ಸ್ಥಿತಿಯಲ್ಲಿ ಭಾರತೀಯರಿಲ್ಲ. ಪ್ರಧಾನಿ ಮೋದಿ ಭಾರತೀಯರ ಹೃದಯ ಸಿಂಹಾಸನದಲ್ಲಿದ್ದಾರೆ. ಅವರ ಮೇಲೆ ಹಲ್ಲೆ ನಡೆಸುವ ಪ್ರಯತ್ನವನ್ನು ದೇಶ ಕ್ಷಮಿಸಲು ಸಾಧ್ಯವಿಲ್ಲ ಎಂದು ರವಿ ಅವರು ಟೀಕಾಪ್ರಹಾರ ಮಾಡಿದರು.
ಇನ್ನೂ ಬಿಡುಗಡೆಯೇ ಆಗಿರದ ಜನರಲ್ ನರವಣೆ ಅವರ ಪುಸ್ತಕವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಯಾವ ಆಧಾರದಲ್ಲಿ ಮಾತನಾಡಿದರು? ರಾಷ್ಟ್ರೀಯ ಭದ್ರತೆಯ ಕುರಿತು ಸಾರ್ವಜನಿಕವಾಗಿ ಮಾತನಾಡುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎನ್ನುವುದು ರಾಹುಲ್ ಗಾಂಧಿಗೆ ಅರಿವಿಲ್ಲವೇ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ನಿಜಕ್ಕೂ ಹೆದರಿಕೊಂಡಿರುವುದು ಯಾರು ಎನ್ನುವುದು ಸಮಸ್ತ ದೇಶಕ್ಕೇ ಅರಿವಿದೆ. ಮೋದಿಯವರನ್ನು ಎದುರಿಸಿ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವೇ ಇಲ್ಲ ಎನ್ನುವುದು ದೇಶಾದ್ಯಂತ ಸೋತಿರುವ ಕಾಂಗ್ರೆಸ್ ಪಕ್ಷಕ್ಕೆ ಎಲ್ಲರಿಗಿಂತ ಚೆನ್ನಾಗಿ ಗೊತ್ತು.
ಈಗಾಗಲೇ ದೇಶಾದ್ಯಂತ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡು, ಪ್ರಾದೇಶಿಕ ಪಕ್ಷದಂತಾಗಿದೆ. ಈಗ ಸಿದ್ದರಾಮಯ್ಯನವರು ಮೋದಿ ಹೆದರಿಕೊಂಡರು ಎನ್ನುವ ಮಾತುಗಳನ್ನಾಡುವುದು ಹಾಸ್ಯಾಸ್ಪದವಲ್ಲದೆ ಇನ್ನೇನೂ ಅಲ್ಲ!
ಮುಂಬರುವ ಪಶ್ಚಿಮ ಬಂಗಾಳ, ಅಸ್ಸಾಂ ಚುನಾವಣೆಗಳಿಗೆ ಕಪ್ಪ ಸಲ್ಲಿಸಬೇಕಿರುವ, ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳಲು ಹೈಕಮಾಂಡ್ ಮುಂದೆ ಕೈಕಟ್ಟಿ ನಿಂತಿರುವವರು ಮೋದಿಯವರನ್ನು ಟೀಕಿಸುತ್ತಿರುವುದು ಈ ಶತಮಾನದ ವ್ಯಂಗ್ಯ! ಎಂದು ಸಿಟಿ ರವಿ ಟೀಕಿಸಿದ್ದಾರೆ.

